Tunga river | ತುಂಗಾ ನದಿ ನೀರಿನಲ್ಲಿ‌ ಅಲ್ಯೂಮಿನಿಯಂ ಅಂಶ ಪತ್ತೆ, ನಡೆಯಲಿದೆ ತಜ್ಞರಿಂದ ಸಂಶೋಧನೆ

Korpalayyan mantapa tunga river

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ನಗರದ ಪಾಲಿಗೆ ಜೀವನದಿಯಂತಿರುವ ತುಂಗಾ ನದಿ(Tunga river)ಯಲ್ಲಿ ಅಲ್ಯೂಮಿನಿಯಂ ಅಂಶ (aluminum content) ಪತ್ತೆಯಾಗಿದ್ದು, ಇದನ್ನು ಮಹಾನಗರ ಪಾಲಿಕೆ (shivamogga city corporation) ಹಾಗೂ ಜಿಲ್ಲಾಡಳಿತ (shivamogga district administration) ಗಂಭೀರವಾಗಿ ಪರಿಗಣಿಸಿದೆ. ತಜ್ಞರಿಂದ ಸಂಶೋಧನೆ ನಡೆಯಲಿದೆ.
ತುಂಗಾ ನದಿ ಮಲೀನಕ್ಕೆ ಕಾರಣವಾದ ನಿರ್ದಿಷ್ಟ ಅಂಶಗಳನ್ನು ಪತ್ತೆ ಹಚ್ಚಲು ತಜ್ಞರಿಂದ ನೀರಿನ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಅಧ್ಯಯನ ಮಾಡಿ ಮೂರು ತಿಂಗಳಲ್ಲಿ ಸಂಪೂರ್ಣ ವರದಿ ನೀಡಲು ಮನವಿ ಮಾಡಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡ ತಿಳಿಸಿದರು.

READ |  ಅಡಿಕೆ ಸುಲಿಯುವ ಯಂತ್ರಕ್ಕೆ ಮೀಟರ್ ಹೊರೆ, ಸಿಎಂ, ಇಂಧನ ಸಚಿವರಿಗೆ ಬರೆದ ಪತ್ರದಲ್ಲಿ ಏನಿದೆ?

ನಗರ ಪಾಲಿಕೆಯ ಕೊನೆಯ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ತುಂಗಾ ನದಿಯಲ್ಲಿ ಅಲ್ಯೂಮಿನಿಯಂ ಅಂಶ ಇರುವುದು ಗಮನಕ್ಕೆ ಬಂದಾಗ, ಎಲ್ಲ ವಿಭಾಗಗಳೊಂದಿಗೆ ಚರ್ಚೆ ಮಾಡಿ, 9 ಕಡೆ ನೀರಿನ ಸ್ಯಾಪಲ್ ಸಂಗ್ರಹಿಸಿ ಕೊನೆಗೆ ಗಾಜನೂರು ಡ್ಯಾಮ್ ನಿಂದಲೂ ಸಂಗ್ರಹಿಸಿದಾಗ ಎಲ್ಲ ಕಡೆಯೂ ಅಲ್ಯೂಮಿನಿಯಂ ಅಂಶ ಇರುವುದು ಖಾತರಿಯಾಗಿದೆ. ಈಗ ನೀರಿನ ಮೂಲದಲ್ಲಿ ಶೃಂಗೇರಿಯವರೆಗೆ ಮತ್ತು ಭದ್ರಾ ನದಿಯ ಮೂಲದಲ್ಲೂ ಕೂಡ ದೊಡ್ಡ ಮಟ್ಟದಲ್ಲಿ ತಜ್ಞರಿಂದ ಮೂಲವನ್ನು ಪರೀಕ್ಷಿಸಲು ಕ್ರಮಕೈಗೊಳ್ಳಲಾಗಿದ್ದು, ಪರಿಣಿತರು ನೀರಿನ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಅಧ್ಯಯನ ಮಾಡಿ ಮೂರು ತಿಂಗಳಿನಲ್ಲಿ ಸಂಪೂರ್ಣ ವರದಿ ನೀಡುವುದಾಗಿ ತಿಳಿಸಿದ್ದಾರೆ. ಇದಕ್ಕಾಗಿ ₹30 ಲಕ್ಷ ವೆಚ್ಚವಾಗಲಿದ್ದು, ಪಾಲಿಕೆ ಅದನ್ನು ಭರಿಸಲಿದೆ ಎಂದರು.
11 ಎಂಎಲ್.ಡಿ ಕೊಳಚೆ ನೀರು
ಪರಿಸರ ಪ್ರೇಮಿಗಳು, ಜಿಲ್ಲಾಧಿಕಾರಿ ಹಾಗೂ ಸಂಬಂಧ ಪಟ್ಟ ವಿವಿಧ ವಿಭಾಗಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ನಗರದಲ್ಲಿ 37 ಎಂಎಲ್‌ಡಿ ಕೊಳಚೆ ನೀರು ಬರುತ್ತಿದ್ದು, ಕೇವಲ 11 ಎಂಎಲ್‌ಡಿ ನೀರು ಮಾತ್ರ ಎಸ್‌ಟಿಪಿ ಶುದ್ಧೀಕರಣ ಘಟಕಕ್ಕೆ ಹೋಗುತ್ತಿದೆ. ಆದರೆ ಉಳಿದ ನೀರು ಎಲ್ಲಿಗೆ ಹೋಯಿತು? ಎನ್ನುವುದು ಪತ್ತೆ ಹಚ್ಚಬೇಕಿದೆ ಎಂದು ತಿಳಿಸಿದರು.
ಮಳೆ ಹಾಗೂ ಮನೆಯ ಕೊಳಚೆ ನೀರು ಯುಜಿಡಿಗೆ ಬಿಡಲಾಗುತ್ತಿದೆ. ಇನ್ನೂ ಶೇ.30ರಷ್ಟು ಜನ ಯುಜಿಡಿ ಸಂಪರ್ಕ ಹೊಂದಿಲ್ಲ. ಒಳಚರಂಡಿ ವಿಭಾಗ ಐದು ಹಂತದಲ್ಲಿ ಮಲೀನ ನೀರನ್ನು ಬೇರ್ಪಡಿಸಿ ಶುದ್ಧಿಕರಣಗೊಳಿಸಿ ಬಳಿಕ ತುಂಗೆಗೆ ಬಿಡುವ ಕಾರ್ಯ ಮಾಡಬೇಕು. ಈ ಬಗ್ಗೆ ಅನೇಕ ಚರ್ಚೆಗಳು ಈಗಾಗಲೇ ಜರುಗಿವೆ. ಸೂಕ್ತ ಯೋಜನೆ ನಿರ್ಮಿಸಿ ಸಮಸ್ಯೆ ಬಗೆಹರಿಸಲು 15 ದಿನಗಳ ಗಡವು ಈಗಾಗಲೇ ಡಿಸಿಯವರು ನೀಡಿದ್ದಾರೆ. ಆದರೆ, ಅದು ಕಾರ್ಯರೂಪಕ್ಕೆ ಬರಲು ತಿಂಗಳುಗಳೇ ಹಿಡಿಯುತ್ತದೆ ಎಂದರು.
9ರಲ್ಲಿ ಐದು ವೆಟ್ ವೆಲ್‌ ಕಾರ್ಯಾರಂಭ
ಒಳಚರಂಡಿ ವಿಭಾಗದ ಅಧಿಕಾರಿ ಮಿಥುನ್‌ ಕುಮಾರ್ ಮಾತನಾಡಿ, ರಾಜಕಾಲುವೆಯ ಬಳಿ 9 ಕಡೆ ಮಲೀನ ನೀರು ಸಂಗ್ರಹಿಸಿ, ತ್ಯಾಜ್ಯವನ್ನು ಬೇರ್ಪಡಿಸಿ ರಾಜ ಕಾಲುವೆಗೆ ಬಿಡಲು 9 ವೆಟ್‌ವೆಲ್‌ಗಳ ನಿರ್ಮಾಣ ಮಾಡಲಾಗಿದೆ. ಈಗಾಗಲೇ 5 ಕಾರ್ಯಾರಂಭಿಸಿವೆ. ತುಂಗಾ ನದಿ ಬಲಭಾಗದ ಕೊಳಚೆ ನೀರು ಪುರಲೆಯ ಶುದ್ಧಿಕರಣ ಘಟಕಕ್ಕೆ ಬರುತ್ತಿದೆ. ಹಲವಾರು ಕಡೆ ಬೇಸಿಗೆ ಮತ್ತು ಚಳಿಗಾಲದಲ್ಲಿ ನೇರವಾಗಿ ಕಲುಷಿತ ನೀರು ರಾಜಕಾಲುವೆಗೆ ಬಿಡುತ್ತಿದ್ದಾರೆ. ಮೂರನೇ ಹಂತದ ಒಳಚರಂಡಿ ಯೋಜನೆ ಪೈಪ್ ಅಳವಡಿಕೆ ಕೆಲವೊಂದು ಖಾಸಗಿ ಜಾಗದಲ್ಲಿ ಹೋಗಬೇಕಾಗಿರುವುದರಿಂದಲೂ ಕಾಮಗಾರಿಗೆ ಹಿನ್ನಡೆಯಾಗಿದೆ ಎಂದು ತಿಳಿಸಿದರು.
ಪಾಲಿಕೆ‌ ಮೇಯರ್ ಶಿವಕುಮಾರ, ಉಪ ಮೇಯರ್ ಲಕ್ಷ್ಮೀ ಶಂಕರ್ ನಾಯ್ಕ್ ಪಾಲಿಕೆಯ ಸದಸ್ಯರು ಉಪಸ್ಥಿತರಿದ್ದರು.

error: Content is protected !!