ಸುದ್ದಿ ಕಣಜ.ಕಾಂ | KARNATAKA | POLITICS
ಶಿವಮೊಗ್ಗ: ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಪಕ್ಷದಿಂದ ಸ್ಪರ್ಧಿಸುವ ವಿಚಾರ ಹೈಕಮಾಂಡ್ ಗೆ ಬಿಟ್ಟದ್ದು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿ, ನನ್ನ ಸ್ಪರ್ಧೆಯ ಕುರಿತು ಪಕ್ಷದ ಹಿರಿಯರೇ ನಿರ್ಧರಿಸಲಿದ್ದಾರೆ. ಅವರು ನೀಡಿದ ಜವಾಬ್ದಾರಿಯನ್ನು ಲೋಪವಿಲ್ಲದೇ ನಿರ್ವಹಿಸುವೆ ಎಂದು ತಿಳಿಸಿದರು.
‘ಪಕ್ಷದ ಸಾಮಾನ್ಯ ಕಾರ್ಯಕರ್ತನಂತೆ ಕೆಲಸ ಮಾಡುವೆ. ಯಾವಾಗ ಏನು ಜವಾಬ್ದಾರಿ ನೀಡಬೇಕು ಎಂಬುವುದು ಪಕ್ಷಕ್ಕೆ ಬಿಟ್ಟ ವಿಚಾರ. ನಾನಂತೂ ಯಾವುದೇ ಹುದ್ದೆಯ ಆಕಾಂಕ್ಷಿ ಅಲ್ಲ’ ಎಂದರು.
READ | ಚಿನ್ನಾಭರಣ ಪ್ರಿಯರಿಗೆ ಶುಭ ಸುದ್ದಿ, ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ
ದಾವಣಗೆರೆಯಲ್ಲಿ ಕಾರ್ಯಕರ್ತರ ಸಭೆ
ಶನಿವಾರ ಹಾಗೂ ಭಾನುವಾರ ಎರಡು ದಿನ ದಾವಣಗೆರೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಅಲ್ಲಿ ರಾಜ್ಯದ ಪ್ರಮುಖ ಸಮಸ್ಯೆಗಳು ಹಾಗೂ ಮುಂಬರುವ ಚುನಾವಣೆ ಎದುರಿಸುವ ವಿಚಾರವಾಗಿ ಚರ್ಚಿಸಲಾಗುವುದು ಎಂದು ಹೇಳಿದರು.
ಜನರ ಭಾವನೆ ಅರ್ಥ ಮಾಡಿಕೊಳ್ಳಬೇಕಿತ್ತು
ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಧಾರ್ಮಿಕ ಕೇಂದ್ರಗಳ ತೆರವಿಗೆ ಮುಂದಾಗಿದೆ. ಆದರೆ, ಅಧಿಕಾರಿಗಳು ನ್ಯಾಯಾಲಯದ ಸೂಚನೆ ಇದ್ದರೂ ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕಿತ್ತು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಂತರ ಆದೇಶ ಕಾರ್ಯಗತಗೊಳಿಸಬೇಕು ಎಂದರು.
ಪ್ರಸ್ತುತ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಧಾರ್ಮಿಕ ಕೇಂದ್ರಗಳ ತೆರವಿನ ಬಗ್ಗೆ ಸ್ಪಷ್ಟ ನಿಲುವು ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ತೆರವಿಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ ಎಂದು ಹೇಳಿದರು.