ಸುದ್ದಿ ಕಣಜ.ಕಾಂ | DISTRICT | ADC MEETING
ಶಿವಮೊಗ್ಗ: ಹಲವು ಇಲಾಖೆಗಳಲ್ಲಿ ಅನುಷ್ಠಾನದಲ್ಲಿರುವ ಯೋಜನೆಗಳಿಗೆ ಬಿಡುಗಡೆಯಾದ ಅನುದಾನ ಸರ್ಕಾರಕ್ಕೆ ಮರಳಿ ಹೋಗದಂತೆ ಸಕಾಲದಲ್ಲಿ ಸದ್ಬಳಕೆ ಮಾಡಬೇಕು. ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಸಿಮ್ಸ್)ಯು ಬಿಡುಗಡೆಯಾಗಿರುವ ಅನುದಾನ ಬಳಕೆ ಮಾಡದಿರುವುದನ್ನು ಪ್ರಶ್ನಿಸಿದ ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ನೊಟೀಸ್ ನೀಡುವಂತೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆಯು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
READ | ನಾಳೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ, ಡಿಸಿ ಆಲಿಸಲಿದ್ದಾರೆ ಜನರ ಗೋಳು
ಪ್ರಗತಿ ಸಾಧಿಸದಿದ್ದರೆ ಕಾನೂನು ಕ್ರಮಕ್ಕೆ ಶಿಫಾರಸು
ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಅಭ್ಯರ್ಥಿಗಳಿಗಾಗಿ ರೂಪಿಸಿ ಅನುಷ್ಠಾನಗೊಳಿಸುವ ಯೋಜನೆಗಳಿಗೆ ಬಿಡುಗಡೆಯಾದ ಅನುದಾನವನ್ನು ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ ಪೂರೈಸಬೇಕು. ನಿಗದಿಪಡಿಸಿದ ಅವಧಿಯಲ್ಲಿ ಪ್ರಗತಿ ಸಾಧಿಸದಿರುವ ಇಲಾಖಾ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಶಿಫಾರಸು ಮಾಡುವುದು ಅನಿವಾರ್ಯವಾಗಲಿದೆ ಎಂದು ಚ್ಚರಿಸಿದರು.
ಪ್ರತಿ ತಿಂಗಳು ನಡೆಯುವ ಈ ಸಭೆಗೆ ಸತತವಾಗಿ ಗೈರು ಹಾಜರಾಗಿರುವ, ಪ್ರಗತಿ ವರದಿ ನೀಡದಿರುವ ಹಾಗೂ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳಿಗೆ ಕಾರಣ ಕೇಳಿ ನೋಟೀಸ್ ಜಾರಿಗೊಳಿಸುವಂತೆ ಸೂಚಿಸಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ್ ಸೇರಿದಂತೆ ಜಿಲ್ಲೆಯ ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು, ನಿಗಮ-ಮಂಡಳಿಗಳ ಜಿಲ್ಲಾ ವ್ಯವಸ್ಥಾಪಕರು, ಮತ್ತಿತರರು ಉಪಸ್ಥಿತರಿದ್ದರು.