ಇಂದು ವಿಶ್ವ ಆಟಿಸಂ ಜಾಗೃತಿ ದಿನ, ಏನಿದು ಆಟಿಸಂ, ಮಕ್ಕಳಲ್ಲಿನ ಆರಂಭಿಕ ಲಕ್ಷಣಗಳೇನು, ಅದಕ್ಕೇನು ಪರಿಹಾರ, ಹೆತ್ತವರಿಗೆ ಗೊತ್ತಿರಲಿ ಈ ಮಾಹಿತಿಗಳು?

ಸುದ್ದಿ ಕಣಜ.ಕಾಂ | GUEST COLUMN | HEALTH NEWS
autism awareness day 2022: ಮಗುವಿನ ಮೊದಲ ಮೂರು ವರ್ಷಗಳ ಬೆಳವಣಿಗೆಯಲ್ಲಿ ವಿಶಿಷ್ಟವಾಗಿ ಕಾಣಿಸಿಕೊಳ್ಳುವ ಒಂದು ನರಸಂಬಂಧಿ ಸ್ಥಿತಿಯೇ ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್ (autism spectrum disorder). ನರಮಂಡಲದ ಬೆಳವಣಿಗೆಯಲ್ಲಿನ ನ್ಯೂನತೆಯಿಂದಾಗಿ ಸಾಮಾಜಿಕ ನಡವಳಿಕೆ ಮತ್ತು ಸಂವಹನ ಕೊರತೆಯನ್ನು ಆಟಿಸಂ (autism) ಎಂದು ಗುರುತಿಸಲಾಗುತ್ತದೆ.
ಸಾವಿರ ಜನರಲ್ಲಿ ಒಬ್ಬರು ಅಥವಾ ಇಬ್ಬರಿಗೆ ಇದು ಕಂಡು ಬರುತ್ತದೆ. 1980ರಿಂದ ಈಚೆಗೆ ಇದು ಹೆಚ್ಚಾಗಿ ಕಂಡು ಬರುತ್ತಿದೆ. ಮೊದಲಿಗೆ ಶಿಶುವಿನಲ್ಲಿ ನರಮಂಡಲದ ಬೆಳವಣಿಗೆಯಲ್ಲಿ ನ್ಯೂನತೆ ಕಾಣಿಸಿಕೊಳ್ಳಬಹುದು. 6 ತಿಂಗಳಲ್ಲಿ ತಾಯಿಗೆ ಸ್ವಲ್ಪ ಅನುಮಾನ ಬರಬಹುದು. ನಂತರ ಎರಡು ಇಲ್ಲವೇ ಮೂರು ವರ್ಷಗಳಲ್ಲಿ ಸ್ಪಷ್ಟವಾಗಿ ಅದನ್ನು ಗುರುತಿಸಬಹುದು.

ಆಟಿಸಂ ಲಕ್ಷಣಗಳೇನು?

  • ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್(ASD) ಕುರಿತು ವಿಶ್ವದಾದ್ಯಂತ ಅರಿವು ಮೂಡಿಸಲು ಏಪ್ರಿಲ್ 2 ಅನ್ನು ವಿಶ್ವ ಆಟಿಸಂ ಜಾಗೃತಿ ದಿನ (autism awareness day)ವಾಗಿ ಆಚರಿಸಲಾಗುತ್ತಿದೆ. ಆಟಿಸಂನಲ್ಲಿ ಒಂದೇ ಲಕ್ಷಣ ಇರುವುದಿಲ್ಲ. ಇದು ಅನೇಕ ಲಕ್ಷಣಗಳಿಂದ ಕೂಡಿಕೊಂಡಿದೆ. ಆಟಿಸಂ ಇರುವ ಮಗು(children)ವಿನಲ್ಲಿ ಸಾಮಾಜಿಕ ಸಂವಹನ, ಅಸಹಜ ನಡವಳಿಕೆ, ನಿರಾಸಕ್ತಿ ಮತ್ತು ಮಾಡಿದ್ದನ್ನೇ ಮಾಡುವುದು, ಊಟ ಮಾಡುವ ರೀತಿ ಸಹ ವಿಭಿನ್ನವಾಗಿರುತ್ತದೆ. ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ.
  • ಆಟಿಸಂ ಮಕ್ಕಳು ಮೃದುವಾದ ಸ್ಪರ್ಶವನ್ನು ಅಥವಾ ಇತರ ಬಗೆಯ ಸ್ಪರ್ಶಗಳನ್ನು ಸಹಿಸಲಾರರು. ಕೆಲವು ಆಟಿಸಂ ಮಕ್ಕಳು ಬಟ್ಟೆ ಧರಿಸಿಕೊಳ್ಳಲು ನಿರಾಕರಿಸುತ್ತಾರೆ. ಕೆಲವು ಬಗೆಯ ಉಡುಪು ಧರಿಸಲು ಅವರಿಗೆ ಆಗುವುದಿಲ್ಲ. ಚಳಿಯಿರುವಾಗ ಕಡಿಮೆ ಉಡುಪು ಹಾಗೂ ಬೇಸಿಗೆಯಲ್ಲಿ ಉಣ್ಣೆ ಬಟ್ಟೆ ಧರಿಸಬಹುದು. ಆಟಿಸಂ ಮಕ್ಕಳು ವಸ್ತುಗಳ ಮತ್ತು ಜನರ ವಾಸನೆ ನೋಡುತ್ತಾರೆ. ಸಂಶೋಧನೆಯ ಮತ್ತು ಅಧ್ಯಯನಗಳ ಪ್ರಕಾರ ಆಟಿಸಂ ಇರುವ ಹದಿಹರೆಯದವರಲ್ಲಿ ಮೂರನೆಯ ಒಂದು ಭಾಗದಷ್ಟು ಜನರು ಕೌಶಲಗಳ ಮತ್ತು ನಡವಳಿಕೆಗಳ ಕೊರತೆಯಿಂದ ಬಳಲುತ್ತಾರೆ.
  • 1943ರಲ್ಲಿ ಲಿಯೋ ಕ್ಯಾನ್ಸರ್ ಶಿಶುವಿನ ಆರಂಭಿಕ ಹಂತದ ಆಟಿಸಂ ಪರಿಚಯಿಸಿದ. ಕ್ಯಾನ್ಸರ್ ತಿಳಿಸಿದ ಬಹುತೇಕ ಲಕ್ಷಣಗಳು, ವಿಶೇಷವಾಗಿ ಆಟಿಸ್ಟಿಕ್ ಏಕಾಂಗಿತನ ಹಾಗೂ ಮಾಡಿದ್ದನ್ನೇ ಮಾಡುವುದು ಇವತ್ತಿಗೂ ಆಟಿಸಂನ ಮುಖ್ಯ ಗುಣಲಕ್ಷಣಗಳಾಗಿವೆ. 1960ರಲ್ಲಿ ಕೊನೆಯಲ್ಲಿ ಆಟಿಸಂ ಸ್ವತಂತ್ರ ವಿಶೇಷ ಗುಣಲಕ್ಷಣಗಳ ಕಾಯಿಲೆ ಎಂದು ದೃಢವಾಯಿತು. 1983 ರಲ್ಲಿ ಆಟಿಸಂ ಪದ ಮೊದಲ ಬಾರಿ ಆಧುನಿಕ ಅರ್ಥ ಮತ್ತು ರೂಪ ಪಡೆಯಿತು.
  • ಸಂವಹನದ ಹಾಗೂ ಭಾಷೆಯ ಕೊರತೆ
    ಸಾಮಾಜಿಕವಾಗಿ ಬೆರೆಯಲು ಸಾಧ್ಯವಾಗುವುದಿಲ್ಲ. ಬೇರೆಯವರ ಭಾವನೆಗಳನ್ನು ಈ ಮಕ್ಕಳು ಅರ್ಥ ಮಾಡಿಕೊಳ್ಳುವುದಿಲ್ಲ. ಕಣ್ಣಿಗೆ ಕಣ್ಣಿಟ್ಟು ನೋಡಲು ಹಿಂಜರಿಯುತ್ತಾರೆ. ಮಾತನಾಡಲು ತೊಂದರೆ. ಶಬ್ದಗಳನ್ನು ಮತ್ತೆ ಹೇಳಲು, ಯಾವುದಾದರೂ ಸಾಲುಗಳನ್ನು ನೆನಪಿಟ್ಟು ಹೇಳಲು ತೊಂದರೆ ಪಡುತ್ತಾರೆ. ಧ್ವನಿಯಲ್ಲಿ ವ್ಯತ್ಯಾಸ. ಅವರು ಭಾವನೆಗಳನ್ನು ವ್ಯಕ್ತಪಡಿಸುವುದಿಲ್ಲ.
  • ವರ್ತನೆ ಹಾಗೂ ಭಾವನೆಗಳಲ್ಲಿ ವ್ಯತ್ಯಾಸ : ಮಾತನಾಡಲು ತೊಂದರೆ. ಕೆಲವೊಂದು ವಸ್ತುಗಳ ಕಡೆ ತುಂಬಾ ಅಟ್ಯಾಚ್ಮೆಂಟ್. ಸುಮ್ಮನೆ ಅಳುವುದು, ನಗುವುದು ಸಾಮಾಜಿಕವಾಗಿ ಬೆರೆಯುವುದಿಲ್ಲ. ಎಲ್ಲಾ ರುಚಿ ಇಷ್ಟಪಡಲ್ಲ. ಕೋಪ, ಹಠ, ವಿನಾಕಾರಣ ಕಿರುಚುವುದು. ತಮ್ಮ ಕಾರ್ಯಗಳನ್ನು ತಾವೇ ನಿಭಾಯಿಸಲು ಅಸಮರ್ಥರಾಗಿರುವುದು.

ಆಟಿಸಂ ಸಮಸ್ಯೆಗೆ ಕಾರಣಗಳು

  • ಆಟಿಸಂ ಸಮಸ್ಯೆಗೆ ಇಂಥದ್ದೇ ನಿಖರ ಕಾರಣವೆಂದು ಹೇಳಲು ಸಾಧ್ಯವಿಲ್ಲ. ಮೆದುಳಿನ ಬೆಳವಣಿಗೆ ಸರಿಯಾದ ರೀತಿಯಲ್ಲಿ ಆಗದೇ ಇರುವುದಕ್ಕೆ ಹಲವಾರು ಕಾರಣಗಳನ್ನು ನೀಡುತ್ತಾರೆ. ಅವುಗಳೆಂದರೆ ವಂಶವಾಹಿ ತೊಂದರೆ. ಕುಟುಂಬದ ಸದಸ್ಯರಲ್ಲಿ ಯಾರಿಗಾದರೂ ಈ ಸಮಸ್ಯೆಯಿದ್ದರೆ ವಂಶವಾಹಿಯಾಗಿ ಮಕ್ಕಳಲ್ಲಿ ಕಂಡು ಬರುವ ಸಾಧ್ಯತೆ ಇದೆ.
  • ಅನಾರೋಗ್ಯಕರ ಆಹಾರ ಶೈಲಿ, ಜೀವನಶೈಲಿ, ಕಲುಷಿತ ವಾತಾವರಣ ಇವೆಲ್ಲವೂ ಆಟಿಸಂ ಸಮಸ್ಯೆಗೆ ಒಂದು ಕಾರಣವಾಗಿದೆ. 40 ವರ್ಷ ದಾಟಿದ ಮೇಲೆ ಗರ್ಭಧಾರಣೆಯಾಗುವುದರಿಂದ ಈ ರೀತಿಯ ಸಮಸ್ಯೆ ಕಂಡು ಬರುವ ಸಾಧ್ಯತೆ ಹೆಚ್ಚು. ಅವಧಿಗೆ ಮೊದಲೇ ಹರಿಗೆಯಾದರೆ ಕೆಲ ಮಕ್ಕಳಲ್ಲಿ ಈ ರೀತಿಯ ಸಮಸ್ಯೆ ಕಮಡು ಬರುವುದು. ಗರ್ಭಾವಸ್ಥೆಯಲ್ಲಿ valproic acid ಮತ್ತು thalidomide ಔಷಧ ತೆಗೆದುಕೊಳ್ಳುತ್ತಿದ್ದರೆ ಮಕ್ಕಳಲ್ಲಿ ಆಟಿಸಂ ಕಾಣಿಸುವ ಸಾಧ್ಯತೆ ಹೆಚ್ಚು.
  • ವಂಶವಾಹಿಗಳೇ ಮುಖ್ಯ ಕಾರಣವಾಗಿರುತ್ತದೆ. ಗರ್ಭಧಾರಣೆಯ 8 ವಾರಗಳಲ್ಲೇ ವಿಕಲತೆ ಕಾಣಿಸಿಕೊಳ್ಳುತ್ತದೆ. ಪರಿಸರ ಮಾಲಿನ್ಯದ ಕಾರಣದಿಂದ ಉಂಟಾಗುತ್ತದೆಂದು ಹೇಳುತ್ತಾರಾದರೂ ಅಧ್ಯಯನಗಳು ಅದನ್ನು ಇನ್ನೂ ಖಚಿತಪಡಿಸಿಲ್ಲ. ಆಟಿಸಂಗೆ ಗುರಿಯಾಗುವವರಲ್ಲಿ ಹೆಣ್ಣುಮಕ್ಕಳಿಗಿಂತ ಗಂಡು ಮಕ್ಕಳೇ ಅಧಿಕ. ಹೆಣ್ಣು ಗಂಡಿನ ಅನುಪಾತ 1:4 ಇದೆ.

ಆಟಿಸಂ ತೊಂದರೆಗಳೇನು?
1. ಮಕ್ಕಳು ಸಾಮಾಜಿಕವಾಗಿ ಬೆರೆಯುವುದಿಲ್ಲ. ಕಲಿಕೆಯಲ್ಲಿ ಇತರ ಮಕ್ಕಳಂತೆ ಇರುವುದಿಲ್ಲ. ಸ್ವತಂತ್ರವಾಗಿ ಬೆಳೆಯಲು ಸಾಧ್ಯವಾಗುವುದಿಲ್ಲ. ಇಂಥ ಮಕ್ಕಳು ಮಾತ್ರವಲ್ಲ, ಆ ಕುಟುಂಬದವರು ಕೂಡ ಸಾಕಷ್ಟು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಮಕ್ಕಳು ದೈಹಿಕವಾಗಿ ಬೆಳವಣಿಗೆಯಾದರೂ ಸಾಮಾಜಿಕವಾಗಿ ಬೆಳೆಯಲು ಸಾಧ್ಯವಾಗುವುದಿಲ್ಲ.
2. ಆಟಿಸಂ ಇರುವ ಮಕ್ಕಳಿಗೆ ದೃಶ್ಯ, ಧ್ವನಿ, ಸ್ಪರ್ಶ ಈ ಮೂರು ಇಂದ್ರಿಯ ಸಂವೇದನೆಗಳ ಸಮತೋಲನ ಮತ್ತು ಅವುಗಳ ನಡುವಿನ ಸಂವಹನದ ತೊಂದರೆ ಇರುತ್ತದೆ. ಒಂದು ಇಂದ್ರೀಯದಿಂದ ಬಂದ ಮಾಹಿತಿಯನ್ನು ಇನ್ನೊಂದು ಇಂದ್ರಿಯದ ಅನುಭವಕ್ಕೆ ಜೋಡಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಇಂತಹ ಮಕ್ಕಳಿಗೆ ಒಂದೇ ಇಂದ್ರೀಯದ ಮೂಲಕ ಕಲಿಸಿದಾಗ ಆ ಮಕ್ಕಳು ಬೇಗ ಕಲಿಯುತ್ತಾರೆ. ನೋಡಿ ಮಾಡುವುದು ಸುಲಭ.

ಮಕ್ಕಳಲ್ಲಿ ಕಾಯಿಲೆ ಪತ್ತೆ ಹಚ್ಚುವುದು ಹೇಗೆ?
ಮಕ್ಕಳು ಒಂದು ವಯಸ್ಸು ತುಂಬಿದರೂ ಅವರ ಹೆಸರು ಕರೆದಾಗ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ತಿಂಗಳು ಇರುವಾಗ ಯಾವುದೇ ವಸ್ತುಗಳನ್ನು ನೋಡಿದರೂ ಕುತೂಹಲ ತೋರುವುದಿಲ್ಲ. 18 ತಿಂಗಳಾದರೂ ಆಟ ಆಡಲು ಯಾವುದೇ ಆಸಕ್ತಿ ತೋರುವುದಿಲ್ಲ. ಮಗುವಿನ ಕಣ್ಣಿಗೆ ಕಣ್ಣಿಟ್ಟು ನೋಡಿದಾಗ ಅದು ನಿಮ್ಮನ್ನು ನೋಡುವುದಿಲ್ಲ. ಇದ್ದಕ್ಕಿದ್ದಂತೆ ಮಗು ಹಠ ಮಾಡುತ್ತದೆ. ಒಂಟಿಯಾಗಿರಲು ಇಷ್ಟಪಡುತ್ತದೆ. ಈ ರೀತಿಯ ಲಕ್ಷಣಗಳು ಕಂಡು ಬಂದರೆ ವೈದ್ಯರಿಗೆ ತೋರಿಸಬೇಕು.

ಆಟಿಸಂಗೆ ಇರುವ ಚಿಕಿತ್ಸೆ
1. ಆಟಿಸಂ ಮಕ್ಕಳ ತಂದೆ ತಾಯಿ ತುಂಬಾ ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಬೇಕು. ಮಗು ಮಾತನಾಡಲು ಹಾಗೂ ಸಾಮಾಜಿಕವಾಗಿ ಬೆರೆಯಲು ಪ್ರೋತ್ಸಾಹಿಸಬೇಕು. ಮಕ್ಕಳಲ್ಲಿ ಸಂವಹನ ಕೌಶಲ ಹೆಚ್ಚಲು ಚಿತ್ರ ತೋರಿಸುವುದು. ಆಂಗಿಕ ಭಾಷೆಯ ಮೂಲಕ ಹೇಳಿದರೆ ಅವರಲ್ಲಿ ಸಂವಹನ ಕಲೆ ವೃದ್ಧಿಯಾಗುತ್ತದೆ. ದೃಶ್ಯಗಳನ್ನು ತೋರಿಸಿ, ವೀಡಿಯೋಗಳನ್ನು ತೋರಿಸಿ ಅವರಿಗೆ ಕಲಿಸಲು ಪ್ರಯತ್ನಿಸಬೇಕು ಕಾಗ್ನಿಟಿವ್ ಬಿಹೇವಿಯರ್ ಥೆರಪಿ ಕೊಡಿಸಬೇಕು. ಅವರದ್ದೇ ವಯಸ್ಸಿನವರ ಜೊತೆ ಬೆರೆಯಲು ಕಲಿಸುವ ಮೂಲಕ ಆಟಿಸಂ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಬೇಕು.
2. ಮನೋವೈದ್ಯರು, ವೃತ್ತಿಪರ ಚಿಕಿತ್ಸಾ ತಜ್ಞರು, ಫಿಸಿಯೋಥೆರೆಪಿಸ್ಟ್, ಆಪ್ತ ಸಲಹೆಗಾರರು ಎಲ್ಲರೂ ಒಗ್ಗೂಡಿ ನಡವಳಿಕೆ ಚಿಕಿತ್ಸೆ ನೀಡಿದಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ. ಆಟಿಸಂ ಕಾಯಿಲೆ ಮಕ್ಕಳ ಬೌದ್ಧಿಕ, ಮಾನಸಿಕ ಬೆಳವಣಿಗೆಗೆ ತಡೆಹಿಡಿಯುತ್ತದೆ. ಸೂಕ್ತ ಚಿಕಿತ್ಸಾ ವಿಧಾನಗಳನ್ನು ಅನುಸರಿಸದೇ ಹೋದರಂತೂ ಅವರು ಪರಾವಲಂಬಿಯಾಗುವ ಅಪಾಯವಿರುತ್ತದೆ. ಇದನ್ನು ಗುಣಪಡಿಸಲು ಸದ್ಯಕ್ಕೆ ಯಾವುದೇ ಔಷಧಿಗಳಾಗಲಿ, ಶಸ್ತ್ರಚಿಕಿತ್ಸೆಗಳಾಗಲೀ ಇಲ್ಲ. ನಿರಂತರ ಕಲಿಕೆ, ವರ್ತನಾ ಚಿಕಿತ್ಸಾ ತರಬೇತಿ, ಶಿಕ್ಷಣ ಇವುಗಳ ಮೂಲಕವೇ ಹಂತಹಂತವಾಗಿ ಚಿಕಿತ್ಸೆ ನೀಡಬೇಕಾಗುತ್ತದೆ.
3. ಆಟಿಸಂ ಮಗು ಸ್ವಕೇಂದ್ರಿತವಾಗಿದ್ದು, ಇತರರ ದೃಷ್ಟಿಕೋನದಿಂದ ವಿಷಯ ವಸ್ತುಗಳನ್ನು ಅರ್ಥ ಮಾಡಿಕೊಳ್ಳಲಾರದು. ಆಟಿಸಂ ಮಗುವಿನ ಸಾಮಾಜಿಕ ವ್ಯವಹರಿಸುವಿಕೆ, ಕೌಶಲಗಳನ್ನು ಹೆಚ್ಚಿಸುವಲ್ಲಿ ಸಹ ವಯಸ್ಸಿನವರ ಪಾತ್ರ ಬಹಳ ಹೆಚ್ಚು. ಅದು ತನ್ನ ಸಹವಯಸ್ಸಿನವರ ಜೊತೆಗೆ ಕಾಲ ಕಳೆಯುವುದನ್ನು, ಒಡನಾಡುವುದನ್ನು ಕಲಿಸಬೇಕು.
4. ಶಾಲೆಯ ಚಟುವಟಿಕೆಗಳು, ಆಟ, ಮನರಂಜನೆಯ ಚಟುವಟಿಕೆಗಳ ಮೂಲಕವೂ ಸಾಧಿಸಬಹುದು. ಸಾಮಾಜಿಕ ಕೌಶಲಗಳನ್ನು ಪರಿಣಾಮಕಾರಿ ವಿಧಾನಗಳ ಮೂಲಕ ಕಲಿಸಬೇಕು, ಮಾದರಿ ತಯಾರಿಕೆ, ಮಾರ್ಗದರ್ಶನದಿಂದ ಮತ್ತು ರೋಲ್ ಫ್ಲೇ ಮುಖಾಂತರ ಕಲಿಸಬೇಕು.
5. ನಿರಾಶೆ, ಹಿಂಸೆಗಳನ್ನು ದೊಡ್ಡ ಧ್ವನಿಯಲ್ಲಿ ಪ್ರಕಟಿಸುವುದು ಆಟಿಸಂನ ವೈಶಿಷ್ಟ್ಯ. ಆಟಿಸಂ ಮಕ್ಕಳಲ್ಲಿ ಭಾವನೆಗಳ ಪ್ರಕಟಣೆಯಲ್ಲಿ ನಿರ್ದಿಷ್ಟತೆ, ನಿಖರತೆ ಇರುವುದಿಲ್ಲ. ಆತಂಕ, ಒತ್ತಡ ಉಂಟಾದಾಗ ಆಟಿಸಂ ಮಕ್ಕಳಲ್ಲಿ ಅದು ನಗುವಿನ ಪ್ರತಿಕ್ರಿಯೆಯಾಗಿ ಹೊರಹೊಮ್ಮಬಹುದು. ಆಟಿಸಂನ ವಿಚಿತ್ರವೆಂದರೆ ಪ್ರೀತಿ ತೋರುವುದು ಉದ್ದೇಶವಾದರೂ ಮಗು ಆಕ್ರಮಣಶೀಲತೆ ಪ್ರಕಟಿಸಬಹುದು. ಸ್ವಲ್ಪ ದೊಡ್ಡ ವಯಸ್ಸಿನ ಮಕ್ಕಳಿಗೆ ಕಥೆಗಳ ಮುಖಾಂತರ, ಸಂಗೀತ, ಚಿತ್ರಕಲೆ, ಅಭಿನಯದ ಮೂಲಕ ಸಂತೋಷ, ದುಃಖ, ಪ್ರೀತಿ, ಚಿಂತೆಗಳನ್ನು ಪ್ರಕಟಿಸಲು ಕಲಿಸಬೇಕು.
6. ಆಟಿಸಂ ಮಕ್ಕಳಲ್ಲಿ ಸಂವಹನ, ಆಲೋಚನೆಗಳು ಮತ್ತು ಅನಿಸಿಕೆಗಳಲ್ಲಿ ಕೊರತೆಗಳಿರುತ್ತವೆ. ಶೇ.25 ಆಟಿಸಂ ಮಕ್ಕಳು ಮಾತನಾಡುವ ಸಾಮರ್ಥ್ಯ ಪಡೆಯುವುದಿಲ್ಲ. ಜೊತೆಗೆ ಮೂಕಾಭಿನಯವೂ ಇರುವುದಿಲ್ಲ. ಆದ್ದರಿಂದ ಈ ಮಕ್ಕಳಿಗೆ ಸಂಕೇತಗಳ, ಚಿತ್ರಗಳ ಮೂಲಕ ಸಂವಹನ ಮಾಡುವುದನ್ನು ಕಲಿಸಬೇಕಾಗುತ್ತದೆ. ಅವರು ಭಾಷೆಯನ್ನು ತಮ್ಮದೇ ಆದ ರೀತಿ ಮತ್ತು ಅರ್ಥದಲ್ಲಿ ಬಳಸುತ್ತಾರೆ. (ನಾನು ಎನ್ನಬೇಕಾದ ಕಡೆ ನೀನು ಎನ್ನುತ್ತಾರೆ.) ವಿಚಿತ್ರವಾದ ಉಚ್ಚಾರವಿರುತ್ತದೆ. ಇತರರು ಹೇಳಿದನ್ನು ಪುನರುಚ್ಚರಿಸುತ್ತಾರೆ. ಇದನ್ನು ಇಕೋಲೇಲಿಯಾ ಎನ್ನುತ್ತಾರೆ. ವಿಶೇಷವೆಂದರೆ ಒತ್ತಡದಲ್ಲಿದ್ದರೆ ಮಗು ಪ್ರತಿಧ್ವನಿಯಂತೆ ಇಡೀ ಸಂಭಾಷಣೆಯನ್ನು ಪುನರುಚ್ಚರಿಸಬಹುದು.
7. ಆಟಿಸಂ ಇರುವ ವ್ಯಕ್ತಿಗಳಿಗೆ ಯಾವುದಾದ ಮೇಲೆ ಯಾವುದು ಮಾಡಬೇಕು ಎಂದು ಗೊತ್ತಾಗುವುದಿಲ್ಲ. ಶೌಚಾಲಯಕ್ಕೆ ಹೋದಾಗ ಏನೇನು ಮಾಡಬೇಕು ಎಂಬುದು ತಿಳಿಯುವುದಿಲ್ಲ. ಆ ಮಕ್ಕಳಿಗೆ ಮುಂದೇನು ಮಾಡಬೇಕೆಂಬುದರ ಕುರಿತು ಸೂಚನೆ ಕೊಡಬೇಕು.
8. ಯಾವುದೇ ಚಟುವಟಿಕೆಯ ಬಗ್ಗೆ ಸರಳ ವೇಳಾಪಟ್ಟಿ ಮಾಡಿಕೊಡಬೇಕು. ಸ್ನಾನ ಮಾಡುವ ವಿಧಾನ, ಬಟ್ಟೆ ಹಾಕಿಕೊಳ್ಳುವ ವಿಧಾನ, ಶೌಚಾಲಯಕ್ಕೆ ಹೋದಾಗ ಅನುಸರಿಸಬೇಕಾದ ಕ್ರಮಗಳು, ಒಂದಾದ ಮೇಲೆ ಒಂದನ್ನು ಹೇಳಿಕೊಡಬೇಕು. ಆಟಿಸಂ ಮಕ್ಕಳು ಭಾಗಶಃ ಕುರುಡರಂತೆ, ಕಿವುಡರಂತೆ ವರ್ತಿಸುತ್ತಾರೆ ಅನೇಕ ಮಕ್ಕಳು ಪ್ರಾರಂಭದಲ್ಲಿ ಕಿವುಡರೆಂದು ತಂದೆ-ತಾಯಿ ತಿಳಿಯುತ್ತಾರೆ. ವಾಸ್ತವಾಗಿ ಈ ಮಕ್ಕಳಿಗೆ ಶ್ರವಣದೋಷ ಇರುವುದಿಲ್ಲ. ತಾವು ನೋಡಿದ್ದನ್ನು, ಕೇಳಿದ್ದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿರುವುದೇ ಸಮಸ್ಯೆ. ಆಟಿಸಂ ವಯಸ್ಕರು ಸ್ವಕೇಂದ್ರಿತ ವ್ಯಕ್ತಿತ್ವವುಳ್ಳವರಾಗಿರುವುದರಿಂದ ಸಹವಯಸ್ಸಿನ ಹುಡುಗ/ಹುಡುಗಿಯರೊಂದಿಗೆ ಆಕರ್ಷಿತರಾಗುವುದಿಲ್ಲ.
ವರದಿ | ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿಗಳ ಪ್ರಕಟಣೆ