ಸುದ್ದಿ ಕಣಜ.ಕಾಂ
ಶಿವಮೊಗ್ಗ: ತಾಲೂಕಿನ ಹುಣಸೋಡು ಗ್ರಾಮದ ಕಲ್ಲು ಕ್ರಷರ್ನಲ್ಲಿ ನಡೆದ ಸ್ಫೋಟ ಪ್ರಕರಣದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಸಿಡಿದೆದ್ದಿದೆ.
ಪ್ರಕರಣದ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಶನಿವಾರ ಜಿಲ್ಲಾ ಕಾಂಗ್ರೆಸ್ನಿಂದ ಅಬ್ಬಲಗೆರೆ ಗ್ರಾಮ ಪಂಚಾಯಿತಿ ಕಚೇರಿ ಎದುರುಗಡೆ ಇರುವ ಸವಳಂಗ ರಸ್ತೆಯನ್ನು ತಡೆದು ಪ್ರತಿಭಟನೆ ಮಾಡಲಾಯಿತು.
ಸಚಿವ ಈಶ್ವರಪ್ಪ ರಾಜೀನಾಮೆಗೆ ಆಗ್ರಹ | ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಈ ಘಟನೆಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡವರ ವಿರುದ್ಧ ಮುಲಾಜಿಲ್ಲದೇ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸ್ಫೋಟದಲ್ಲಿ ಅಮಾಯಕರು ಮೃತಪಟ್ಟಿದ್ದು, ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರುತ್ತಿದೆ. ಕಲ್ಲು ಕ್ವಾರೆ ಮಾಲೀಕರನ್ನು ರಕ್ಷಿಸಲು ಹೊರಟಿದೆ.
– ಎಚ್.ಎಸ್.ಸುಂದರೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ
ಜಿಲ್ಲಾಧ್ಯಕ್ಷ ಎಚ್.ಎಸ್. ಸುಂದರೇಶ್, ಡಾ. ಶ್ರೀನಿವಾಸ್ ಕರಿಯಣ್ಣ, ಎಸ್. ರವಿಕುಮಾರ್, ಎಲ್. ರಾಮೇಗೌಡ, ಕೆ. ದೇವೇಂದ್ರಪ್ಪ, ಯಮುನಾ ರಂಗೇಗೌಡ, ಸೈಯದ್ ವಾಹಿದ್ ಅಡ್ಡು, ವಿಜಯಲಕ್ಷ್ಮಿ ಪಾಟೀಲ್, ಶರತ್, ಎಸ್.ಪಿ.ಶೇಷಾದ್ರಿ, ಕೆ.ಚೇತನ್, ಸಿ.ಜಿ.ಮಧುಸೂದನ್, ಸೌಗಂಧಿಕಾ, ಪಾಲಿಕೆ ಪ್ರತಿಪಕ್ಷ ನಾಯಕ ಎಚ್.ಸಿ.ಯೋಗೇಶ್ ಉಪಸ್ಥಿತರಿದ್ದರು.
ಸ್ಫೋಟ ಪ್ರಕರಣದಲ್ಲಿ ಆರು ಶವಗಳು ದೊರೆತಿವೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಮೃತಪಟ್ಟಿರುವ ಶಂಕೆ ಇದೆ. ಶವಗಳು ಛಿದ್ರವಾದ ಹಿನ್ನೆಲೆ ಮೃತರು ಪತ್ತೆಯಾಗಿಲ್ಲ. ಕೂಡಲೇ ಈ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಂಡು ಮೃತರ ಕುಟುಂಬಕ್ಕೆ ಪರಿಹಾರ ನೀಡಿ. ಘಟನೆಯ ನೈತಿಕ ಹೊಣೆ ಹೊತ್ತು ಈಶ್ವರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲಿ.
– ಬೇಳೂರು ಗೋಪಾಲಕೃಷ್ಣ, ಮಾಜಿ ಶಾಸಕ
ಪ್ರತಿಭಟನಾನಿರತರನ್ನು ವಶಕ್ಕೆ ಪಡೆದು ಬಿಡುಗಡೆ | ರಸ್ತೆಯನ್ನು ಬಂದ್ ಮಾಡಿ ಧರಣಿ ಸತ್ಯಾಗ್ರಹ ಮಾಡಿದ್ದಕ್ಕೆ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಸಂಚಾರಕ್ಕೆ ಅನುವು ಮಾಡಿಕೊಟ್ಟರು.