
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಈಗ ಎಲ್ಲೆಡೆ ಕಾಳಿಂಗ ಸರ್ಪಗಳು ಹೆಚ್ಚು ಕಾಣತೊಡಗಿವೆ. ಮಾರ್ಚ್ ತಿಂಗಳಿಂದ ಕಾಳಿಂಗ ಸರ್ಪಗಳ ಮಿಲನ ಆರಂಭ ಎನ್ನಬಹುದು.
READ | ಸರ್ಪ ಜಗತ್ತಿನ ವಿಶೇಷ ಇಲ್ಲಿದೆ, ಹಾವು ಕಡಿತ ತಪ್ಪಿಸಲು ಹೀಗೆ ಮಾಡಿ
ಬೆದೆಗೆ ಅಥವಾ ಹೀಟಿಗೆ ಬಂದ ಹೆಣ್ಣು ಕಾಳಿಂಗ ತನ್ನ ಜನನಾಂಗದಿಂದ Pheromone (ಇದೊಂದು ರಾಸಾಯನಿಕ ) ಹೊರಹಾಕಿ ತಾನು ಸಂತಾನೋತ್ಪತ್ತಿಗಾಗಿ ಮಿಲನಕ್ಕೆ (ಹೆಣೆಯಾಡುವುದು) ತಯಾರಿದ್ದೇನೆ ಎಂಬ ಸಂದೇಶ ಕೊಡುತ್ತಾಳೆ. ಈ Pheromone ವಾಸನೆ ಗ್ರಹಿಸುವ ಅಕ್ಕಪಕ್ಕದ ಗಂಡುಗಳು ಅಲ್ಲಿರುವ ಹೆಣ್ಣನ್ನು ಕೂಡಲು(ಹೆಣೆ) ಇತರ ಗಂಡುಗಳ ಜೊತೆ ಹೋರಾಟ (Combat) ನಡೆಸಿ ಗೆದ್ದ ಗಂಡು ಹೆಣ್ಣಿನ ಜೊತೆ ಮಿಲನ ಕ್ರಿಯೆ ನಡೆಸುತ್ತದೆ.
ಮಲೆನಾಡ ಜನರ ಗಮನಕ್ಕೆ
- ಒಂದು ಹೆಣ್ಣು ನಾಯಿ ಬೆದೆಗೆ (ಹೀಟಿಗೆ) ಬಂದಾಗ ಉಳಿದ ಗಂಡು ನಾಯಿಗಳು ಒಟ್ಟಾಗುವಂತೆ, ಹೆಣ್ಣು ಕಾಳಿಂಗ ಬೆದೆಗೆ ಬಂದಾಗ ಅಕ್ಕಪಕ್ಕದ ಮೂರು ನಾಲ್ಕು ಗಂಡು ಕಾಳಿಂಗಗಳು ಹುಡುಕಿ ಬರುವುದು ಸಹಜ, ಇದಕ್ಕೆ ಭಯ ಬೇಡ.
- ಹೆಣ್ಣನ್ನು ಹುಡುಕಿ ಬರುವ ಗಂಡುಗಳ ನಡುವೆ ಹೋರಾಟ ಅಥವಾ ಕುಸ್ತಿ ನಡೆಯುತ್ತದೆ, ಇದಕ್ಕೆ ಅಡ್ಡಿಪಡಿಸಬಾರದು.
- ಬೆದೆಗೆ ಬಂದ ಹೆಣ್ಣು ಕಾಳಿಂಗ ನಿಮ್ಮ ತೋಟ ಹಾಗೂ ಮನೆಯ ಅಕ್ಕಪಕ್ಕ ಬಂದು ಹೋಗಿದ್ದರೆ ಹೆಣ್ಣಿನ ವಾಸನೆಗೆ ಅಕ್ಕಪಕ್ಕದ ಗಂಡು ಕಾಳಿಂಗಗಳು ಹುಡುಕಿ ಬರುತ್ತವೆ. ಇದೇನಪ್ಪ ಇಷ್ಟು ಹಾವುಗಳು ಬಂದಿವೆಯಲ್ಲ ಎಂದು ಭಯ ಬೇಡ.
- ಹೆಣ್ಣು ಕಾಳಿಂಗ ಸರ್ಪಗಳು ಬೆದೆಗೆ ಬಂದಿರುವ ಈ ಸಮಯದಲ್ಲಿ, ಕಾಳಿಂಗ ಸರ್ಪಗಳು ಮನೆ ತೋಟದ ಅಕ್ಕ ಪಕ್ಕ ಬಂದಾಗ ಹಾವನ್ನು ಹಿಡಿಸಲೇಬೇಡಿ. ಕಾರಣ ಅಲ್ಲಿಗೆ ಬಂದ ಹೆಣ್ಣನ್ನು ಹಿಡಿದರೆ ಅಕ್ಕಪಕ್ಕದ ಗಂಡುಗಳು ಹೆಣ್ಣನ್ನು ಹುಡುಕುತ್ತಾ ನಿಮ್ಮ ತೋಟ ಮನೆಯ ಸಮೀಪವೇ ಸುತ್ತುತ್ತಿರುತ್ತವೆ.
- ಹಾವು ಕಾಣಿಸಿಕೊಂಡರೆ ತಾನಾಗಿಯೇ ಹೋಗಲು ಬಿಡಿ, ಒಂದು ವೇಳೆ ಅಲ್ಲಿ ಬಂದಿರುವ ಹಾವು ಹೆಣ್ಣಾಗಿದ್ದರೆ ಆ ಹೆಣ್ಣನ್ನು ಹುಡುಕಿ ಬರುವ ಇತರ ಗಂಡುಗಳು,ಹೆಣ್ಣು ಹೋದ ದಾರಿಯಲ್ಲೇ ಸಾಗಿ ಹೋಗುತ್ತದೆ. ಆಗ ನಮಗೆ ರಿಸ್ಕ್ ಇಲ್ಲ.
- ಒಂದುವೇಳೆ ಹೆಣ್ಣು ಹಾವನ್ನು ಹಿಡಿದು ಚೀಲ ತುಂಬಿ ಸಾಗಿಸಿದರೆ ಹೆಣ್ಣು ಸಾಗಿದ ಮಾರ್ಗವನ್ನೇ ಅನುಸರಿಸಿ ಬರುವ ಗಂಡುಗಳಿಗೆ ಹೆಣ್ಣು ಮುಂದೆ ಸಾಗಿದ ಮಾರ್ಗದ ಜಾಡು ಸಿಗದೆ ಗೊಂದಲಕ್ಕೆ ಒಳಗಾಗಿ ಅಲ್ಲಲ್ಲೇ ಸುತ್ತು ಹಾಕುತ್ತವೆ.
- ನಮ್ಮ ಜಾನುವಾರು ಬೆದೆಗೆ ಬಂದರೆ 24 ಗಂಟೆಯೊಳಗೆ ಗರ್ಭಧಾರಣೆ ಮಾಡಬೇಕು, ಇಲ್ಲದಿದ್ದರೆ ಹೀಟು ಇಳಿದು ಹೋಗುತ್ತದೆ, ಹಾಗೆಯೇ ಹೆಣ್ಣು ಕಾಳಿಂಗದ ಬೆದೆ ಚಕ್ರಕ್ಕೂ ಒಂದು ಅವಧಿ ಇದೆ ಹಾಗಾಗಿ ಅವುಗಳು ಹೆಣೆಯಾಡಲು ನಮ್ಮಿಂದ ಅಡ್ಡಿ ಬೇಡ.
- ಹಾವು ಕಂಡ ಕೂಡಲೇ ಹಾವು ರಕ್ಷಕರನ್ನು ಕರೆಸಿ ಹಿಡಿಸುವ ಚಾಳಿ ಎಲ್ಲ ಕಡೆ ಇದೆ, ಆದರೆ ಕಾಳಿಂಗಗಳ ಮಿಲನದ ಈ ತಿಂಗಳಲ್ಲಿ (ಮಾರ್ಚ್ – ಮೇ) ಅವುಗಳ ಸಂತಾನೋತ್ಪತ್ತಿಗೆ ಅಡ್ಡಿಪಡಿಸದೆ ಸುಮ್ಮನಿರೋಣ.
- ಒಂದು ಹೆಣ್ಣು ಬೆದೆಗೆ ಬಂದಾಗ ಹೊರಹಾಕುವ ರಸಾಯನಿಕ (Pheromone) ಸುತ್ತೆಲ್ಲ ಹರಡಿರುತ್ತದೆ, 15 ದಿನದ ಹಿಂದೆ ಹೆಣ್ಣು ಆ ದಾರಿಯಲ್ಲಿ ಹೋಗಿದ್ದರೂ, ಹೋದ ದಾರಿಯ ವಾಸನೆ ಗ್ರಹಿಸಿ ಗಂಡುಗಳು ಹೆಣ್ಣಿನ ಇರುವಿಕೆ ಪತ್ತೆ ಮಾಡಬಲ್ಲದು.
- ಒಂದು ವೇಳೆ ಮನೆ ಕೊಟ್ಟಿಗೆ ಒಳಗೆ ಕಾಳಿಂಗಗಳು ಬಂದರೆ ಹಿಡಿಸುವುದು ಅನಿವಾರ್ಯ, ಹಿಡಿದ ನಂತರ ಹತ್ತಿರದಲ್ಲೇ ಅದನ್ನು ಬಿಡುಗಡೆಗೊಳಿಸಿದರೆ, ಹತ್ತಿರದಲ್ಲಿರುವ ಕಾಳಿಂಗಗಳು ಪುನಃ ಸಂಪರ್ಕ ಸಾಧಿಸಬಲ್ಲವು.
- ಸಂತಾನೋತ್ಪತ್ತಿ ಕ್ರಿಯೆಯಲ್ಲಿ ತೊಡಗುವುದು ಮನುಷ್ಯನೂ ಸೇರಿ ಎಲ್ಲ ಜೀವಿಗಳ ಪ್ರಕೃತಿ ಸಹಜ ಗುಣ ಇದಕ್ಕೆ ನಾವು ಅಡ್ಡಿಪಡಿಸುವುದು ಬೇಡ.
- ಗಂಡು ಹೆಣ್ಣು ಜೋಡಿಯಾದ ಮೇಲೆ ಒಂದೇ ಜಾಗದಲ್ಲಿ ಎರಡರಿಂದ ಮೂರು ವಾರ ಇದ್ದು ಮಿಲನ ಕ್ರಿಯೆ ನಡೆಸಿ ತಮ್ಮಷ್ಟಕ್ಕೆ ತಾವು ಹೊರಟು ಹೋಗುತ್ತವೆ.
- ಕಾಳಿಂಗಗಳಲ್ಲಿ ಹೆಣ್ಣುಗಳು 7-9 ಅಡಿ ಉದ್ದ ಇದ್ದರೆ ಗಂಡುಗಳು 10-12 ಅಡಿ ಉದ್ದ ಇರುತ್ತವೆ (ಗಂಡುಗಳು ಇನ್ನೂ ಉದ್ದ ಬೆಳೆಯಬಲ್ಲವು)
- ಹಾವುಗಳು ಕಂಡಾಗ ಅರಣ್ಯ ಇಲಾಖೆಗೆ ಮಾಹಿತಿ ನೀಡೋಣ. ಹಾವುಗಳು ಕಂಡಾಗ ಪರಿಣಿತ ಉರಗ ರಕ್ಷಕರನ್ನು ಕರೆಯುವುದು ಒಳ್ಳೆಯದು.
ಕಾಳಿಂಗ ಸರ್ಪಗಳು ಮನುಷ್ಯನಿಗೆ ಯಾವುದೇ ಹಾನಿ ಮಾಡುವುದಿಲ್ಲ, ಇವುಗಳ ಬಗ್ಗೆ ಅನಗತ್ಯ ಭಯ ಬೇಡ. ಈ ಮಾರ್ಚ್ ತಿಂಗಳಿಂದ ಮೇ ವರೆಗೂ ಕಾಳಿಂಗ ಸರ್ಪಗಳ ಸಂತಾನೋತ್ಪತ್ತಿಗೆ ಅಡ್ಡಿಪಡಿಸದೇ ಇರೋಣ.
✍️ ನಾಗರಾಜ್ ಬೆಳ್ಳೂರು
Nisarga Conservation Trust
ಪಶ್ಚಿಮಘಟ್ಟದಲ್ಲಿ ಕಾಳಿಂಗ ಸರ್ಪಗಳ ಸಂಖ್ಯೆಯಲ್ಲಿ ಇಳಿಕೆ, ಕಾರಣವೇನು, ತಜ್ಞರು ಏನನ್ನುತ್ತಾರೆ?