ವಿಶ್ವ ಮೊಸಳೆಗಳ ದಿನ, ಜಗತ್ತಿನ ದೊಡ್ಡ ಮೊಸಳೆ ಯಾವುದು? ಎಷ್ಟು ಪ್ರಕಾರದ ಮೊಸಳೆಗಳಿವೆ, ಇಲ್ಲಿವೆ ಮೊಸಳೆ ಜಗತ್ತಿನ ಸ್ವಾರಸ್ಯ ವಿಚಾರಗಳು

Crocodile 1

 

 

ಸುದ್ದಿ ಕಣಜ.ಕಾಂ | KARNATAKA | GUEST COLUMN 
ಶಿವಮೊಗ್ಗ: (WORLD CROCODILE DAY JUNE 17) ಸರೀಸೃಪ ವರ್ಗಕ್ಕೆ ಸೇರಿದ ಮೊಸಳೆಗಳು ಶೀತ ರಕ್ತ ಪ್ರಾಣಿಗಳು. ಪ್ರಸ್ತುತ ಭೂಮಿ ಮೇಲಿನ ಅತಿ ದೊಡ್ಡ ಸರೀಸೃಪ, ಜುರಾಸಿಕ್ ಯುಗದಲ್ಲಿ ಭೂಮಿಯನ್ನು ಆಳಿದ ಡೈನೋಸಾರ್ ಗಳ ಸಂಬಂಧಿಗಳು, ಸುಮಾರು 170 ಮಿಲಿಯನ್ ವರ್ಷಗಳಿಂದ ಅಷ್ಟೊಂದು ಬದಲಾವಣೆ ಹೊಂದದೆ ಭೂಮಿಯ ಬೆಚ್ಚಗಿನ ಮತ್ತು ಉಷ್ಣ ಹವಾಮಾನದ ವಲಯಗಳಲ್ಲಿ ವಿತರಣೆಗೊಂಡಿವೆ.
ಜಲವಾಸಿಗಳಾದ ಇವು ಆಹಾರದ ವೇಳೆಯನ್ನು ಬಿಟ್ಟು ಇನ್ನುಳಿದ ಸಮಯದಲ್ಲಿ ಬಿಸಿಲು ಕಾಯಿಸಲು ಭೂಮಿಗೆ ಬರುತ್ತವೆ. ಜಾಲ ಪಾದಗಳನ್ನು ಹೊಂದಿ ಶರೀರ ಈಜುವುದಕ್ಕೆ ಮಾರ್ಪಾಡಾಗಿದೆ. ಬಾಲವು ಮುಖ್ಯ ಚಲನಾಂಗವಾಗಿ ಈಜುವ ದಿಕ್ಕನ್ನು ಚುಕ್ಕಾಣಿಯಾಗಿ ನಿಯಂತ್ರಿಸುತ್ತದೆ. ಬಾಯಿ ಮತ್ತು ಬಾಲ ಆತ್ಮರಕ್ಷಣೆ ಹಾಗೂ ಬೇಟೆಯಾಡುವ ಅಂಗಗಳು, ಬಾಲಕ್ಕೆ ಬಲವಾದ ಶಕ್ತಿ ಇದ್ದು ಕೆಲ ಅಡಿಗಳಷ್ಟು ದೂರದ ಪ್ರಾಣಿಗಳನ್ನು ತನ್ನೆಡೆಗೆ ಸೆಳೆದುಕೊಳ್ಳಬಲ್ಲದು. ಮುಸುಡಿಯುದ್ದಕ್ಕೂ ಇರುವ ಟೊಳ್ಳಾದ ಹಲ್ಲುಗಳು ಬಿದ್ದು ಹೋದರೂ ಮತ್ತೆ ಹುಟ್ಟಿ ಬರುತ್ತವೆ. ಇವು ಸೋಮಾರಿಗಳಂತೆ ಕಂಡರೂ ಕೆಲವು ಸಲ ಭೂಮಿಯ ಮೇಲೆ ವೇಗವಾಗಿ ಓಡಬಲ್ಲವು.

READ | ಸೈಕಲ್ ದಿನದ ವಿಶೇಷಗಳೇನು? ಸೈಕಲ್ ತುಳಿಯುವ ಮುನ್ನ ವಹಿಸಬೇಕಾದ ಎಚ್ಚರಿಕೆಗಳೇನು?

ಮೊಸಳೆಯ ನಾಲಿಗೆ ಚಲಿಸುವುದೇ ಇಲ್ಲ!
ಮೊಸಳೆಗಳ ಕೆಳ ದವಡೆಯು ಚಲಿಸುವುದಿಲ್ಲ. ಮೇಲಿನ ದವಡೆ ಮಾತ್ರ ಮೇಲೆ ಕೆಳಗೆ ಆಡುತ್ತದೆ. ಇವುಗಳ ಅಗಲ ನಾಲಿಗೆ ಹೊರಚಾಚುವುದೇ ಇಲ್ಲ. ಹಲ್ಲುಗಳು ಬೇಟೆಯನ್ನು ಹಿಡಿಯುವುದಕ್ಕೆ ವಿನಃ ಆಹಾರವನ್ನು ಜಗಿಯುವುದಕ್ಕೆ ಅಲ್ಲ, ಇವುಗಳ ನಾಲಿಗೆ ಚಲಿಸುವುದಿಲ್ಲ, ಮುಚ್ಚಿ ತೆರೆಯುವ ಮೂಗಿನ ಹೊಳ್ಳೆ ಹಾಗೂ ಚಲಿಸುವ ಪಾರದರ್ಶಕ ಕಣ್ಣಿನ ಪೆÇರೆ ಜಲವಾಸಕ್ಕೆ ಯೋಗ್ಯವಾಗಿದೆ. ನೀರಿನಲ್ಲಿ ಮುಳುಗಿದಾಗ ತಲೆಯ ಮೇಲಿನ ಉಬ್ಬಿನಲ್ಲಿರುವ ಕಣ್ಣು ಹಾಗು ಮೂಗಿನ ಹೊರಳೆ ಮಾತ್ರ ಕಾಣಿಸುವುದರಿಂದ ಗುರುತಿಸುವುದು ಕಷ್ಟ,
ಕೊಳೆತ ಮಾಂಸ ಇಷ್ಟಪಡುವ ಮೊಸಳೆ
ಇವು ಅಪ್ಪಟ ಮಾಂಸಾಹಾರಿಗಳು ಮಾಂಸವನ್ನು ಇಡಿಯಾಗಿ ನುಂಗುವ ಇವು ಹಸಿ ಮಾಂಸಕ್ಕಿಂತ ಕೊಳೆತ ಮಾಂಸವನ್ನು ಹೆಚ್ಚು ಇಷ್ಟಪಡುತ್ತವೆ. ಮೀನು ಆಮೆ ನೀರು ಹಾವು ಆಡು ಕುರಿ ದನ ಕರುಗಳನ್ನು ತಿನ್ನುತ್ತವೆ. ಇವುಗಳ ಜೀರ್ಣ ಕ್ರಿಯೆಯ ರಸಗಳು ಸತ್ವಯುತವಾಗಿರುವುದರಿಂದ ಗಟ್ಟಿ ಎಲುಬು ಚಿಪ್ಪುಗಳು ಸುಲಭವಾಗಿ ಜೀರ್ಣವಾಗುತ್ತದೆ, ಆಹಾರ ಇಲ್ಲದೆ ಅನೇಕ ದಿನ ಇರಬಲ್ಲವು.ಶರೀರದ ಉಷ್ಣತೆ ಮಿತಿಯಲ್ಲಿ ಇರಿಸಲು ಬಿಸಿಲಿನಲ್ಲಿ ಮಲಗುತ್ತವೆ.
ಸಾಮಾನ್ಯವಾಗಿ ಸಂಘ ಜೀವಿಗಳು, ಎಲ್ಲ ಮೊಸಳೆಗಳಿಗೆ ಲೈಂಗಿಕ ಗ್ರಂಥಿಗಳಿದ್ದು, ಬೆದೆಯ ಕಾಲದಲ್ಲಿ ಈ ಗ್ರಂಥಿಗಳಿಂದ ಕಾಮೋತ್ತೇಜಕ ದ್ರವ ಒಸರುತ್ತದೆ. ಮಿಲನ ಕಾಲದಲ್ಲಿ ಗಂಡು ಮತ್ತು ಹೆಣ್ಣು ನೀರಿನಲ್ಲಿ ಸುತ್ತುತ್ತವೆ. ನಂತರ ಗಂಡು ಹೆಣ್ಣಿನ ಮೇಲೆ ಏರಿ ಲೈಂಗಿಕ ಕ್ರಿಯೆ ಮಾಡುತ್ತದೆ.
ಮೊಸಳೆಯ ಮಾತೃ ವಾತ್ಸಲ್ಯ
ಹೆಣ್ಣು ಗುಂಡಿಯನ್ನು ತೋಡಿ ಮೊಟ್ಟೆ ಇಟ್ಟ ನಂತರ ಗೂಡು ಸಾಕಷ್ಟು ಎತ್ತರವಾಗುವಂತೆ ಕಸ ಕಡ್ಡಿಗಳಿಂದ ಮುಚ್ಚುತ್ತದೆ, ಗೂಡು ನೀರಿನಿಂದ ಸಾಕಷ್ಟು ದೂರ ಇರುವಂತೆ ಅಂದಾಜಿಸಿ ಗಟ್ಟಿ ಕವಚದ ಬಿಳಿ ಬಣ್ಣದ ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಗಳ ರಕ್ಷಣೆಗಾಗಿ ಗೂಡಿನ ಅಕ್ಕ ಪಕ್ಕದಲ್ಲೇ ತಾಯಿ ಇರುತ್ತದೆ, ನೈಸರ್ಗಿಕ ಉಷ್ಣತೆಗೆ ಹೊರಬರುವ ಮರಿಗಳು ವಿಶೇಷ ಶಬ್ದ ಹೊರಡಿಸಿ ತಾಯಿಯ ಗಮನ ಸೆಳೆಯುತ್ತವೆ. ತಾಯಿಯು ಮರಿಗಳನ್ನು ಬಾಯಿಯೊಳಗೆ ಇಟ್ಟು ಸುರಕ್ಷಿತವಾಗಿ ನೀರಿನ ಮೂಲಕ್ಕೆ ಕೊಂಡೊಯ್ದು ಬಿಡುತ್ತದೆ. ಜಾಗತಿಕ ಹವಾಮಾನ ವೈಪರಿತ್ಯವು ಇವುಗಳ ಲಿಂಗಾನುಪಾತವನ್ನು ವ್ಯತ್ಯಾಸ ಮಾಡುತ್ತಿದೆ.
ಮೊಸಳೆಗೆ ಒಂದೆರಡಲ್ಲ ವೈರಿಗಳು
ಮೊಸಳೆಗಳ ಮೊಟ್ಟೆಗಳನ್ನು ಉಡ, ಮುಂಗುಸಿ, ನರಿ, ಕಾಡು ಹಂದಿಗಳು ಕದಿಯುತ್ತವೆ. ಬೆಳೆದ ಮೇಲೆ ಮನುಷ್ಯನನ್ನು ಬಿಟ್ಟರೆ ಹೆಚ್ಚಿನ ನೈಸರ್ಗಿಕ ಶತ್ರುಗಳು ಇಲ್ಲದ್ದಿದ್ದರೂ ಮರಿಗಳಿದ್ದಾಗ ವಿವಿಧ ಪಕ್ಷಿ ಮೀನು ನೀರು ನಾಯಿಗಳು ಬೇಟೆಯಾಡುತ್ತವೆ. ದಕ್ಷಿಣ ಅಮೆರಿಕಾದ ಅಮೆಜಾನ್ ನದಿಯ ಮೊಸಳೆಗಳನ್ನು ಜಾಗ್ವಾರ್ ಸುಲಭವಾಗಿ ಬೇಟೆಯಾಡಬಲ್ಲದು.

  • ಮೊಸಳೆಗಳಲ್ಲಿ ಸುಮಾರು 24 ಜಾತಿಗಳನ್ನು ಗುರುತಿಸಿದ್ದಾರೆ. ನಮ್ಮ ದೇಶದಲ್ಲಿ ಮೂರು ಜಾತಿ ಮೊಸಳೆಗಳು ಇವೆ. 
  • ಮಗ್ಗರ್ ಅಥವಾ ಜವುಗು ಮೊಸಳೆ (muggar or Marsh Crocodile) | ಮಗ್ಗರ್ ಮೊಸಳೆಗಳು ನದಿ, ಸರೋವರ ಕೆರೆ ಸಿಹಿನೀರಲ್ಲಿ ವಾಸಿಸುತ್ತವೆ.
  • ಉಪ್ಪು ನೀರಿನ ಮೊಸಳೆ (Estuarine or Salt water Crocodile) | ಉಪ್ಪು ನೀರಿನ ಮೊಸಳೆಗಳು ಸಾಗರ ಸಮುದ್ರದಲ್ಲಿ ಕಂಡು ಬರುತ್ತವೆ, ಈ ಉಪ್ಪು ನೀರಿನ ಮೊಸಳೆಗಳ ದೇಹದಲ್ಲಿ ಹೆಚ್ಚಾದ ಉಪ್ಪು ಕಣ್ಣಿನ ಸಮೀಪದ ಗ್ರಂಥಿಗಳಿಂದ ನೀರಾಗಿ ಹೊರಬರುತ್ತದೆ. ಈ ಕ್ರಿಯೆಗೆ ಮೊಸಳೆ ಕಣ್ಣಿರು ಎಂದು ಕರೆದಿರಬೇಕು. ಇವು ಮೊಟ್ಟೆ ಇಡಲು ನದಿ ಸಮುದ್ರ ಕೂಡುವ ಕಾಂಡ್ಲಾ ಕಾಡಿಗೆ ಬರುತ್ತವೆ.
  • ಘರಿಯಾಲ ಅಥವಾ ಗವಿಯಾಲ ಮೊಸಳೆ (Gharial or Long Snouted Crocodile) | ಘರಿಯಾಲ ಮೊಸಳೆಗಳು ಕೇವಲ ಉತ್ತರ ಭಾರತ ಹಾಗು ನೇಪಾಳಕ್ಕೆ ಸೀಮಿತವಾಗಿವೆ. ಉತ್ತರ ಭಾರತದ ಕೆಲವು ವೇಗವಾಗಿ ಹರಿಯುವ ನದಿಗಳ ಆಳವಾದ ಹೊಂಡಗಳಲ್ಲಿ ನೆಲೆಸಿವೆ.

READ | ಇಂದು ವಿಶ್ವ ಆಟಿಸಂ ಜಾಗೃತಿ ದಿನ, ಮಕ್ಕಳಲ್ಲಿನ ಆರಂಭಿಕ ಲಕ್ಷಣಗಳೇನು? ಅದಕ್ಕೇನು ಪರಿಹಾರ? ಗೊತ್ತಿರಲಿ ಈ ಮಾಹಿತಿಗಳು

ನೋಡಲು ಒಂದೇ ರೀತಿಯಿದ್ದರೂ ಪ್ರಭೇದ ಹಲವು
Madras Crocodile Bank Trust  ತಮಿಳುನಾಡಿನಲ್ಲಿರುವ ಈ ಸಂಸ್ಥೆ ಭಾರತದಲ್ಲಿ ಅಪಾಯದಲ್ಲಿರುವ ಕೆಲವು ಸರೀಸೃಪಗಳನ್ನು ಬಂಧನದಲ್ಲಿ ಸಂತಾನೋತ್ಪತ್ತಿ ಮಾಡುತ್ತಿದೆ. ಅದರಲ್ಲಿ Gharial ಮೊಸಳೆಯೂ ಒಂದಾಗಿದೆ.
ಮೊಸಳೆಗಳು ನೋಡಲು ಒಂದೇ ತರನಾಗಿದ್ದರೂ ಪ್ರಪಂಚದಾದ್ಯಂತ ಕೆಲವು ವಿಭಿನ್ನ ಹೆಸರಿನಿಂದ ಕರೆಯುತ್ತಾರೆ.

  • ಅಲಿಗೇಟರ್ (Alligator) ಇವು ಅಮೆರಿಕಾ ಹಾಗು ಚೀನಾದ ಕೆಲವೆಡೆ ಕಂಡುಬರುವ ಸಿಹಿನೀರಿನ ಮೊಸಳೆಗಳು,ಇವುಗಳ ಮುಸುಡಿ ಮೊಸಳೆಗಳಂತೆ (Crocodile) ಚೂಪಾಗಿರದೆ U ಆಕಾರದಲ್ಲಿರುತ್ತವೆ.
  • ದಕ್ಷಿಣ ಅಮೆರಿಕಾದ ಅಮೆಜಾನ್ ನದಿಯ ಮೊಸಳೆಗಳಿಗೆ ಕೇಮನ್ ((Caiman) ಎನ್ನುತ್ತಾರೆ.
  • ಉಪ್ಪು ನೀರಿನ ಮೊಸಳೆಗಳೆ ಗಾತ್ರದಲ್ಲಿ ದೊಡ್ಡವು,ಪಿಲಿಪೈನ್ಸ್ ದೇಶದಲ್ಲಿ ಮನುಷ್ಯರಿಗೆ ತೊಂದರೆ ಕೊಡುತ್ತಿದ್ದ ಲೊಲೊಂಗ್ ಹೆಸರಿನ ಮೊಸಳೆಯನ್ನು ಸೆರೆ ಹಿಡಿದು ತೂಕ ಮಾಡಿದಾಗ ಬರೊಬ್ಬರಿ 20 ಅಡಿ 3 ಇಂಚು ಉದ್ದವಿದ್ದು 1075 ಕೆಜಿ ತೂಗುತ್ತಿತ್ತು. ಬಂಧನದಲ್ಲಿಟ್ಟಿದ್ದ ಈ ಮೊಸಳೆ ಇತ್ತೀಚಿಗೆ (2013) ಮೃತಪಟ್ಟಿತು.
  • ನೀರಿನಲ್ಲಿ ಇದ್ದಾಗ ಮೊಸಳೆಗಳಿಗೆ ಅಗಾಧ ಶಕ್ತಿ ಗಜೇಂದ್ರ ಮೋಕ್ಷದ ಕಥೆಯನ್ನು ಇಲ್ಲಿ ಸ್ಮರಿಸಬಹುದು. ಬಹಳ ಬಿಗಿ ಹಿಡಿತದಿಂದ ದೊಡ್ಡ ದೊಡ್ಡ ಪ್ರಾಣಿಗಳನ್ನೇ ಬಲಿ ಹಾಕುವ ಮೊಸಳೆಗಳ ಕಣ್ಣುಗಳು ಬಲು ಸೂಕ್ಷ್ಮ, ಕೇವಲ ನಮ್ಮ ಕೈ ಬೆರಳುಗಳಿಂದ ಅವುಗಳ ಕಣ್ಣುಗಳನ್ನು ತಿವಿದರೂ ಸಾಕು ಎಂತಹ ಬಿಗಿ ಹಿಡಿತವನ್ನು ಸಹ ಸಡಿಲಗೊಳಿಸುತ್ತದೆ. ಬಹಳಷ್ಟು ಪರಿಣಿತರು ಈ ತಂತ್ರ ಬಳಸಿ ಮೊಸಳೆ ಬಾಯಿಂದ ಬಚಾವಾಗಿದ್ದಾರೆ.
  • ಮೊಸಳೆಗಳನ್ನು ಚರ್ಮ ಮಾಂಸ, ಸಾಕು ಪ್ರಾಣಿಗಳನ್ನು ಬೇಟೆಯಾಡುತ್ತವೆ ಎಂಬ ಕಾರಣಕ್ಕಾಗಿ ಕೊಲ್ಲಲಾಗುತ್ತಿದೆ, ಇವುಗಳ ಮೊಟ್ಟೆಗಳನ್ನು ಆಹಾರವಾಗಿ ಉಪಯೋಗಿಸುವುದರಿಂದ ಇವುಗಳ ಸಂತತಿ ಕುಸಿಯುತ್ತಿದೆ. ಇವುಗಳು ಜನವಸತಿಯತ್ತ ಕಂಡು ಬಂದರೆ ಅರಣ್ಯ ಇಲಾಖೆಗೆ ಮಾಹಿತಿ ಕೊಡಬೇಕು,ಮೊಸಳೆಗಳು ವನ್ಯಜೀವಿ ಕಾಯ್ದೆಯಡಿ ಸಂರಕ್ಷಣೆಗೆ ಒಳಪಟ್ಟಿವೆ.
    ನಾಗರಾಜ್ ಬೆಳ್ಳೂರು , ನಿಸರ್ಗ ಕನ್ಜರ್ವೇಶನ್ ಟ್ರಸ್ಟ್

https://suddikanaja.com/2022/01/29/needs-protection-to-pangolin-in-western-ghats/

Leave a Reply

Your email address will not be published. Required fields are marked *

error: Content is protected !!