ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ಲೋಕಸಭೆ ಸುಸೂತ್ರವಾಗಿ ಪೂರ್ಣಗೊಂಡಿದ್ದು, ಇವಿಎಂ ಯಂತ್ರಗಳಲ್ಲಿ ಅಭ್ಯರ್ಥಿಗಳ ಭವಿಷ್ಯ ಲಾಕ್ ಆಗಿದೆ. ಈ ನಡುವೆ ಜಿಲ್ಲೆಯ ಅಲ್ಲಲ್ಲಿ ಗೊಂದಲಗಳಾಗಿದ್ದು, ಕೆಲ ಹೊತ್ತು ಮತದಾನ ಪ್ರಕ್ರಿಯೆ ವಿಳಂಬವಾಗಿದೆ. ಮತಯಂತ್ರಗಳು ಕೈಕೊಟ್ಟಿವೆ.
READ | ಮತದಾನ ಮಾಡಲು ತೆರಳುತ್ತಿದ್ದ ಯುವಕ ಸಾವು
ತಾಂತ್ರಿಕ ಸಮಸ್ಯೆಯಿಂದ ಅರ್ಧ ಗಂಟೆ ಲೇಟ್
ನಗರದ ಬಾಲರಾಜ್ ಅರಸ್ ರಸ್ತೆಯ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಕಚೇರಿಯಲ್ಲಿರುವ ಮತಗಟ್ಟೆಯಲ್ಲಿ ಇವಿಎಂ ಯಂತ್ರದಲ್ಲಿ ತಾಂತ್ರಿಕದೋಷ ಕಂಡುಬಂದಿದೆ. ಪರಿಣಾಮ ಮತದಾನ ಅರ್ಧ ಗಂಟೆ ವಿಳಂಬವಾಗಿದೆ. ಮಾಹಿತಿ ಲಭ್ಯವಾಗಿದ್ದೇ ಇಂಜಿನಿಯರ್ ಗಳ ತಂಡ ಭೇಟಿ ನೀಡಿ ಸಮಸ್ಯೆ ಬಗೆಹರಿಸಿದೆ. ಅಲ್ಲಿವರೆಗೆ ಮತದಾರರು ಕಾಯಬೇಕಾಯಿತು. ಈ ಮತಗಟ್ಟೆಯಲ್ಲಿ ಒಟ್ಟು 935 ಮತಗಳಿದ್ದವು.
ಅರ್ಧ ಗಂಟೆ ವಿಳಂಬ
ದುರ್ಗಿಗುಡಿ ಪ್ರೌಢಶಾಲೆಯ ಮತಗಟ್ಟೆ ಸಂಖ್ಯೆ 120ರಲ್ಲಿ ಮತಯಂತ್ರದಲ್ಲಿ ದೋಷ ಕಂಡುಬಂದಿದ್ದರಿಂದ ಮತದಾನ ಅರ್ಧ ಗಂಟೆ ವಿಳಂಬವಾಯಿತು.
ಒಂದು ಗಂಟೆ ಲೇಟ್
ಪಟ್ಟಣದ ಚಿಕ್ಕಪೇಟೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 159 ರಲ್ಲಿ ಸುಮಾರು ಒಂದು ಗಂಟೆ ಮತದಾನ ಸ್ಥಗಿತಗೊಂಡಿತ್ತು. ಇದಕ್ಕೆ ಮತದಾರರು ಆಕ್ರೋಶ ಹೊರಹಾಕಿದರು. ಇಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಬಡಾವಣೆ, ಹಳೇ ಪೋಸ್ಟ್ ಆಫೀಸ್ ರಸ್ತೆ, ಎ.ಕೆ. ಕಾಲೋನಿ ಸೇರಿದಂತೆ ಒಟ್ಟು 938 ಮತದಾರರಿದ್ದಾರೆ. ಮಹಿಳಾ ಮತದಾರರು 495 ಇದ್ದು, ಸಖಿ ಮತಗಟ್ಟೆಯನ್ನಾಗಿಸಲಾಗಿದೆ. 8.30ರ ಹೊತ್ತಿಗೆ ಮತಯಂತ್ರದಲ್ಲಿ ದೋಷ ಕಂಡುಬಂದಿತ್ತು.
ಓಟಿಂಗ್ ವಿಡಿಯೋ!
ಚುನಾವಣೆ ಆಯೋಗ ನಿರಂತರ ಜಾಗೃತಿ ಮೂಡಿಸಿದರೂ ಮತದಾರ ಮಾತ್ರ ಒಂದಿಲ್ಲೊಂದು ಎಡವಟ್ಟು ಮಾಡಿಕೊಳ್ಳುತ್ತಲೇ ಇರತ್ತಾನೆ. ಭದ್ರಾವತಿಯ ಮತಗಟ್ಟೆಯೊಂದರಲ್ಲಿ ವ್ಯಕ್ತಿಯೊಬ್ಬ ಮತ ಚಲಾಯಿಸಿದ ವಿಡಿಯೋ ಪ್ರಕ್ರಿಯೆಯನ್ನು ಚಿತ್ರೀಕರಿಸಿದ್ದಾನೆ. ಅದರಲ್ಲಿ ಯಾರಿಗೆ ಮತ ಮಾಡಿದ್ದಾನೆ, ವಿವಿ ಪ್ಯಾಟ್ ದೃಶ್ಯ ಎಲ್ಲವೂ ರೆಕಾರ್ಡ್ ಆಗಿದೆ. ಇದು ವೈರಲ್ ಆಗಿದೆ.