ಸುದ್ದಿ ಕಣಜ.ಕಾಂ
ಶಿವಮೊಗ್ಗ: ಆಗಸ್ಟ್’ನಲ್ಲಿ ಏರುಗತಿಯಲ್ಲಿದ್ದ ಕೊರೊನಾ ಶಿವಮೊಗ್ಗ ಜಿಲ್ಲೆಯಲ್ಲಿ ಶೇ.21ರಷ್ಟಿತ್ತು. ಸೆಪ್ಟೆಂಬರ್’ನಲ್ಲಿ ಶೇ.19ಕ್ಕೆ ಇಳಿಕೆ ಕಂಡಿತು. ಕ್ರಮೇಣ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದ್ದು, ನವೆಂಬರ್’ನಲ್ಲಿ ಸೋಂಕಿನ ಪ್ರಮಾಣ ಶೇ.2ಕ್ಕೆ (ಅಂದರೆ 100ಕ್ಕೆ ಇಬ್ಬರು) ತಲುಪಿದೆ.
ನಿರಂತರವಾಗಿ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದು, ಆಶಾದಾಯಕ ಬೆಳವಣಿಗೆಯಾಗಿದೆ. ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ 29 ಜನರಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. 2,635 ಮಾದರಿಗಳನ್ನು ಪರೀಕ್ಷೆಗೋಸ್ಕರ ಪಡೆಯಲಾಗಿದ್ದು, 2,279 ನೆಗೆಟಿವ್ ಬಂದಿವೆ. 28 ಜನ ಗುಣಮುಖರಾಗಿದ್ದಾರೆ.
* ಒಟ್ಟು 20,803ರಲ್ಲಿ 20,243 ಗುಣಮುಖ: ಶಿವಮೊಗ್ಗ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 20,803 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 20,243 ಜನ ಗುಣಮುಖರಾಗಿದ್ದಾರೆ.
ಒಟ್ಟು 3,155 ಬೆಡ್ಗಳ ವ್ಯವಸ್ಥೆ ಮಾಡಲಾಗಿದ್ದು, 152 ತೀವ್ರ ನಿಗಾ ಘಟಕದ ಬೆಡ್ ಹಾಗೂ 658 ಆಕ್ಸಿಜನ್ ಬೆಡ್ಗಳಿವೆ. 76 ವೆಂಟಿಲೇಟರ್ಗಳು ಲಭ್ಯವಿದೆ ಎಂದು ಡಿ.ಎಚ್.ಒ ಡಾ.ರಾಜೇಶ್ ಸುರಗೀಹಳ್ಳಿ ತಿಳಿಸಿದ್ದಾರೆ.
* ತಾಲೂಕುವಾರು: ಶಿವಮೊಗ್ಗ 10, ಭದ್ರಾವತಿ 4, ಶಿಕಾರಿಪುರ 7, ತೀರ್ಥಹಳ್ಳಿ 4, ಸೊರಬ, ಸಾಗರ, ಹೊಸನಗರ ತಲಾ 1 ಮತ್ತು ಹೊರ ಜಿಲ್ಲೆಯ 1 ಪ್ರಕರಣ ಮಂಗಳವಾರ ಹೊಸದಾಗಿ ಪತ್ತೆಯಾಗಿವೆ.