Shimoga election | ಶಿವಮೊಗ್ಗ ಲೋಕಸಭೆ ಚುನಾವಣೆ, ಎಲ್ಲಿ ಏನು ಎಡವಟ್ಟಾಗಿದೆ?

Election

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ಲೋಕಸಭೆ (shivamogga Lokasabha constituency election) ಸುಸೂತ್ರವಾಗಿ ಪೂರ್ಣಗೊಂಡಿದ್ದು, ಇವಿಎಂ ಯಂತ್ರಗಳಲ್ಲಿ ಅಭ್ಯರ್ಥಿಗಳ ಭವಿಷ್ಯ ಲಾಕ್ ಆಗಿದೆ. ಈ ನಡುವೆ ಜಿಲ್ಲೆಯ ಅಲ್ಲಲ್ಲಿ ಗೊಂದಲಗಳಾಗಿದ್ದು, ಕೆಲ ಹೊತ್ತು ಮತದಾನ ಪ್ರಕ್ರಿಯೆ ವಿಳಂಬವಾಗಿದೆ. ಮತಯಂತ್ರಗಳು ಕೈಕೊಟ್ಟಿವೆ.

READ | ಮತದಾನದಲ್ಲಿ ಹೊಸ ದಾಖಲೆ ಸೃಷ್ಟಿಸಿದ ಶಿವಮೊಗ್ಗ,  ಎಷ್ಟು ಪ್ರಮಾಣದ ಓಟಿಂಗ್ ಆಗಿದೆ?

→ ತಾಂತ್ರಿಕ ಸಮಸ್ಯೆಯಿಂದ ಅರ್ಧ ಗಂಟೆ ಲೇಟ್
ನಗರದ ಬಾಲರಾಜ್‌ ಅರಸ್‌ ರಸ್ತೆಯ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್‌ ಕಚೇರಿಯಲ್ಲಿರುವ ಮತಗಟ್ಟೆಯಲ್ಲಿ ಇವಿಎಂ ಯಂತ್ರದಲ್ಲಿ ತಾಂತ್ರಿಕ‌ದೋಷ ಕಂಡುಬಂದಿದೆ. ಪರಿಣಾಮ ಮತದಾನ ಅರ್ಧ ಗಂಟೆ ವಿಳಂಬವಾಗಿದೆ. ಮಾಹಿತಿ ಲಭ್ಯವಾಗಿದ್ದೇ ಇಂಜಿನಿಯರ್ ಗಳ‌ ತಂಡ ಭೇಟಿ ನೀಡಿ ಸಮಸ್ಯೆ ಬಗೆಹರಿಸಿದೆ. ಅಲ್ಲಿವರೆಗೆ ಮತದಾರರು ಕಾಯಬೇಕಾಯಿತು. ಈ‌ ಮತಗಟ್ಟೆಯಲ್ಲಿ ಒಟ್ಟು 935 ಮತಗಳಿದ್ದವು.
→ ಅರ್ಧ ಗಂಟೆ ವಿಳಂಬ
ದುರ್ಗಿಗುಡಿ ಪ್ರೌಢಶಾಲೆಯ ಮತಗಟ್ಟೆ ಸಂಖ್ಯೆ 120ರಲ್ಲಿ ಮತಯಂತ್ರದಲ್ಲಿ ದೋಷ ಕಂಡುಬಂದಿದ್ದರಿಂದ ಮತದಾನ ಅರ್ಧ ಗಂಟೆ ವಿಳಂಬವಾಯಿತು.
→ ಒಂದು ಗಂಟೆ ಲೇಟ್
ಪಟ್ಟಣದ ಚಿಕ್ಕಪೇಟೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 159 ರಲ್ಲಿ ಸುಮಾರು ಒಂದು ಗಂಟೆ ಮತದಾನ ಸ್ಥಗಿತಗೊಂಡಿತ್ತು. ಇದಕ್ಕೆ ಮತದಾರರು ಆಕ್ರೋಶ ಹೊರಹಾಕಿದರು. ಇಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಬಡಾವಣೆ, ಹಳೇ ಪೋಸ್ಟ್ ಆಫೀಸ್ ರಸ್ತೆ, ಎ.ಕೆ. ಕಾಲೋನಿ ಸೇರಿದಂತೆ ಒಟ್ಟು 938 ಮತದಾರರಿದ್ದಾರೆ. ಮಹಿಳಾ ಮತದಾರರು 495 ಇದ್ದು, ಸಖಿ ಮತಗಟ್ಟೆಯನ್ನಾಗಿಸಲಾಗಿದೆ. 8.30ರ ಹೊತ್ತಿಗೆ ಮತಯಂತ್ರದಲ್ಲಿ ದೋಷ ಕಂಡುಬಂದಿತ್ತು.
→ 20 ನಿಮಿಷ ತಡ
ತೀರ್ಥಹಳ್ಳಿ ತಾಲೂಕು ಸಿಂಧವಾಡಿ ಮತಗಟ್ಟೆಯಲ್ಲಿ ಮತಯಂತ್ರ ಹಾಳಾಗಿದ್ದರಿಂದ 20 ನಿಮಿಷ ಮತದಾನ‌ ಸ್ಥಗಿತಗೊಂಡಿತ್ತು.
→ ಸಾಗರದಲ್ಲಿ 4 ಮತಗಟ್ಟೆಗಳಲ್ಲಿ ದೋಷ
ಸಾಗರ ತಾಲೂಕಿನ ನಾಲ್ಕು ಮತಗಟ್ಟೆಗಳ ವಿವಿ ಪ್ಯಾಟ್ ಯಂತ್ರದಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ಹಿರೇಹಾರಕ‌ ಬೂತ್ ನಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಮತದಾನವೇ ಆರಂಭವಾಗಿರಲಿಲ್ಲ. ಪಟ್ಟಣದ ಬೂತ್ 76ರಲ್ಲಿ ಮತದಾನ ನಿಧಾನವಾಗಿ‌ ಸಾಗಿದ್ದರಿಂದ ಜನರು ಎಸಿಗೆ ದೂರು ನೀಡಿದರು. ನಂತರ, ಹೆಚ್ಚುವರಿ ಸಿಬ್ಬಂದಿ‌ ನೇಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.
→ ಬ್ರೈಲ್ ಬ್ಯಾಲೆಟ್ ಗಳ ಬಳಕೆ
ಸಾಗರ ತಾಲೂಕು ಮಂಡಗಳಲೆ- ಕಾನಲೆ ಬೂತ್ ನಲ್ಲಿ ಅಂಧರಿಗೋಸ್ಕರ ಬ್ರೈಲ್ ಬ್ಯಾಲೆಟ್ ವ್ಯವಸ್ಥೆ ಮಾಡಲಾಗಿತ್ತು. ಅಂಗವಿಕಲರಿಗಾಗಿ ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಲಾಗಿತ್ತು.
→ ಓಟಿಂಗ್ ವಿಡಿಯೋ!
ಚುನಾವಣೆ ಆಯೋಗ ನಿರಂತರ ಜಾಗೃತಿ ಮೂಡಿಸಿದರೂ ಮತದಾರ ಮಾತ್ರ ಒಂದಿಲ್ಲೊಂದು ಎಡವಟ್ಟು ಮಾಡಿಕೊಳ್ಳುತ್ತಲೇ ಇರುತ್ತಾನೆ. ಭದ್ರಾವತಿ, ಹೊಸನಗರ, ತೀರ್ಥಹಳ್ಳಿ ಮತಗಟ್ಟೆಯೊಂದರಲ್ಲಿ ವ್ಯಕ್ತಿಯೊಬ್ಬ ಮತ ಚಲಾಯಿಸಿದ ವಿಡಿಯೋ ಪ್ರಕ್ರಿಯೆಯನ್ನು ಚಿತ್ರೀಕರಿಸಿದ್ದಾನೆ. ಅದರಲ್ಲಿ ಯಾರಿಗೆ ಮತ ಮಾಡಿದ್ದಾನೆ, ವಿವಿ ಪ್ಯಾಟ್ ದೃಶ್ಯ ಎಲ್ಲವೂ ರೆಕಾರ್ಡ್ ಆಗಿದೆ. ಇದು ವೈರಲ್ ಆಗಿದೆ.
→ ಬೀಪ್ ಸದ್ದಿನದ್ದೇ ಗೊಂದಲ
ಇವಿಎಂ ಯಂತ್ರದಲ್ಲಿ ಅಭ್ಯರ್ಥಿ ಮುಂದಿನ ಬಟನ್ ಅದುಮಿದ ನಂತರ ಸುಮಾರು 5-10 ಸೆಕೆಂಡ್ ಬಳಿಕ ಬೀಪ್ ಸದ್ದು ಬಂದಿತ್ತು. ಹೀಗಾಗಿ, ಕೆಲವು ಮತಗಟ್ಟೆಗಳಲ್ಲಿ ಮತದಾರರಲ್ಲಿ‌ ಗೊಂದಲ ಉಂಟಾಯಿತು. ತಕ್ಷಣ ಸದ್ದು ಬರದಿದ್ದರಿಂದ ಮತ ಚಲಾವಣೆ ಆಗಿಲ್ಲ ಎಂದೂ ಮತಗಟ್ಟೆ ಸಿಬ್ಬಂದಿ ಜೊತೆ ವಾಗ್ವಾದಕ್ಕೆ ಇಳಿದರು. ತಿಳಿಹೇಳಿದ ಬಳಿಕ ಸುಮ್ಮನರಾದರು.

error: Content is protected !!