ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಅಧಿಕ ಹಾಸ್ಟೆಲ್ ಶುಲ್ಕ ವಸೂಲಿ ಮಾಡುತ್ತಿಲ್ಲ ಎಂದು ವಿಶ್ವವಿದ್ಯಾಲಯದ ವಿವಿ ಕುಲಸಚಿವ ಪ್ರೊ.ಎಸ್.ಎಸ್.ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವವಿದ್ಯಾಲಯದಲ್ಲಿರುವ ವಿದ್ಯಾರ್ಥಿ ನಿಲಯಗಳು ಡಿವೈಡಿಂಗ್ ವ್ಯವಸ್ಥೆ ಮಾದರಿಯದಾಗಿದ್ದು, ಇದರಿಂದಾಗಿ ವಿದ್ಯಾರ್ಥಿನಿಲಯಗಳ ಎಲ್ಲ ಖರ್ಚು ವೆಚ್ಚಗಳನ್ನು ವಿದ್ಯಾರ್ಥಿಗಳೇ ಭರಿಸಬೇಕಾಗಿರುತ್ತದೆ. ವಿದ್ಯಾರ್ಥಿ ನಿಲಯಗಳು ವಿವಿ ರಚಿಸಿದ ಸಲಹಾ ಸಮಿತಿ ನಿರ್ದೇಶನದಂತೆ ನಡೆಯುತ್ತಿದ್ದು, ಅದರ ಸಲಹೆಯ ಮೇರೆಗೆ ಅಲ್ಲಿನ ಶುಲ್ಕಗಳನ್ನು ನಿಗದಿಪಡಿಸಲಾಗಿರುತ್ತದೆ ಎಂದು ಹೇಳಿದ್ದಾರೆ.
ಮೆಸ್ ಗಳನ್ನು ವಿದ್ಯಾರ್ಥಿಗಳೇ ನಡೆಸುವುದಾಗಿದ್ದು, ಅದರ ಉಸ್ತುವಾರಿ ನೋಡಿಕೊಳ್ಳಲು ವಿಶ್ವವಿದ್ಯಾಲಯವು ಶಿಕ್ಷಕ ಸಲಹೆಗಾರರು ಮತ್ತು ವ್ಯವಸ್ಥಾಪಕರನ್ನು ನಿಯೋಜಿಸಿರುತ್ತದೆ. ಇದು ವಿದ್ಯಾರ್ಥಿಗಳೇ ಎಲ್ಲವನ್ನೂ ಕಂಡು ಗಮನಿಸಬಹುದಾದ ಪಾರದರ್ಶಕ ವ್ಯವಸ್ಥೆ ಒಳಗೊಂಡಿದೆ ಎಂದು ತಿಳಿಸಿದ್ದಾರೆ.
ಶುಲ್ಕದಲ್ಲಿ ನಿಲಯದ ಹಂಗಾಮಿ ನೌಕರರ ವೇತನ ಪಾವತಿ (ಅಡುಗೆಯವರು, ಅಡುಗೆ ಸಹಾಯಕರು, ಶುಚಿಗಾರರು) ಹಾಗೂ ಅಡುಗೆ ಮನೆಯಲ್ಲಿ ಬೇಕಾಗುವ ಪಾತ್ರೆ ಪರಿಕರಗಳು ಗ್ರೈಂಡರ್, ಮಿಕ್ಸರ್ ಇತರೆ ವಸ್ತುಗಳ ಖರೀದಿ ಮತ್ತು ನಿರ್ವಹಣೆಯನ್ನು ಮಾಡಲಾಗುತ್ತಿದೆ.
ವಾಟರ್ ಫಿಲ್ಟರ್, ಎಲೆಕ್ಟ್ರಿಕ್ ಗೀಜರ್, ಸೋಲಾರ್ ವಾಟರ್ ಹೀಟರ್ ಗಳ ನಿರ್ವಹಣೆ, ಜನರೇಟರ್ ಗಳ ನಿರ್ವಹಣೆ, ವಿದ್ಯಾರ್ಥಿ ನಿಲಯದ ನೀರಿನ ಪೈಪ್ ಲೈನ್ ಮತ್ತು ಬೋರ್ ವೆಲ್ ನಿರ್ವಹಣೆ, ವಿದ್ಯಾರ್ಥಿಗಳ ಕೊಠಡಿಗಳ ವಿದ್ಯುತ್ ಪರಿಕರಗಳ ನಿರ್ವಹಣೆ ಹಾಗೂ ನಿಲಯದ ದೈನಂದಿನ ಸ್ವಚ್ಚತಾ ಕಾರ್ಯಕ್ಕೆ ಉಪಯೋಗಿಸುವ ವಸ್ತುಗಳ ಖರೀದಿ, ದಿನಪತ್ರಿಕೆಗಳ ಮೊತ್ತ ಖರೀದಿ, ಜೊತೆಗೆ ತುರ್ತು ಸಂದರ್ಭದಲ್ಲಿ ನಿಲಯದ ಸಣ್ಣ ಪುಟ್ಟು ರಿಪೇರಿ ಕಾರ್ಯಗಳನ್ನು ಈ ಮೊತ್ತಗಳಲ್ಲಿ ನಡೆಸಲಾಗುತ್ತದೆ. ಕೋವಿಡ್ -19 ಬಂದಾಗಿನಿಂದ ದಿನನಿತ್ಯ ವಿದ್ಯಾರ್ಥಿ ನಿಲಯದ ಸ್ಯಾನಿಟೈಜೇಷನ್ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.