ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ದರೋಡೆ ಮಾಡಿದ ಪ್ರಕರಣ ಆರು ಜನರ ವಿರುದ್ಧದ ಆರೋಪಗಳು ದೃಢಪಟ್ಟ ಹಿನ್ನೆಲೆಯಲ್ಲಿ ಅವರಿಗೆ ಶಿಕ್ಷೆ ವಿಧಿಸಿ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗ ಪೀಠಾಸೀನ ಭದ್ರಾವತಿಯಲ್ಲಿ ತೀರ್ಪು ನೀಡಿದೆ.
READ | ಸಿಡಿಲು ಬಡಿದು ಇಬ್ಬರು ಸಹೋದರರ ದಾರುಣ ಸಾವು
2019ರ ಮಾರ್ಚ್ 5ರಂದು ರಾತ್ರಿ ಭದ್ರಾವತಿಯ ಲಕ್ಕಿನಕೊಪ್ಪ ಕ್ರಾಸ್ ಹತ್ತಿರ 6 ಜನ ಅಪರಿಚಿತರು 2 ಬೈಕ್ ಗಳಲ್ಲಿ ಬಂದು ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳನ್ನು ತೋರಿಸಿ, ಬೆದರಿಕೆ ಹಾಕಿ ₹20,000 ನಗದು, ಐ-ಪಾಡ್ ಮತ್ತು ಐ-ಫೋನ್ ಅನ್ನು ದರೋಡೆ ಮಾಡಿಕೊಂಡು ಹೋಗಿದ್ದರು. ಅದೇ ದಿನ ರಾತ್ರಿ ಭದ್ರಾವತಿಯ ಎಚ್.ಕೆ.ಜಂಕ್ಷನ್ ಹತ್ತಿರ 6 ಜನ ಅಪರಿಚಿತರು 2 ಬೈಕ್ ಗಳಲ್ಲಿ ಬಂದು ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳನ್ನು ತೋರಿಸಿ, ಬೆದರಿಕೆ ಹಾಕಿ ₹500 ನಗದು ಮತ್ತು ಮೊಬೈಲ್ ಫೋನ್ ಅನ್ನು ದರೋಡೆ ಮಾಡಿಕೊಂಡು ಹೋಗಿರುತ್ತಾರೆಂದು ನೊಂದವರು ನೀಡಿದ ದೂರಿನ ಮೇರೆಗೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಎರಡು ಪ್ರಕರಣಗಳು ದಾಖಲಾಗಿದ್ದವು.
ಆಗಿನ ತನಿಖಾಧಿಕಾರಿ ಭದ್ರಾವತಿ ಗ್ರಾಮಾಂತರ ವೃತ್ತ ಸಿಪಿಐ ಕೆ.ಎಂ. ಯೋಗೇಶ್ ಎರಡೂ ಪ್ರಕರಣಗಳ ತನಿಖೆ ಪೂರೈಸಿ, ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ಪ್ರತ್ಯೇಕವಾಗಿ ದೋಷಾರೋಪಣಾ ಪತ್ರಗಳನ್ನು ಸಲ್ಲಿಸಿದ್ದರು.
ವಿಚಾರಣೆ ನಡೆಸಿರುವ ನ್ಯಾಯಾಧೀಶ ಆರ್.ವೈ.ಶಶಿಧರ್ ಅವರು ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಬುಧವಾರ ತೀರ್ಪು ನೀಡಿದರು. ಸರ್ಕಾರಿ ಅಭಿಯೋಜಕಿ ರತ್ನಮ್ಮ ವಾದ ಮಂಡಿಸಿದ್ದರು.
ಯಾರಿಗೆಲ್ಲ ಶಿಕ್ಷೆ?
ಭದ್ರಾವತಿಯ ಸಿದ್ದಾಪುರ ಗ್ರಾಮದ ಧೃವಕುಮಾರ್(22), ಈತನಿಗೆ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹5,000 ದಂಡ, ದಂಡ ಕಟ್ಟಲು ವಿಫಲನಾದಲ್ಲಿ 3 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ವೇಲೂರು ಜನ್ನಾಪುರದ ಸೈಯ್ಯದ್ ಇಮ್ರಾನ್(22), ಸಿದ್ದಾಪುರ ಗ್ರಾಮದ ಶಿವಕುಮಾರ್(24), ಸಚಿನ್(21), ವೇಲೂರು ಶೆಡ್ ನ ಯೋಗೇಶ್(24), ಹೊಸ ಸಿದ್ದಾಪುರ ಗ್ರಾಮದ ಗಿರೀಶ ಕುಮಾರ್(21) ಇವರಿಗೆ ತಲಾ 2 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ತಲಾ ₹5,000 ದಂಡ, ದಂಡ ಕಟ್ಟಲು ವಿಫಲರಾದಲ್ಲಿ 3 ತಿಂಗಳು ಸಾಧಾ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಲಾಗಿದೆ.