crop damage | ಬೆಳೆ ಹಾನಿ ವರದಿ ಸಲ್ಲಿಸಲು ನ.15 ಡೆಡ್ ಲೈನ್, ಮಧು ಬಂಗಾರಪ್ಪ ನೀಡಿದ ಸೂಚನೆಗಳೇನು?

KDP Meeting

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಾಡಿಕೆ ಪ್ರಮಾಣದ ಮಳೆ ಬಾರದಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ‌ ತಾಲೂಕುಗಳಲ್ಲಿ ಬೆಳೆ ಹಾನಿ ಸಮೀಕ್ಷೆ ನಡೆಸಿ, ನ.15ರೊಳಗಾಗಿ ಸರ್ಕಾರಕ್ಕೆ ಮಾಹಿತಿ ಸಲ್ಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಸೂಚನೆ ನೀಡಿದ್ದಾರೆ. ಈ ವಿಷಯದ ಬಗ್ಗೆ ಸದನ ಸಮಿತಿಯಲ್ಲಿ ಚರ್ಚಿಸಿ ಅನುಮೋದನೆ ಪಡೆದು ಸಂತ್ರಸ್ತ ರೈತರಿಗೆ ಪರಿಹಾರಧನ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ (Madhu Bangarappa) ಹೇಳಿದರು.
ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ 2023-24ನೇ ಸಾಲಿನ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಲಾಭದಾಯಕವಾಗಿರುವ ರೇಷ್ಮೆ ಕ್ಷೇತ್ರ ವಿಸ್ತರಣೆಗೆ ಇಲಾಖೆಯ ಅಧಿಕಾರಿಗಳು ವಿಶೇಷ ಗಮನಹರಿಸಬೇಕು. ಚಾಕಿ ಸಾಕಾಣಿಕಾ ಕೇಂದ್ರ, ಹಿಪ್ಪುನೇರಳೆ ಪ್ರದೇಶಾಭಿವೃದ್ಧಿ, ರೈತರಿಗೆ ಸಹಾಯಧನ ಮುಂತಾದ ವಿಷಯಗಳ ಕುರಿತು ಆಸಕ್ತ ರೈತರಿಗೆ ಮಾಹಿತಿ ಒದಗಿಸಿ, ಪ್ರೋತ್ಸಾಹಿಸಬೇಕು. ಅಲ್ಲದೇ ಮಾರುಕಟ್ಟೆ ಸೌಲಭ್ಯ ಒದಗಿಸುವ ಕುರಿತು ಮಾಹಿತಿ ನೀಡಬೇಕು.
ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ

ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದ ಇಲಾಖಾಧಿಕಾರಿಗಳು ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಆಗಿರಬಹುದಾದ ಬೆಳೆಹಾನಿಯ ಸಮಗ್ರ ವರದಿಯನ್ನು ಯಾವುದೇ ವ್ಯತ್ಯಯಗಳಿಗೆ ಅವಕಾಶವಿಲ್ಲದಂತೆ ಮಾಹಿತಿ ಸಂಗ್ರಹಿಸಿ ಸಕಾಲದಲ್ಲಿ ಅಗತ್ಯವಿರುವ ಪರಿಹಾರಧನವನ್ನು ಬಿಡುಗಡೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬಿಡುಗಡೆಯಾದ ಪರಿಹಾರಧನವನ್ನು ಅರ್ಹ ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾಯಿಸಲಾಗುವುದು. ತೋಟಗಾರಿಕೆ ಬೆಳೆ ನಾಶವಾಗಿರುವ ಬಗ್ಗೆಯೂ ಸಮೀಕ್ಷೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

READ |  ಬೆಂಗಳೂರಿಗೆ ಎರಡು ನಾನ್ ಏಸಿ ಬಸ್ ಸಂಚಾರ ಆರಂಭ, ಇಲ್ಲಿದೆ ವೇಳಾಪಟ್ಟಿ

ಮಳೆ‌ ಕೊರತೆಯಿಂದ ಜಲಮೂಲ‌ ಕಡಿಮೆ
ಮಳೆ ಕೊರತೆ ಹಿನ್ನೆಲೆಯಲ್ಲಿ ಜಿಲ್ಲೆಯ ಜಲಮೂಲಗಳಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ ಅತ್ಯಂತ ಕಡಿಮೆಯಾಗಿದ್ದು, ಆ ನೀರನ್ನು ಸ್ಥಳೀಯ ಜನರ ಕುಡಿಯುವ ನೀರಿಗೆ ಹಾಗೂ ದೈನಂದಿನ ಅಗತ್ಯಗಳಿಗೆ ಬಳಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ 2ನೇ ಬೆಳೆಗೆ ಬಳಸದಂತೆ ಹಾಗೂ ಪರ್ಯಾಯ ಬೆಳೆಗಳನ್ನು ಬೆಳೆಯಲು ಮುಂದಾಗುವಂತೆ ಅವರು ರೈತರಲ್ಲಿ ಮನವಿ ಮಾಡುವುದಾಗಿ ತಿಳಿಸಿದ ಅವರು, ಪ್ರಸಕ್ತ ಸಾಲಿನಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಬಹುದಾಗಿದ್ದು, ಮೇವನ್ನು ನಾಶಪಡಿಸದಂತೆ ಹಾಗೂ ಸಂಗ್ರಹಿಸಿಟ್ಟು, ಅಗತ್ಯವಿರುವವರಿಗೆ ಸರಬರಾಜು ಮಾಡಲು ಸಹಕರಿಸುವಂತೆ ಸೂಚಿಸಿದ ಅವರು ಈ ಸಂಬಂಧ ಅಧಿಕಾರಿಗಳು ವಿಶೇಷ ಗಮನಹರಿಸುವಂತೆ ಮನವಿ ಮಾಡಿದರು.

ಕಳೆದ ವರ್ಷಗಳಲ್ಲಿ ಬೆಳೆಹಾನಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದ ಅನುದಾನಕ್ಕೆ ಸಮಾನವಾಗಿ ರಾಜ್ಯ ಸರ್ಕಾರವೂ ಸಹ ತನ್ನ ಪಾಲಿನ ಹಣವನ್ನು ಸೇರಿಸಿ, ಸಂತ್ರಸ್ತ ರೈತರಿಗೆ ಪರಿಹಾರಧನ ನೀಡುತ್ತಿತ್ತು. ಪ್ರಸ್ತುತ ರಾಜ್ಯ ಸರ್ಕಾರವು ನೀಡುತ್ತಿರುವ ಪರಿಹಾರವು ಭಾರೀ ಪ್ರಮಾಣದಲ್ಲಿ ಕಡಿಮೆ ಮಾಡಿದೆ. ಆದ್ದರಿಂದ ಮಾನ್ಯ ಸಚಿವರು ಮುಖ್ಯಮಂತ್ರಿಗಳ ಗಮನಸೆಳೆದು ಕೇಂದ್ರಕ್ಕೆ ಸಮಾನವಾದ ಹಣವನ್ನು ಸೇರಿಸಿ, ರೈತರಿಗೆ ಪರಿಹಾರಧನ ನೀಡಬೇಕು.
ಬಿ.ವೈ.ರಾಘವೇಂದ್ರ, ಸಂಸದ

₹1 ಲಕ್ಷ ಸಹಾಯ ಧನ
ಮಳೆಗಾಲದಲ್ಲಿ ಮಳೆಯಿಂದ ಹಾನಿಗೊಳಗಾದ ಹಾಗೂ ಬಿದ್ದುಹೋಗಿರುವ ಅಧಿಕೃತ ಮನೆಗಳಿಗೆ ಸರ್ಕಾರದಿಂದ ₹1 ಲಕ್ಷ ಸಹಾಯಧನ ನೀಡಲಾಗುತ್ತಿದೆ. ಅನಧಿಕೃತ ಮನೆಗಳಿಗೆ ಸಹಾಯಧನ ದೊರೆಯದಿರುವುದನ್ನು ಗಮನಿಸಲಾಗಿದ್ದು, ಈ ಬಗ್ಗೆ ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಪರಿಹಾರಧನ ಕೊಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಮಧು ಹೇಳಿದರು.

ಜಿಲ್ಲೆಯ ಯಾವುದೇ ತಾಲೂಕಿನಲ್ಲಿ ನಡೆಯುವ ಸರ್ಕಾರದ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಶಿಷ್ಟಾಚಾರದಂತೆ ಸ್ಥಳೀಯ ಜನಪ್ರತಿನಿಧಿಗಳಿಗೆ ಆಹ್ವಾನಿಸಬೇಕು. ನಿಯಮ ಅನುಸರಿಸುವಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಅನಿವಾರ್ಯವಾಗಲಿದೆ.
ಡಾ.ಆರ್.ಸೆಲ್ವಮಣಿ, ಜಿಲ್ಲಾಧಿಕಾರಿ

ಕೆಡಿಪಿ ಸಭೆಯಲ್ಲಿ ಕೇಳಿಬಂದ ಒತ್ತಾಯಗಳು

  1. ಮಳೆ ಕೊರತೆ ಹಿನ್ನೆಲೆಯಲ್ಲಿ ಮೀನು ಬಿತ್ತನೆಗೂ ತೀವ್ರ ತರಹದ ಹಿನ್ನೆಡೆಯಾಗಿದೆ. ಆದ್ದರಿಂದ ಮೀನು ಕೃಷಿಕರಿಗೆ ಪರಿಹಾರಧನ ಕೊಡಿಸುವಂತೆ ಶಾಸಕ ಚನ್ನಬಸಪ್ಪ ಅವರು ಸಚಿವರಿಗೆ ಮನವಿ ಮಾಡಿದರು.
  2. ಶಿವಮೊಗ್ಗ ಗ್ರಾಮಾಂತರ ಪ್ರದೇಶದ ವ್ಯಾಪ್ತಿಗೊಳಪಡುವ ತಮ್ಮಡಿಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರೈತರ ತೋಟಗಳಿಗೆ ಆನೆಗಳ ಹಿಂಡು ದಾಳಿ ಮಾಡಿ ಅಪಾರ ಪ್ರಮಾಣದ ಬೆಳೆ ನಾಶಗೊಳಿಸಿವೆ. ಚಿರತೆ, ಕರಡಿ ಹಾವಳಿ ನಿರಂತರವಾಗಿದೆ. ಅರಣ್ಯ ಇಲಾಖಾಧಿಕಾರಿಗಳು ಇತ್ತ ಗಮನಹರಿಸಬೇಕು ಎಂದು ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ್ ಮನವಿ ಮಾಡಿದರು.
  3. ಜಿಲ್ಲೆಯಲ್ಲಿ ಆಯುಷ್ ವಿಶ್ವವಿದ್ಯಾಲಯವನ್ನು ಮಂಜೂರಾಗಿ ಕೆಲವು ವರ್ಷಗಳೇ ಕಳೆದಿವೆ. ಅದರ ಆಡಳಿತ ನಿರ್ವಹಣೆಗೆ ಸಮರ್ಥ ಆಡಳಿತಾಧಿಕಾರಿಯನ್ನು ನಿಯೋಜಿಸಿ‌ ಎಂದು ವಿಧಾನ‌ಪರಿಷತ್ ಸದಸ್ಯ ಡಿ.ಎಸ್.ಅರುಣ್‌ ಆಗ್ರಹಿಸಿದರು.

ಒಂದು ವಾರದೊಳಗೆ ಔಷಧ ಪೂರೈಸಲು ಸೂಚನೆ
ಜಿಲ್ಲೆಯಲ್ಲಿನ ಗ್ರಾಮೀಣ ಪ್ರದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾವು ಮತ್ತು ನಾಯಿ ಕಡಿತಕ್ಕೆ ಔಷಧ ಇಲ್ಲದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಅಂತಹ ವೈದ್ಯಾಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು, ಔಷಧ ಇಲ್ಲದಿರುವ ಕೇಂದ್ರಗಳಿಗೆ ಔಷಧ ಸರಬರಾಜು ಮಾಡಿ ಒಂದು ವಾರದೊಳಗಾಗಿ ಮಾಹಿತಿ ನೀಡುವಂತೆ ಡಿಎಚ್.ಓ ಡಾ.ರಾಜೇಶ್ ಸುರಗೀಹಳ್ಳಿ ಅವರಿಗೆ ಡಿಸಿ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ.ಮಿಥುನ್‍ಕುಮಾರ್, ವಿಧಾನ ಪರಿಷತ್ ಸದಸ್ಯ ರುದ್ರೇಗೌಡ ಉಪಸ್ಥಿತರಿದ್ದರು.

Shimoga Railway station | ರೈಲ್ವೆ ನಿಲ್ದಾಣ ಸಮೀಪ ಭಯ ಹುಟ್ಟಿಸಿದ ಬಾಕ್ಸ್, ಉಪ್ಪಿನ ಹಿಂದಿನ ರಹಸ್ಯ ಬಿಚ್ಚಿಟ್ಟ ಎಸ್.ಪಿ, ಉಪ್ಪು ತಂದವರಿಗೆ ನೀರು ಕುಡಿಸಿದ ಖಾಕಿ

error: Content is protected !!