ಶಿವಮೊಗ್ಗ ಜಿಲ್ಲೆಯಲ್ಲಿ 5 ಶಾಲೆ, 4 ಕಾಲೇಜು ಸೀಲ್ ಡೌನ್, ಎಷ್ಟು ವಿದ್ಯಾರ್ಥಿಗಳು, ಶಿಕ್ಷಕರಿಗೆ ಪಾಸಿಟಿವ್?

ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ: ಜಿಲ್ಲೆಯಲ್ಲಿ ಇದುವರೆಗೆ ಪ್ರಾಥಮಿಕ ಶಾಲಾ ಹಂತದ 115 ವಿದ್ಯಾರ್ಥಿಗಳಿಗೆ ಹಾಗೂ 26 ಶಿಕ್ಷಕರು ಕೋವಿಡ್ ಪಾಸಿಟಿವ್ ಆಗಿದ್ದಾರೆ. ಕಾಲೇಜು ಹಂತದ 35 ವಿದ್ಯಾರ್ಥಿಗಳು ಹಾಗೂ 6 ಶಿಕ್ಷಕರು ಪಾಸಿಟಿವ್ ಆಗಿದ್ದು, 5 ಶಾಲೆಗಳನ್ನು ಹಾಗೂ 4 ಕಾಲೇಜುಗಳನ್ನು ಒಂದು ವಾರದ ಮಟ್ಟಿಗೆ ತಾತ್ಕಾಲಿಕವಾಗಿ ಸೀಲ್‍ಡೌನ್ ಮಾಡಲಾಗಿದೆ‌ ಎಂದು ಜಿಲ್ಲಾಧಿಕಾರಿ ‌ಡಾ.ಆರ್.ಸೆಲ್ವಮಣಿ‌ ತಿಳಿಸಿದರು.

READ | ಶಿವಮೊಗ್ಗ ಮಾರಿಕಾಂಬ ಜಾತ್ರೆ ಬಗ್ಗೆ ಪ್ರಮುಖ‌ ನಿರ್ಧಾರ ಪ್ರಕಟಿಸಿದ ಜಿಲ್ಲಾಡಳಿತ

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಕೋವಿಡ್ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೂಚನೆಗಳನ್ನು ನೀಡಿದರು.
ಶಾಲಾ ಕಾಲೇಜುಗಳಲ್ಲಿ ಪ್ರತಿ ದಿನ ಜ್ವರ ತಪಾಸಣೆ
ಪ್ರತಿದಿನ ಶಾಲಾ ಕಾಲೇಜು ಆರಂಭಕ್ಕೆ ಮೊದಲು ಕಡ್ಡಾಯವಾಗಿ ವಿದ್ಯಾರ್ಥಿಗಳ ದೈಹಿಕ‌ ತಾಪಮಾನ ತಪಾಸಣೆ ನಡೆಸಬೇಕು. ಜ್ವರದ ಲಕ್ಷಣ ಇರುವ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಬೇಕು. ಅಂತಹ ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯಗೊಳಿಸಬಾರದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಇದೇ ರೀತಿ ವಿದ್ಯಾರ್ಥಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ನಿರಂತರ ನಿಗಾ ಇರಿಸಬೇಕು. ವಿದ್ಯಾರ್ಥಿ ನಿಲಯಗಳಲ್ಲಿ 5ಕ್ಕಿಂತ ಹೆಚ್ಚಿನ ಕೋವಿಡ್ ಪ್ರಕರಣಗಳು ಕಂಡು ಬಂದರೆ ಅಂತಹ ವಿದ್ಯಾರ್ಥಿ ನಿಲಯಗಳನ್ನು ತಾತ್ಕಾಲಿಕವಾಗಿ ಸೀಲ್‍ಡೌನ್ ಮಾಡಿ, ಅಲ್ಲಿರುವ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸದೆ ಅಲ್ಲಿಯೇ ನೋಡಿಕೊಳ್ಳಬೇಕು. ಪ್ರತಿ ಶಾಲಾ ಕಾಲೇಜುಗಳಲ್ಲಿ ಕೋವಿಡ್ ಮೇಲೆ ನಿಗಾ ಇರಿಸಲು ಈ ಕುರಿತು ವರದಿಯನ್ನು ಸಲ್ಲಿಸಲು ನೋಡಲ್ ಅಧಿಕಾರಿಯನ್ನು ನೇಮಕ ಮಾಡಬೇಕು. ಇದುವರೆಗೆ ಜಿಲ್ಲೆಯಲ್ಲಿ ಕಂಡು ಬಂದಿರುವ ಕೋವಿಡ್ ಪಾಸಿಟಿವ್ ವ್ಯಕ್ತಿಗಳ ಪೈಕಿ ಶೇ.99ರಷ್ಟು ಮಂದಿಯಲ್ಲಿ ರೋಗ ಲಕ್ಷಣ ಇಲ್ಲದಿದ್ದರೂ, ಎಚ್ಚರಿಕೆಯನ್ನು ವಹಿಸಬೇಕು ಎಂದು ಹೇಳಿದರು.

READ | 3ನೇ ಅಲೆಯಲ್ಲಿ ಕೊರೊನಾಗೆ ಚೊಚ್ಚಲ ಬಲಿ, ಇದುವರೆಗೆ ಜಿಲ್ಲೆಯಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಎಷ್ಟು?

ಇದುವರೆಗೆ ಜಿಲ್ಲೆಯಲ್ಲಿ ನೀಡಿದ ಲಸಿಕೆ ಪ್ರಮಾಣ
ಜಿಲ್ಲೆಯಲ್ಲಿ ಲಸಿಕೆಯನ್ನು ಇದುವರೆಗೂ ಪಡೆಯದವರು ಹಾಗೂ ಎರಡನೇ ಡೋಸ್ ಬಾಕಿಯಿರುವ ಪ್ರತಿಯೊಬ್ಬರಿಗೂ ಲಸಿಕೆಯನ್ನು ನೀಡಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಶೇ.98 ಮಂದಿ ಪ್ರಥಮ ಡೋಸ್ ಹಾಗೂ ಶೇ.83ರಷ್ಟು ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಅಭಿಯಾನದ ರೀತಿಯಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಪ್ರಸ್ತುತ 88 ಸಾವಿರ ಡೋಸ್ ಕೋವಿಶೀಲ್ಡ್ ಮತ್ತು 23 ಸಾವಿರ ಡೋಸ್ ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದೆ. 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡುವ ಕಾರ್ಯ ಹಾಗೂ 15ರಿಂದ 17 ವರ್ಷದೊಳಗಿನವರಿಗೆ ಲಸಿಕೆ ನೀಡುವ ಕಾರ್ಯವನ್ನು ಸಹ ಒಂದು ವಾರದ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ್ ವಟಾರೆ, ಸಿಮ್ಸ್ ನಿರ್ದೇಶಕ ಡಾ.ಸಿದ್ದಪ್ಪ, ನಗರಾಭಿವೃದ್ಧಿ ಯೋಜನಾಧಿಕಾರಿ ಮೂಕಪ್ಪ ಕರಿಭೀಮಣ್ಣನವರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ, ಡಾ.ನಾಗರಾಜ್ ನಾಯಕ್, ಡಿಡಿಪಿಐ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

https://www.suddikanaja.com/2022/01/03/the-government-is-giving-covaxin-to-15-18-year-old-childrens-all-the-preparations-have-been-made-in-shimoga/