
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಪುರಾಣ ಪ್ರಸಿದ್ಧ ಕೋಟೆ ಶ್ರೀಸೀತಾರಾಮಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಸಂಜೆಯಾಗುತ್ತಿದ್ದಂತೆ ಕತ್ತಲೆ ವಾಸದ ದುರಂತ ಸ್ಥಿತಿ ಒದಗಿಬಂದಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.
ದೇವಸ್ಥಾನದಲ್ಲಿ ಕಳೆದ ನಾಲ್ಕಾರು ದಿನಗಳಿಂದ ವಿದ್ಯುತ್ ನಿಲುಗಡೆಯಾಗಿದೆ. ಪ್ರತಿನಿತ್ಯ ಬೆಳಕಿಗಾಗಿ ಜನರೇಟರ್’ಗಳನ್ನು ಬಳಸಲಾಗುತ್ತಿದೆ. ಭಕ್ತರೇ ಪ್ರತಿನಿತ್ಯ ಡಿಸೇಲ್ ವೆಚ್ಚ ನಿರ್ವಹಿಸುತ್ತಿದ್ದಾರೆ ಎಂದು ಜಿಲ್ಲಾಡಳಿತಕ್ಕೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಲಾಗಿದೆ.
READ | ವಿದ್ಯಾರ್ಥಿಗಳೇ ನಿರ್ಮಿಸಿದ 15 ವರ್ಷಗಳ ಅಡಿಕೆ ತೋಟ ವೀಕ್ಷಿಸಿದ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ
ಯುವ ಕಾಂಗ್ರೆಸ್ ಆರೋಪಗಳೇನು?
ಮುಜರಾಯಿ ಇಲಾಖೆ ಸಕಾಲಕ್ಕೆ ವಿದ್ಯುತ್ ಬಾಕಿ ಪಾವತಿ ಮಾಡದಿರುವುದರಿಂದ ಮೆಸ್ಕಾಂನಿಂದ ನಗರದ ಪುರಾಣ ಪ್ರಸಿದ್ಧ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ವಿದ್ಯುತ್ ಕಡಿತ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಬೆಳಕಿಗಾಗಿ ಜನರೇಟರ್ಗಳೇ ಗತಿಯಾಗಿವೆ. ಕೂಡಲೇ ಸಂಬಂಧಪಟ್ಟವರು ಇದರೆಡೆಗೆ ಗಮನಹರಿಸಿ ಬಿಲ್ ಪಾವತಿಸಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲವಾದರೆ ಹೋರಾಟ ನಡೆಸುವುದು ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.
ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪ್ರವೀಣ್ ಕುಮಾರ್, ಜಿಲ್ಲಾಧ್ಯಕ್ಷ ಎಚ್.ಪಿ. ಗಿರೀಶ್, ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಎಸ್.ಕುಮರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ರಾಹುಲ್, ಪುಷ್ಪಕ್ ಕುಮಾರ್, ಎಂ.ರಾಕೇಶ್, ವೆಂಕಟೇಶ್ ಕಲ್ಲೂರು, ಸುಹಾಸ್ ಗೌಡ, ಮಸ್ತಾನ್ ಉಪಸ್ಥಿತರಿದ್ದರು.