ಸುದ್ದಿ ಕಣಜ.ಕಾಂ ಸಾಗರ
SAGAR: ಶ್ರೀ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವವು ಮೂರು ವರ್ಷಗಳಿಗೊಮ್ಮೆ ಅದ್ಧೂರಿಯಾಗಿ ನಡೆಸುತ್ತಾ ಬರಲಾಗುತ್ತಿದ್ದು, ಸಮಿತಿಯು ಜಾತ್ರಾ ಮಹೋತ್ಸವಕ್ಕೆ ಪರವಾನಗಿ ಕೋರಿದ್ದು, ಅದರನ್ವಯ ಶಿವಮೊಗ್ಗ ಜಿಲ್ಲಾಡಳಿತ ಷರತ್ತುಗಳನ್ನು ವಿಧಿಸಿ ಜಾತ್ರೆಗೆ ಒಪ್ಪಿಗೆ ನೀಡಿದೆ.
ಕರ್ನಾಟಕ ಪಬ್ಲಿಕ್ ಹೆಲ್ತ್ ಆ್ಯಕ್ಟ್ (karnataka public health act) ಕಲಂ 146 ಅನ್ವಯ ಹಾಗೂ ಸರ್ಕಾರಿ ಅಧಿಸೂಚನೆ (Government notification) ನಂ. 8422 ಪಿಎಚ್ 34/55-56 31.08.1956 ರಲ್ಲಿ ದತ್ತವಾದ ಅಧಿಕಾರದನ್ವಯ ಸಾಗರ (sagar) ತಾಲ್ಲೂಕಿನ ನಗರಸಭಾ ವ್ಯಾಪ್ತಿಯನ್ನು ಜಾತ್ರಾ ಪ್ರದೇಶವೆಂದು ಘೋಷಿಸಲಾಗಿದ್ದು, ಈ ಆದೇಶವು ಫೆಬ್ರವರಿ 7 ರಿಂದ 15ರ ವರೆಗೆ ಸಾಗರ ನಗರಸಭೆ ವ್ಯಾಪ್ತಿಯಲ್ಲಿ ಜಾರಿಯಲ್ಲಿರುತ್ತದೆ.
READ | ಸಾಗರ ಮಾರಿಕಾಂಬ ಜಾತ್ರಾ ಮಹೋತ್ಸವ ಹಿನ್ನೆಲೆ ಪಾರ್ಕಿಂಗ್’ಗೆ ಕಂಡಿಷನ್, ಎಲ್ಲೆಲ್ಲಿ ಪಾರ್ಕಿಂಗ್ ನಿಷೇಧ?
ಜಾತ್ರಾ ಮಹೋತ್ಸವಕ್ಕೆ ವಿಧಿಸಲಾದ ಷರತ್ತುಗಳು
- ಜಾತ್ರಾ ಸಮಯದಲ್ಲಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಬಗ್ಗೆ ನಗರಸಭೆಯ ಸಹಕಾರದೊಂದಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳತಕ್ಕದ್ದು.
- ಜಾತ್ರಾ ಸಮಯದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಸೇರಲಿರುವುದರಿಂದ ಯಾವುದೇ ಸಾಂಕ್ರಾಮಿಕ ರೋಗಗಳು ಹರಡದಂತೆ (Epidemic Diseases Act, 1897) ಅನ್ವಯ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಸೂಕ್ತ ಮುಂಜಾಗ್ರಾತಾ ಕ್ರಮಗಳನ್ನು ಕೈಗೊಳ್ಳತಕ್ಕದ್ದು.
- ಜಾತ್ರಾ ಸಮಯದಲ್ಲಿ ಪ್ರತಿ ನಿತ್ಯ ತ್ಯಾಜ್ಯವಸ್ತುಗಳನ್ನು ತೆರವುಗೊಳಿಸುವ ಬಗ್ಗೆ ನಗರಸಭೆ ಸಹಕಾರದೊಂದಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳತಕ್ಕದ್ದು.
- ಪೊಲೀಸ್ ಇಲಾಖೆಯವರು ಗುರುತಿಸಿದ ಸ್ಥಳಗಳಲ್ಲಿ ಜಾತ್ರೆಗೆ ಬರುವ ವಾಹನಗಳ ನಿಲುಗಡೆ ಮಾಡುವ ಬಗ್ಗೆ ನಗರಸಭೆಯ ಸಹಕಾರದೊಂದಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳತಕ್ಕದ್ದು.
- ಜಾತ್ರಾ ಸಮಯದಲ್ಲಿ ಯಾವುದೇ ಬೆಂಕಿ ಆಕಸ್ಮಿಕಕ್ಕೆ ಕಾರಣವಾಗಬಹುದಾದಂತಹ ವಸ್ತುಗಳನ್ನು ಚಪ್ಪರ ಇತ್ಯಾದಿ ಉಪಯೋಗಿಸದಿರಲು ತಿಳಿಸಿದೆ. ಸೂಕ್ತ ಕ್ರಮವಹಿಸಲು ಆಕಸ್ಮಿಕದ ಸಂದರ್ಭದಲ್ಲಿ ಅಗ್ನಿಶಾಮಕ ಇಲಾಖೆಯ ಸಹಕಾರದೊಂದಿಗೆ ತಕ್ಷಣವೇ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳತಕ್ಕದ್ದು.
- ಜಾತ್ರಾ ಸಮಯದಲ್ಲಿ ಅಕ್ರಮ ಮಧ್ಯ ಮಾರಾಟ ನಡೆಯದಂತೆ ಅಬಕಾರಿ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು.
- ಜಾತ್ರಾ ಸಮಯದಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಹಾಗೂ ವಾಹನಗಳು ಸೇರಲಿರುವುದು ಸಾರ್ವಜನಿಕರ ಓಡಾಟಕ್ಕೆ ಹಾಗೂ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗದಂತೆ, ರಕ್ಷಣಾ ಇಲಾಖೆ/ಸಾರಿಗೆ ಇಲಾಖೆಯ ಸಹಕಾರದೊಂದಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳತಕ್ಕದ್ದು.
- ರಥೋತ್ಸವ ಸಂದರ್ಭದಲ್ಲಿ ಸುರಕ್ಷಿತ ರಸ್ತೆ ಮತ್ತು ರಥದ ಭದ್ರತೆ ಕುರಿತಂತೆ ಸ್ಥಳೀಯ ಲೋಕೋಪಯೋಗಿ ಇಲಾಖಾ ಅಧಿಕಾರಿಗಳಿಂದ ಪರಿಶೀಲನ ಮಾಡಿಸುವುದು.
- ಜಾತ್ರಾ ಸಮಯದಲ್ಲಿ ಕಾನೂನು ಬಾಹಿರವಾದ ಆಟಗಳನ್ನು ಮತ್ತು ಅಶ್ಲೀಲ ಮಟ್ಟದ ಮನೋರಂಜನಾ ಕಾರ್ಯಕ್ರಮಗಳು ನಡೆಯದಂತೆ ಜಾತ್ರಾ ಸಮಿತಿಯವರಿಗೆ ಸೂಚಿಸಿದೆ.
- ಜಾತ್ರಾ ಸಂದರ್ಭದಲ್ಲಿ ಯಾವುದೇ ರೀತಿಯ ಪ್ರಾಣಿಗಳಿಗೆ ಹಿಂಸಿಸದಂತೆ ಪ್ರಾಣಿ ಬಲಿ ಮಾಡದಂತೆ ಪಶುಪಾಲನಾ ಇಲಾಖೆಯ ಸಹಕಾರದೊಂದಿಗೆ ಸೂಕ್ತ ಕ್ರಮ ಕೈಗೊಳ್ಳತಕ್ಕದ್ದು.
- ಜಾತ್ರಾ ಪ್ರದೇಶದ ಅಂಗಡಿ- ಮುಂಗಟ್ಟುಗಳು ಮತ್ತು ಅಮ್ಯೂಸ್ ಮೆಂಟ್ ಸ್ಥಳಗಳ ಹರಾಜನ್ನು ಕ್ರಮಬದ್ಧವಾಗಿ ನಡೆಸುವುದು.
- ಜಾತ್ರಾ ಸಮಯದಲ್ಲಿ ಯಾವುದೇ ರೀತಿಯಲ್ಲಿ ಶಾಂತಿಗೆ ಭಂಗ ಉಂಟಾಗದಂತೆ, ಕಾನೂನು ಮತ್ತು ಶಾಂತಿ ಪಾಲನೆ ಬಗ್ಗೆ ರಕ್ಷಣಾ ಇಲಾಖೆಯ ಸಹಕಾರದೊಂದಿಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳತಕ್ಕದ್ದು.
- ಸಾರ್ವಜನಿಕರ ಉಪಯೋಗಕ್ಕಾಗಿ ದೊಡ್ಡದಾದ ನಾಮಫಲಕದೊಂದಿಗೆ ಪೊಲೀಸ್ ಇಲಾಖೆಯಿಂದ ಸೂಚಿಸಿದ ಸ್ಥಳದಲ್ಲಿ ಮಾಹಿತಿ ಕೇಂದ್ರ ನಿರ್ಮಿಸಲು ಜಾತ್ರಾ ಸಮಿತಿಯವರಿಗೆ ಸೂಚಿಸಿದೆ.
- ಸಮಿತಿ ವತಿಯಿಂದ ಪೊಲೀಸ್ ಇಲಾಖೆ ಸೂಚಿಸಿದ ಸ್ಥಳಗಳಲ್ಲಿ ತಾತ್ಕಾಲಿಕ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಸೂಚಿಸಿದೆ.
- ಶ್ರೀ ಮಾರಿಕಾಂಬ ಜಾತ್ರಾ ಸಮಿತಿ ಸದಸ್ಯರುಗಳಿಗೆ, ನಗರ ಸಭೆ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಯವರಿಗೆ ಭಾವಚಿತ್ರ ಇರುವ ಗುರುತಿನ ಚೀಟಿ ನೀಡುವಂತೆ ಜಾತ್ರಾ ಕಮಿಟಿಯವರಿಗೆ ಸೂಚಿಸಿದೆ.
- ಎಲ್ಲ ಸ್ಟಾಲ್‌ಗಳು, ಮನರಂಜನೆ, ಯಕ್ಷಗಾನ, ನಾಟಕ, ಅಮ್ಯೂಸ್‌ಮೆಂಟ್‌ಗಳು ರಾತ್ರಿ 11-00 ಗಂಟೆಯೊಳಗಾಗಿ ಬಂದ್ ಮಾಡುವಂತೆ ಸೂಚಿಸಿದೆ.
- ಜಾತ್ರಾ ಸಂದರ್ಭದಲ್ಲಿ ಬೆತ್ತಲೆ ಸೇವೆಗಳು ನಡೆಯದಂತೆ ಜಾತ್ರಾ ಸಮಿತಿರವರು ಕ್ರಮವಹಿಸುವುದು.
- ಜಾತ್ರಾ ಸಮಿತಿಯವರು ಸ್ಥಳೀಯ ಕಂದಾಯ, ಪೊಲೀಸ್, ಅಗ್ನಿಶಾಮಕ, ಆರೋಗ್ಯ, ನಗರಸಭೆ, ಅಧಿಕಾರಿಗಳೊಂದಿಗೆ ಸಹಕರಿಸುವಂತೆ ಅಗತ್ಯ ಮುನ್ನಚ್ಚರಿಕೆ ಕ್ರಮ ಕೈಗೊಳ್ಳತಕ್ಕದ್ದು ಹಾಗೂ ಸದರಿರವರ ನಿರಾಕ್ಷೇಪಣಾ ಪತ್ರದಲ್ಲಿ ನೀಡಿರುವ ಷರತ್ತುಗಳನ್ನು ಪಾಲನೆ ಮಾಡುವಂತೆ ಸೂಚಿಸಿದೆ.
- ಜಾತ್ರೆಯ ಲೆಕ್ಕಪತ್ರದ ಬಗ್ಗೆ ದಿನನಿತ್ಯದ ಆದಾಯದ ಬಗ್ಗೆ ತಹಶೀಲ್ದಾರ್, ಸಾಗರ ಇವರಿಗೆ ಅಗತ್ಯ ವಿವರ ನೀಡತಕ್ಕದ್ದು. ಜಾತ್ರೆಯ ನಂತರ ಹತ್ತು ದಿನದೊಳಗಾಗಿ ಲೆಕ್ಕಪತ್ರದ ವಿವರವನ್ನು ಸಾಗರ ಉಪವಿಭಾಗಾಧಿಕಾರಿಗೆ ಒಪ್ಪಿಸತಕ್ಕದ್ದು.
https://suddikanaja.com/2023/02/03/science-museum-at-sahyadri-college-shivamogga/