ಸುದ್ದಿ ಕಣಜ.ಕಾಂ
ಶಿವಮೊಗ್ಗ: ಗ್ರಾಹಕರ ಹಕ್ಕುಗಳನ್ನು ಉಲ್ಲಂಘಿಸಿ ತೂಕ ಮತ್ತು ಅಳತೆಯಲ್ಲಿ ವಂಚನೆ ಮಾಡಿದ ವ್ಯಾಪಾರಿ ಸಂಸ್ಥೆಗಳನ್ನು ಗುರುತಿಸಿ 913 ಮೊಕದ್ದಮೆಗಳನ್ನು ದಾಖಲಿಸಲಾಗಿದೆ.
ನ್ಯಾಯಬೆಲೆ ಅಂಗಡಿ, ಚಿಲ್ಲರೆ ಸೀಮೆ ಎಣ್ಣೆ ಮಾರಾಟಗಾರರು, ಸಗಟು ವ್ಯಾಪಾರಸ್ಥರು, ಗೊಬ್ಬರ ಮತ್ತು ಕ್ರಿಮಿನಾಶಕ ಮಾರಾಟಗಾರರ ಅಂಗಡಿಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿ, ತಪ್ಪಿತಸ್ಥರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.
– ಎಸ್.ಮಂಜುನಾಥ್, ಸಹಾಯಕ ನಿಯಂತ್ರಕ, ಕಾನೂನು ಮಾಪನಶಾಸ್ತ್ರ ಇಲಾಖೆ
ದೋಷಪೂರಿತ ತೂಕ, ಅಳತೆ ಪರಿಕರಗಳನ್ನು ಬಳಸಿ ವಂಚನೆ, ಎಂ.ಆರ್.ಪಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಹೀಗೆ ವಿವಿಧ ರೀತಿಯಲ್ಲಿ ಮೋಸ ಮಾಡಿದ ಹಿನ್ನೆಲೆ ಪ್ರಕರಣ ದಾಖಲಿಸಲಾಗಿದೆ.
10 ತಿಂಗಳಲ್ಲಿ 15,97,200 ರೂ. ದಂಡ: 2020ರ ಏಪ್ರಿಲ್ನಿಂದ 2021 ಜನವರಿ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 1,868 ವ್ಯಾಪಾರಸ್ಥರ ಹಾಗೂ ಕೈಗಾರಿಕಾ ಕೇಂದ್ರಗಳಿಗೆ ಹಠಾತ್ ಭೇಟಿ ನೀಡಲಾಗಿದೆ. ಇದಲ್ಲದೆ ವ್ಯಾಪಾರ, ವ್ಯವಹಾರ ನಡೆಸುವವರು ಬಳಸುವ ತೂಕ ಮತ್ತು ಅಳತೆ ಪರಿಕರಗಳ ಸತ್ಯಾಪನಾ ನಡೆಸಿ 1,05,26,436 ರೂ. ಶುಲ್ಕ ವಸೂಲಿ ಮಾಡಲಾಗಿದೆ.
ವಂಚನೆ ಆರೋಪದಲ್ಲಿ ದಾಖಲಾದ ಮೊಕದ್ದಮೆಗಳ ಪೈಕಿ 911 ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥ ಪಡಿಸಿ, ತಪ್ಪಿತಸ್ಥರಿಂದ 15,97,200ರೂ. ದಂಡ ವಸೂಲಿ ಮಾಡಲಾಗಿದೆ.