ಸುದ್ದಿ ಕಣಜ.ಕಾಂ ಶಿವಮೊಗ್ಗ/ ತೀರ್ಥಹಳ್ಳಿ
SHIVAMOGGA: ಅಡಿಕೆ ಸುಲಿಯುವ ಯಂತ್ರಕ್ಕೆ ಮೀಟರ್ ಅಳವಡಿಕೆ ಸಂಬಂಧಿಸಿದಂತೆ ಸಣ್ಣ ಗೊಂದಲ ಉಂಟಾಗಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಪತ್ರ ಬರೆಯಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ತಿಳಿಸಿದ್ದಾರೆ.
READ | ಅಡಿಕೆ ಮರದಿಂದ ಸೋಫಾ ಸೆಟ್, ಕಾಯಿಲೆಯಿಂದ ಹೊಳೆದ ಐಡಿಯಾ ಈಗ ಸಕ್ಸಸ್
ಅಡಿಕೆ ಸುಲಿಯುವ ಯಂತ್ರಕ್ಕೆ ಉಚಿತ ವಿದ್ಯುತ್ ಕೊಡುವಂತೆ ಪತ್ರದಲ್ಲಿ ಕೋರಲಾಗಿದೆ. ಜಿಲ್ಲೆಯಲ್ಲಿ ಅಡಿಕೆ ಮುಖ್ಯ ಬೆಳೆಯಾಗಿದ್ದು, ಪ್ರಸ್ತುತ ಅಡಿಕೆ ಬೆಳೆಯು ಕಟಾವು ನಡೆಯುತ್ತಿದೆ. ಮಧ್ಯಮ, ಸಣ್ಣ ಮತ್ತು ಅತೀ ಸಣ್ಣ ರೈತರು ಇತ್ತೀಚಿನ ವರ್ಷಗಳಲ್ಲಿ 2 ಬೆಲ್ಟ್‍ನ ಅಡಿಕೆ ಸುಲಿಯುವ ಯಂತ್ರವನ್ನು ಗೃಹ ಬಳಕೆಯ ವಿದ್ಯುತ್‍ನಲ್ಲಿ ಬಳಸುತ್ತಿದ್ದು, ಇತ್ತೀಚೆಗೆ ಇಂಧನ ಇಲಾಖೆಯಿಂದ ರೈತರು ಬಳಸುವ ಅಡಿಕೆ ಸುಲಿಯುವ ಯಂತ್ರಕ್ಕೆ ಪ್ರತ್ಯೇಕ ಮೀಟರ್ ಅಳವಡಿಸಲು ಸರ್ಕಾರದಿಂದ ಆದೇಶ ಹೊರಡಿಸಿರುವುದಾಗಿ ತಿಳಿದುಬಂದಿದೆ. ಇದರಿಂದ ರೈತರು ಈ ವಿಚಾರವಾಗಿ ಕಳವಳಗೊಂಡಿದ್ದಾರೆ ಎಂದು ಮಧು ತಿಳಿಸಿದ್ದಾರೆ.
ಅಡಿಕೆ ಸುಲಿಯುವ ಯಂತ್ರವು ವರ್ಷದಲ್ಲಿ 2-3 ತಿಂಗಳು ಮಾತ್ರ ಬಳಕೆಯಾಗುತ್ತದೆ. ಉಳಿದ ಸಮಯದಲ್ಲಿ ಯಂತ್ರದ ಅವಶ್ಯಕತೆ ಇರುವುದಿಲ್ಲ. ಆದುದರಿಂದ ಅಡಿಕೆ ಬೆಳೆಯುವ ರೈತರ ಹಿತದೃಷ್ಟಿಯಿಂದ ಪ್ರತ್ಯೇಕ ಮೀಟರ್ ಅಳವಡಿಸುವ ಆದೇಶವನ್ನು ಹಿಂಪಡೆಯುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ರಾಜಕೀಯ ಜಟಾಪಟಿ
ಮಲೆನಾಡು ಭಾಗದಲ್ಲಿ ಕಳೆದ ಹಲವು ದಿನಗಳಿಂದ ಅಡಿಕೆ ಕೊಯ್ಲು ಆರಂಭವಾಗಿದೆ. ಕೆಲ ರೈತರು ಸಾಂಪ್ರದಾಯಿಕ ಪದ್ದತಿಯಲ್ಲಿ ಅಡಿಕೆ ಸುಲಿದರೇ, ಇನ್ನು ಕೆಲವು ರೈತರು ಯಂತ್ರ ಬಳಸಿ, ಅಡಿಕೆ ಸುಲಿಸುತ್ತಿದ್ದಾರೆ. ಈ ಅಡಿಕೆ ಸುಲಿಯುವ ಯಂತ್ರಗಳಿಗೆ ಪ್ರತ್ಯೇಕ ಮೀಟರ್ ಅಳವಡಿಕೆ ಸಂಬಂಧ ಮೆಸ್ಕಾಂ ಅಧಿಕಾರಿಗಳು ಹೊಸ ಸೂಚನೆ ನೀಡುತ್ತಿದ್ದು, ಇದು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.
ರಾಜ್ಯ ಸರ್ಕಾರ ರೈತರಿಂದಲೂ ಸುಲಿಗೆಗೆ ಮುಂದಾಗಿದೆ ಎಂದು ತೀರ್ಥಹಳ್ಳಿಯಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದ್ದಾರೆ.
ಶಾಸಕ ಆರಗ ನೇತೃತ್ವದಲ್ಲಿ ಪ್ರತಿಭಟನೆ
ಮಾಜಿ ಗೃಹ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ತೀರ್ಥಹಳ್ಳಿ ಕೊಪ್ಪ ಸರ್ಕಲ್ ನಿಂದ ಮೆಸ್ಕಾಂ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೈತರ ಮಕ್ಕಳ ವಿದ್ಯಾನಿಧಿ ಯೋಜನೆ ಸೇರಿದಂತೆ ಹಲವು ಯೋಜನೆ ತಡೆಹಿಡಿದಿದ್ದಾರೆ. ಈಗ ಅಡಿಕೆ ಸುಲಿಯುವ ಯಂತ್ರದ ಮೂಲಕವೂ ರೈತರನ್ನು ಸುಲಿಗೆ ಮಾಡಲು ತಯಾರಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮಧು ಬಂಗಾರಪ್ಪ ಹೇಳಿದ್ದೇನು?
ಆರಗ ಜ್ಞಾನೇಂದ್ರ ಅವರು ಪ್ರತಿಭಟನೆ ಮಾಡುತ್ತಿರುವುದು ಯಾವ ಕಾರಣಕ್ಕೆ? 2018ರಲ್ಲಿ ತೀರ್ಥಹಳ್ಳಿಯಲ್ಲಿ ಅಡಿಕೆ ಬೆಳೆಗಾರರ ಸಮಾವೇಶ ಮಾಡಿ, ಅಡಿಕೆ ಸಂಶೋಧನಾ ಕೇಂದ್ರ ಆರಂಭಿಸುವ ಭರವಸೆಯನ್ನು ಗೃಹ ಸಚಿವ ಅಮಿತ್ ಶಾ ನೀಡಿದ್ದರು. ಇದುವರೆಗೆ ಅದು ಈಡೇರಿಲ್ಲ. ಅಡಿಕೆ ಸುಲಿಯುವ ಯಂತ್ರವನ್ನು ಮಲೆನಾಡು ಭಾಗದ ರೈತರು ಬಳಸುವುದೇ ವರ್ಷದಲ್ಲಿ 2-3 ತಿಂಗಳು ಮಾತ್ರ. ಹೀಗಿರುವಾಗ ಪ್ರತ್ಯೇಕ ಮೀಟರ್ ಅಳವಡಿಕೆ ವಿಚಾರದಲ್ಲಿ ರಾಜಕೀಯ ಕೆಸರೆರಚಾಟ ನಡೆಸದೇ ರೈತರ ಪರವಾಗಿ ಸ್ಪಷ್ಟ ನಿರ್ಧಾರ ಕೈಗೊಳ್ಳಲಿ ಎಂದು ತಿಳಿಸಿದರು.
Jumping spider | ಪಶ್ಚಿಮಘಟ್ಟದಲ್ಲಿ ಹೊಸ ಪ್ರಭೇದದ ‘ಜಂಪಿಂಗ್ ಸ್ಪೈಡರ್’ ಪತ್ತೆ