
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮತದಾರರ ಪಟ್ಟಿ(voter list)ಯಲ್ಲಿ ಸೇರ್ಪಡೆ, ಬದಲಾವಣೆ ಇತ್ಯಾದಿಗಳ ಕುರಿತಾಗಿ 1.08 ಲಕ್ಷ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ (Dr S Selvakumar) ಹೇಳಿದರು.
READ | ವಿದ್ಯಾರ್ಥಿಗಳೇ ನಿರ್ಮಿಸಿದ 15 ವರ್ಷಗಳ ಅಡಿಕೆ ತೋಟ ವೀಕ್ಷಿಸಿದ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಕರೆಯಲಾಗಿದ್ದ ಅಧಿಕಾರಿಗಳ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿ, ಸಲ್ಲಿಸಿರುವ ಅರ್ಜಿಗಳ ಪೈಕಿ 88,193 ಅರ್ಜಿಗಳನ್ನು ಇದುವರೆಗೆ ವಿಲೇವಾರಿ ಮಾಡಲಾಗಿದ್ದು, ಉಳಿದ ಅರ್ಜಿಗಳನ್ನು ನಿಗದಿತ ಕಾಲಾವಧಿಯ ಒಳಗಾಗಿ ವಿಲೇವಾರಿ ಮಾಡಬೇಕು ಎಂದು ಸೂಚನೆ ನೀಡಿದರು.
ಮತದಾರರ ಪಟ್ಟಿ ಪರಿಷ್ಕರಣೆಯ ವಿಶೇಷ ಅಭಿಯಾನ ಸಂದರ್ಭದಲ್ಲಿ ಅರ್ಹ ಕಾಲೇಜು ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಒತ್ತು ನೀಡಬೇಕು.
– ಡಾ.ಎಸ್.ಸೆಲ್ವಕುಮಾರ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ
ಜಿಲ್ಲೆಯಾದ್ಯಂತ ವಿಶೇಷ ಅಭಿಯಾನ
ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ ಅವರು ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆಯ ವಿಶೇಷ ಅಭಿಯಾನ ನವೆಂಬರ್ 20, ಡಿಸೆಂಬರ್ 3 ಮತ್ತು 4ರಂದು ಜಿಲ್ಲೆಯಾದ್ಯಂತ ನಡೆಯಲಿದೆ. ಅರ್ಹ ಮತದಾರರಿಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ಡಿಸೆಂಬರ್ 8ರವರೆಗೆ ಕಾಲಾವಕಾಶವಿದೆ. ಮತದಾರರ ಅಂತಿಮ ಪಟ್ಟಿಯನ್ನು ಜನವರಿ 5ರಂದು ಪ್ರಕಟಿಸಲಾಗುವುದು ಎಂದು ಹೇಳಿದರು.

ಎರಡು ತಾಲೂಕುಗಳಲ್ಲಿ ಮಹಿಳಾ ಮತದಾರರ ಸೇರ್ಪಡೆಗೆ ಒತ್ತು ನೀಡಿ
ಜಿಲ್ಲೆಯಲ್ಲಿ ಮತದಾರರ ಲಿಂಗಾನುಪಾತ ಒಟ್ಟಾರೆಯಾಗಿ 1014 ಇದ್ದು, ಸೊರಬ ತಾಲೂಕಿನಲ್ಲಿ 975 ಹಾಗೂ ಸಾಗರ ತಾಲೂಕಿನಲ್ಲಿ 982 ಇವೆ. ಈ ಎರಡು ತಾಲೂಕುಗಳಲ್ಲಿ ಅರ್ಹ ಮಹಿಳಾ ಮತದಾರರ ಸೇರ್ಪಡೆಗೆ ಹೆಚ್ಚಿನ ಒತ್ತು ನೀಡಬೇಕು. ಇದೇ ರೀತಿ ಜನಸಂಖ್ಯೆ ಹಾಗೂ ಮತದಾರರ ಅನುಪಾತ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ 78.46 ಹಾಗೂ ತೀರ್ಥಹಳ್ಳಿ ಕ್ಷೇತ್ರದಲ್ಲಿ 76.89 ಇದ್ದು, ರಾಜ್ಯದ ಸರಾಸರಿ ಅನುಪಾತಕ್ಕಿಂತ ಹೆಚ್ಚಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಈ ಕುರಿತು ಬಿಎಲ್.ಒಗಳು ಪರಿಶೀಲನೆ ನಡೆಸಬೇಕು ಎಂದು ಸೆಲ್ವಕುಮಾರ್ ಸೂಚನೆ ನೀಡಿದರು.
READ | ಎಜುಕೇಶನ್ ಫಂಡ್ ನೀಡುವುದಾಗಿ 12.28 ಲಕ್ಷ ರೂ. ಮೋಸ
ಜಿಲ್ಲೆಯಲ್ಲಿ 14,341,38 ಮತದಾರರು
ಈಗಾಗಲೇ ಪ್ರಕಟಿಸಲಾಗಿರುವ ಕರಡು ಮತದಾರರ ಪಟ್ಟಿಯಲ್ಲಿ ಜಿಲ್ಲೆಯಲ್ಲಿ 14,341,38 ಮತದಾರರು ಇದ್ದು, ಈ ಪೈಕಿ 7,12,088 ಪುರುಷ ಹಾಗೂ 7,22,050 ಮಹಿಳಾ ಮತದಾರರು ಇದ್ದಾರೆ. ಎಲ್ಲ ಅರ್ಹ ಮತದಾರರು ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆಗೊಳಿಸಲು ಆಂದೋಲನದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಮತದಾರರ ಪಟ್ಟಿಯಲ್ಲಿ ಆಧಾರ್ ಲಿಂಕಿಂಗ್ ಕಾರ್ಯವನ್ನು ಚುರುಕುಗೊಳಿಸಬೇಕು. ಈ ಕುರಿತು ಮತದಾರರನ್ನು ಮನವೊಲಿಸುವ ಕಾರ್ಯವನ್ನು ಮನೆ ಮನೆ ಭೇಟಿ ಸಂದರ್ಭದಲ್ಲಿ ಬಿಎಲ್.ಒಗಳು ಮಾಡಬೇಕು. ರಾಜಕೀಯ ಪಕ್ಷಗಳು ನೇಮಕ ಮಾಡಿರುವ ಮತಗಟ್ಟೆ ಏಜೆಂಟರು ಸಹ ಈ ಕಾರ್ಯದಲ್ಲಿ ಪ್ರಯತ್ನಿಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ್ ಎಲ್ಲ ತಾಲೂಕು ತಹಸೀಲ್ದಾರ್’ಗಳು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.