ಸುದ್ದಿ ಕಣಜ.ಕಾಂ
ಶಿವಮೊಗ್ಗ: ಭಾರತ ಬಂದ್ ಹಿನ್ನೆಲೆ ನಗರದ ಜಿಲ್ಲಾಧಿಕಾರಿ ಎದುರು ರೈತ ಮುಖಂಡರು ಶುಕ್ರವಾರ ಕೃಷಿ ಕಾಯ್ದೆಗಳ ಪ್ರತಿಗಳಿಗೆ ಬೆಂಕಿಯಿಟ್ಟು ಆಕ್ರೋಶ ವ್ಯಕ್ತಪಡಿಸಿದರು. ಒಕ್ಕೊರಳಿನಿಂದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಇದನ್ನೂ ಓದಿ | ಕೂಪನ್ ಹಾಕಿ, ‘ಯುವರತ್ನ’ ಚಿತ್ರ ಉಚಿತವಾಗಿ ನೋಡಿ!
ಸಂಯುಕ್ತ ಕಿಸಾನ್ ಮೋರ್ಚಾ ಐಕ್ಯ ಹೋರಾಟ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ವಿವಿಧ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ದೆಹಲಿ ಗಡಿಯಲ್ಲಿ ರೈತರು ಪ್ರತಿಭಟನೆಗಿಳಿದು ನಾಲ್ಕು ತಿಂಗಳು ಪೂರ್ಣಗೊಂಡಿದೆ. ಈ ಕಾರಣದಿಂದಾಗಿ, ಭಾರತ್ ಬಂದ್ ಗೆ ಕರೆ ನೀಡಲಾಗಿತ್ತು. ಆದರೆ, ಇತ್ತೀಚೆಗೆ ರೈತ ಮಹಾ ಪಂಚಾಯತ್ ಮಾಡುವ ಮೂಲಕ ರೈತರನ್ನು ಒಗ್ಗೂಡಿಸುವ ಕೆಲಸ ಮಾಡಿದ್ದು, ಬಂದ್ ಘೋಷಿಸಿದ್ದಲ್ಲಿ ದುಡಿಯುವ ವರ್ಗಕ್ಕೆ ತೊಂದರೆ ಆಗಬಹುದು ಎಂಬ ಕಾರಣಕ್ಕೆ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.
ಬಿಜೆಪಿ ಏಜಂಟರಂತೆ ವರ್ತನೆ | ರೈತ ಮುಖಂಡ ರಾಕೇಶ್ ಟಿಕಾಯತ್ ವಿರುದ್ಧ ಸುಮೋಟೊ ಪ್ರಕರಣ ದಾಖಲಿಸಲಾಗಿದೆ. ಯಾವುದೇ ಉದ್ರೇಕಕಾರಿ ಮಾತುಗಳನ್ನಾಡದಿದ್ದರೂ ಎಫ್.ಐ.ಆರ್. ದಾಖಲಿಸಲಾಗಿದೆ. ಪೊಲೀಸರು ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ರೈತ ಮುಖಂಡ ಎಚ್.ಆರ್.ಬಸವರಾಜಪ್ಪ ಆರೋಪಿಸಿದ್ದಾರೆ.
ಪ್ರತಾಪ್ ಸಿಂಹ, ಕೆ.ಎಸ್.ಈಶ್ವರಪ್ಪ, ಅನಂತ ಕುಮಾರ ಹೆಗ್ಡೆ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಅವರೆಲ್ಲರನ್ನು ಬಿಟ್ಟು ರೈತರ ಪರ ಹೋರಾಟ ಮಾಡುತ್ತಿರುವ ಟಿಕಾಯತ್ ವಿರುದ್ಧ ಪ್ರಕರಣ ದಾಖಲಿಸಿರುವುದು ಅಕ್ಷಮ್ಯ ಎಂದು ವಕೀಲ ಕೆ.ಪಿ.ಶ್ರೀಪಾಲ್ ಹೇಳಿದರು.
ಪ್ರಮುಖರಾದ ಕೆ.ಎಲ್.ಅಶೋಕ್, ಎಂ.ಶ್ರೀಕಾಂತ್, ಎನ್.ರಮೇಶ್, ಜಿ.ಪಲ್ಲವಿ, ಎಚ್.ಸಿ.ಯೋಗೇಶ್, ಆರ್.ಎಂ.ಮಂಜುನಾಥ ಗೌಡ, ಬಿ.ಎ.ರಮೇಶ್ ಹೆಗ್ಡೆ, ನಾಗರಾಜ್ ಕಂಕಾರಿ, ಟಿ.ಎಚ್.ಹಾಲೇಶಪ್ಪ, ಕಾಶಿ ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು. ಪ್ರತಿಭಟನಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
https://www.suddikanaja.com/2021/01/19/legal-metrology-department-booked-cases-in-shivamogga/