ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ನವದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಶಿವಮೊಗ್ಗ ಜಿಲ್ಲಾ ಎನ್ಎಸ್ಯುಐ ಬೆಂಬಲ ವ್ಯಕ್ತಪಡಿಸಿದೆ.
ದೆಹಲಿಯಲ್ಲಿ ಪ್ರತಿಭಟಿಸುತ್ತಿರುವ ರೈತ ಹೋರಾಟಗಾರರು ಕರೆ ನೀಡಿದಂತೆ, ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ಭಾಷಣ ಸಂದರ್ಭದಲ್ಲಿ ಶಿವಮೊಗ್ಗದ ಶಿವಪ್ಪನಾಯಕ ವೃತ್ತದಲ್ಲಿ ಜಿಲ್ಲಾ ಎನ್ಎಸ್ಯುಐ ಕಾರ್ಯಕರ್ತರು ವೃತ್ತದಲ್ಲಿ ತಟ್ಟೆ ಬಾರಿಸುವ ಮೂಲಕ ಬೆಂಬಲ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ನಡೀತು ಹೈರಿಸ್ಕ್ ಓಪನ್ ಹಾರ್ಟ್ ಸರ್ಜರಿ, ಯಾರ್ಯಾರಿಗೆ ಗೊತ್ತಾ?
ದೆಹಲಿ ರೈತರ ಹೋರಾಟಕ್ಕೆ ಬೆಂಬಲಿಸಿ ಮನ್ ಕಿ ಬಾತ್ ಸಂದರ್ಭದಲ್ಲಿ ತಟ್ಟೆ ಬಾರಿಸಿ ಪ್ರತಿಭಟಿಸುವಂತೆ ಭಾರತೀಯ ಕಿಸಾನ್ ಯೂನಿಯನ್ ಕರೆ ಕೊಟ್ಟಿತ್ತು. ಅದರಂತೆ ಪ್ರತಿಭಟನೆ ನಡೆಸಿದ ಜಿಲ್ಲಾ ಎನ್ಎಸ್ಯುಐ ಪದಾಧಿಕಾರಿಗಳು, ಕೃಷಿ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿದರು.
ದೆಹಲಿಯಲ್ಲಿ ಒಂದು ತಿಂಗಳಿಂದ ರೈತರು ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇಡಿ ದೇಶಾದ್ಯಂತ ಕೃಷಿ ಕಾಯ್ದೆಗಳನ್ನು ಕೈಬಿಡುವಂತೆ ಲಕ್ಷಾಂತರ ರೈತರು ಒತ್ತಾಯಿಸಿದರೂ ಕೇಂದ್ರ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳ ತಿದ್ದುಪಡಿಯಿಂದ ಸಣ್ಣ ಮತ್ತು ಅತಿ ಸಣ್ಣ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಾರೆ. ಕೇಂದ್ರ ಸರ್ಕಾರವು ಬಂಡವಾಳಶಾಹಿಗಳು ಹಾಗೂ ಉದ್ಯಮಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ತೀರ್ಮಾನ ತೆಗೆದುಕೊಳ್ಳುತ್ತಿದೆ ಎಂದು ದೂರಿದರು.
ವಿಡಿಯೋ ರಿಪೋರ್ಟ್ | ನಾಗರ ಹಾವುಗಳ ಮಧ್ಯೆ ಘನಘೋರ ಕಾಳಗ! ಸೆರೆಯಾಯ್ತು ಅಪರೂಪದ ದೃಶ್ಯ
ಎನ್ಎಸ್ಯುಐ ರಾಜ್ಯ ಉಪಾಧ್ಯಕ್ಷ ಕೆ.ಚೇತನ್, ಜಿಲ್ಲಾಧ್ಯಕ್ಷ ಎಚ್.ಎಸ್.ಬಾಲಾಜಿ, ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಧುಸೂದನ್, ಮಹಮದ್ ನಿಹಾಲ್, ಎನ್ಎಸ್ಯುಐ ಕಾರ್ಯಾಧ್ಯಕ್ಷ ವಿನಯ್, ನಗರಾಧ್ಯಕ್ಷ ವಿಜಯ್, ಗ್ರಾಮಾಂತರ ಅಧ್ಯಕ್ಷ ರವಿ, ವಿನ್ಯಾಸ್, ಮಂಜು ಪುರಲೆ, ಮಹಮದ್ ನಿಹಾಲ್, ಅಬ್ದುಲ್ ಸತ್ತರ, ಗಿರೀಶ್, ಶಿವು, ಭರತ್, ಸಂದೀಪ್, ಪ್ರಮೋದ್, ಆಕಾಶ್, ರವಿ, ಹೇಮಂತ್, ಸಂಜಯ್ ಉಪಸ್ಥಿತರಿದ್ದರು.