– ಶರಣ್ ಮುಷ್ಟೂರ್
ಗೆಲುವು ಸುಲಭವಾಗಿ ದಕ್ಕಿದರೆ ಅದಕ್ಕೆ ಬಹಳ ಮೌಲ್ಯ ಇರುವುದಿಲ್ಲ. ದಿನಗಟ್ಟಲೆ ಚರ್ಚಿಸುವಷ್ಟು ತೂಕವೂ ಅದಕ್ಕೆ ಇರುವುದಿಲ್ಲ.
ಹೋರಾಟದಿಂದ ಪಡೆದ ಜಯ, ಸೋಲಿನ ಸುಳಿಗೆ ಸಿಲುಕಿ ಇನ್ನೇನು ಮುಗಿದೇ ಹೋಯಿತು ಎನ್ನುವಾಗ ಪುಟಿದೆದ್ದು ಪಡೆದುಕೊಂಡ ವಿಜಯದ ಮಜಾನೇ ಬೇರೆ.
ಅಂತಹ ಗೆಲುವು ಹೆಚ್ಚು ಚರ್ಚೆವಾಗುತ್ತದೆ. ಜನ ಮಾನಸದಲ್ಲಿ ಚಿರಸ್ಥಾಯಿಯಾಗಿ ನೆಲೆಸುತ್ತದೆ. ಇಂತಹ ಅಚ್ಚಳಿಯದ ಗೆಲುವನ್ನು ಟೀಂ ಇಂಡಿಯಾ ಈಚೆಗೆ ಆಸ್ಟ್ರೇಲಿಯಾ, ಇಂಗ್ಲೆಂಡ್ ವಿರುದ್ಧ ಸಾಧಿಸಿದಾಗ ಕೋಟ್ಯಂತರ ಅಭಿಮಾನಿಗಳು ಸಂಭ್ರಮಿಸಿ ಆಸ್ವಾದಿಸಿದ್ದರು. ಸ್ಮರಣೀಯ ಗೆಲುವಿಗೆ ತಂಡದ ಸಂಘಟಿತ ಹೋರಾಟ ಕಾರಣವಾದರೂ ಈ ಎರಡು ಸರಣಿಯಲ್ಲಿನ `ಫ್ಯಾಬ್-4′ ಆಟಗಾರರ ಕೆಚ್ಚೆದೆಯ ಪ್ರದರ್ಶನ ಮೆಚ್ಚಲೇಬೇಕು.
ಇದನ್ನೂ ಓದಿ | ಮಲೆನಾಡ ಪ್ರವಾಸೋದ್ಯಮಕ್ಕೆ ಡಿಜಿಟಲ್ ಟಚ್!
ಈ ಶತಮಾನ ಕಂಡ ಫ್ಯಾಬ್ 4 ಕ್ರಿಕೆಟ್ ಆಟಗಾರರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವಿ.ವಿ.ಎಸ್.ಲಕ್ಷ್ಮಣ್ ಹಾಗೂ ಸೌರವ್ ಗಂಗೂಲಿ ಒಂದು ಕಾಲದ ಶ್ರೇಷ್ಠ ಬ್ಯಾಟ್ಸ್ ಮನ್ ಗಳು ಎಂಬ ಖ್ಯಾತಿ ಪಡೆದಿದ್ದರು. ಜತೆಗೆ ಟೀಂನ ಗೆಲುವಿನಲ್ಲಿ ಈ ದಿಗ್ಗಜರ ಪಾತ್ರ ಮಹತ್ವದ್ದಾಗಿತ್ತು. ಈ ಆಟಗಾರರು ಮೇಲು ಕ್ರಮಾಂಕದ ಅದ್ಭುತ ಬ್ಯಾಟ್ಸ್ ಮನ್ ಗಳು ಆಗಿದ್ದರಿಂದ ಫ್ಯಾಬ್-4 ಎಂದೇ ಕ್ರಿಕೆಟ್ ಜಗತ್ತು ಗುರುತಿಸಿತ್ತು. ಆದರೆ, ಆಸ್ಟ್ರೇಲಿಯಾ, ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಹೊಸ ಯುಗದ ಹುಡುಗರು ಫ್ಯಾಬ್-4 ಆಟಗಾರರಾಗಿ ಟೀಂ ಇಂಡಿಯಾದಲ್ಲಿ ಗುರುತಿಸಿಕೊಂಡಿದ್ದಾರೆ.
ಅದು ಕೆಳ ಕ್ರಮಾಂಕದ ಆಟಗಾರರು ಎಂಬುದು ವಿಶೇಷ.ಸ್ಫೋಟಕ ಆಟಗಾರರಾದ ರಿಷಬ್ ಪಂತ್, ಆರ್.ಅಶ್ವಿನ್, ವಾಷಿಂಗ್ಟನ್ ಸುಂದರ್ ಹಾಗೂ ಅಕ್ಷರ್ ಪಟೇಲ್ ಆಸ್ಟ್ರೇಲಿಯಾ, ಇಂಗ್ಲೆಂಡ್ ವಿರುದ್ಧ ತೋರಿದ ಅತ್ಯದ್ಭುತ ಪ್ರದರ್ಶನದಿಂದ ಕ್ರಿಕೆಟ್ ಜಗತ್ತು ಟೀಂ ಇಂಡಿಯಾದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಹೊಸ ಫ್ಯಾಬ್-4 ಆಟಗಾರರನ್ನು ಕುತೂಹಲ ಹಾಗೂ ಅಚ್ಚರಿಯಿಂದ ನೋಡುತ್ತಿದೆ.
ಕ್ರಿಕೆಟ್ ಇತಿಹಾಸದಲ್ಲಿ ಫ್ಯಾಬ್-4 ಎಲೈಟ್ ಕ್ಲಬ್ ನಲ್ಲಿ ಗುರುತಿಸಿಕೊಂಡವರಲ್ಲಿ ಬಹುತೇಕರು ಬ್ಯಾಟ್ಸ್ ಮನ್ ಗಳು. ಆಶ್ಚರ್ಯವೆಂದರೆ, ಹೊಸ ಕಾಲಘಟ್ಟದ ಈ ನಾಲ್ವರಲ್ಲಿ ಮೂವರು ಸ್ಪಿನ್ ಬೌಲರ್ ಆಲ್ ರೌಂಡರ್ ಗಳು, ಒಬ್ಬ ವಿಕೆಟ್ ಕೀಪರ್ ಬ್ಯಾಟ್ಸ್‍ಮನ್, ಆಸ್ಟ್ರೇಲಿಯಾ, ಇಂಗ್ಲೆಂಡ್ ವಿರುದ್ಧದ ಸರಣಿ ಗೆಲ್ಲಲು ರಿಷಬ್ ಪಂತ್ ಸಂಕಷ್ಟದ ಸಮಯದ ವೇಳೆ ತಮ್ಮ ವಿರಾಟರೂಪ ತೋರಿಸುವ ಮೂಲಕ ತಂಡಕ್ಕೆ ನೆರವಾದರೆ, ಅಶ್ವಿನ್, ಸುಂದರ್, ಅಕ್ಷರ್ ಬ್ಯಾಟಿಂಗ್, ಬೌಲಿಂಗ್ ಮೂಲಕ ಟೀಂ ಇಂಡಿಯಾ ಸರಣಿ ಗೆಲ್ಲುವುದಕ್ಕೆ ಕೊಡುಗೆ ನೀಡಿದ್ದಾರೆ.
ಅಕ್ಷರ್ ಪಟೇಲ್ ತವರಿನಲ್ಲಿಯೇ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಗೆ ಪದಾರ್ಪಣೆ ಮಾಡಿ ತಮ್ಮ ಕೈಚಳಕದಿಂದ ಆಂಗ್ಲರನ್ನು ಕಟ್ಟಿ ಹಾಕಿದರು. ಯಾರೂ ನಿರೀಕ್ಷಿಸದ ಬೌಲಿಂಗ್ ದಾಳಿ ಸಂಘಟಿಸಿದ ಅಕ್ಷರ್ ಅಕ್ಷರಶಃ ಆಂಗ್ಲರಿಗೆ ಕಾಡಿ ಬಿಟ್ಟರು. ಪದಾರ್ಪಣೆ ಸರಣಿಯಲ್ಲೇ ಅತ್ಯಧಿಕ 27 ವಿಕೆಟ್ ಪಡೆಯುವ ಮೂಲಕ ವಿಶ್ವ ದಾಖಲೆ ಬರೆದರು. ಶ್ರೀಲಂಕಾದ ಅಜಂತ ಮೆಂಡೀಸ್ ಭಾರತದ ವಿರುದ್ಧ ಪದಾರ್ಪಣೆ ಪಂದ್ಯದಲ್ಲಿ 25 ವಿಕೆಟ್ ಪಡೆದಿದ್ದು, ಇಲ್ಲಿವರೆಗಿನ ದಾಖಲೆ ಆಗಿತ್ತು. ಕೆಳ ಕ್ರಮಾಂಕದ ಆಟಗಾರರು ಅಚ್ಚರಿಯ ಆಟವಾಡುವುದು ಅಪರೂಪವಾದರೂ ಅಶ್ವಿನ್, ಪಂತ್, ಸುಂದರ್ ಈ ಎರಡು ಸರಣಿಯಲ್ಲಿ ಮ್ಯಾಜಿಕ್ ಮಾಡಿದ್ದಾರೆ. ಇನ್ನು ಆಶ್ಚರ್ಯ ಅಂದ್ರೆ, ಇಂಗ್ಲೆಂಡ್ ವಿರುದ್ಧ ನಾಯಕ ಕೊಹ್ಲಿ, ಪೂಜಾರ, ರಹಾನೆ ಹಾಗೂ ಶುಭಮನ್ ಗಿಲ್ ಸೇರಿ ನಾಲ್ವರು ಬ್ಯಾಟ್ಸ್‍ಮನ್ ಗಳು ಒಟ್ಟು 636 ರನ್ ಗಳಿಸಿದ್ದಾರೆ. ಇದರಲ್ಲಿ ಐದು ಅರ್ಧ ಶತಕಗಳು ಸೇರಿವೆ. ಇನ್ನು ಅಶ್ವಿನ್, ಪಂತ್, ಸುಂದರ್, ಅಕ್ಷರ್ ಸೇರಿ ನಾಲ್ಕು ಮಂದಿ ಆಟಗಾರರು 695 ರನ್ ಕೂಡಿ ಹಾಕಿದ್ದಾರೆ. ಇದರಲ್ಲಿ ಎರಡು ಸೆಂಚುರಿ, ಐದು ಅರ್ಧ ಶತಕ ಸೇರಿವೆ.
ಹೀಗಾಗಿ, ಈ ಎರಡು ಸರಣಿಯಿಂದ ಟೀಂ ಇಂಡಿಯಾದ ಕೆಳ ಕ್ರಮಾಂಕದ ಆಟಗಾರರು ಫ್ಯಾಬ್-4 ಎಲೈಟ್ ಕ್ಲಬ್ ಸೇರಿದ್ದಾರೆ.
80 ದಶಕದಲ್ಲಿ ಕಪಿಲ್ ದೇವ್, ರವಿಶಾಸ್ತ್ರಿ, ಚೇತನ್ ಶರ್ಮಾ, ಮದನ್ ಲಾಲ್ ಹಾಗೂ ಕರ್ನಾಟಕದ ರೋಜರ್ ಬಿನ್ನಿ ಕೆಳ ಕ್ರಮಾಂಕದಲ್ಲಿ ಅದ್ಬುತ ಆಡವಾಡುತ್ತಿದ್ದರು. ಇದರಿಂದ ಬಲಿಷ್ಠ ತಂಡಗಳನ್ನು ಮಣ್ಣು ಮುಕ್ಕಿಸುವಲ್ಲಿ ಅಂದಿನ ತಂಡ ಯಶಸ್ವಿ ಆಗಿತ್ತು..ಫ್ಯಾಬ್-4 ಆಟಗಾರರು ಎಂದರೆ ಬಹುತೇಕರು ಮೇಲ್ ಕ್ರಮಾಂಕದ ಆಟಗಾರರೇ ಇರುತ್ತಾರೆ.
ಆದರೀಗ, ಟೀಂ ಇಂಡಿಯಾದಲ್ಲಿ ಆರಂಭಿಕರು, ಮಧ್ಯಮ ಕ್ರಮಾಂಕದ ಆಟಗಾರರು ರನ್ ಗಳಿಸುವಲ್ಲಿ ವಿಫಲವಾದರೆ ತಂಡ ಸೋಲಲಿದೆ ಅನ್ನುವಂತಿಲ್ಲ. ಏಕೆಂದರೆ, 6ನೇ ಕ್ರಮಾಂಕದಲ್ಲಿ ಪಂತ್, 7ನೇ ಕ್ರಮಾಂಕದಲ್ಲಿ ಅಶ್ವಿನ್, 8ನೇ ಕ್ರಮಾಂಕದಲ್ಲಿ ಸುಂದರ್ ಹಾಗೂ 9ನೇ ಕ್ರಮಾಂಕದಲ್ಲಿ ಅಕ್ಷರ್ ಪಟೇಲ್ ಕ್ರಿಸ್ ಗೆ ಇಳಿದು ತಂಡಕ್ಕೆ ಗೆಲುವು ತರುತ್ತಾರೆ. ಬೌಲಿಂಗ್ ನಲ್ಲಿಯೂ ಅಶ್ವಿನ್, ಪಟೇಲ್, ಸುಂದರ್ ಮಿಂಚಿದರೆ ವಿಕೆಟ್ ಹಿಂದೆ ಜಾದು ಮಾಡ್ತಾರೆ ರಿಷಬ್ ಪಂತ್.
ದಾದಾ, ಗಿಲ್ಲಿ ಮೆಚ್ಚಿದ ಹುಡುಗ
ದೆಹಲಿಯ ಡ್ಯಾಷಿಂಗ್ ಬ್ಯಾಟ್ಸ್‍ಮನ್ ಮತ್ತು ವಿಕೆಟ್ ಕೀಪರ್ ರಿಷಬ್ ಪಂತ್ ಸ್ವಲ್ಪ ಹುಡುಗಾಟದ ಹುಡುಗ. ಕಾಲೇಜು ಹುಡುಗನಲ್ಲಿ ಇರಬೇಕಾದ ಎಲ್ಲ ಗುಣಗಳಿವೆ. ಕಾರಣ, ಆತನಿಗಿನ್ನೂ 23 ವಯಸ್ಸು. ಅನೇಕ ಸಲ ತನ್ನ ವರ್ತನೆಯಿಂದ ಟ್ರೋಲ್ ಗೂ ಈತ ಒಳಗಾಗಿದ್ದಾನೆ. ರಿಷಬ್ ದಿನದಿಂದ ದಿನಕ್ಕೆ ಬ್ಯಾಟಿಂಗ್ ನಲ್ಲಿ ಮಾಗುತ್ತಿದ್ದಾರೆ. ಸಂಕಷ್ಟದ ವೇಳೆ ಜವಾಬ್ದಾರಿ ಅರಿತು ಬ್ಯಾಟಿಂಗ್ ಮಾಡುವುದರ ಜತೆಗೆ ಬೌಲರ್ ಗಳ ಎದುರು ಶೌರ್ಯ ಪ್ರದರ್ಶನ ಮಾಡಿ ಬಿಡುತ್ತಾರೆ.
ತಂಡವನ್ನು ಅಪಾಯದಿಂದ ಪಾರು ಮಾಡಿ ಬಿಡುತ್ತಾರೆ. ಹೀಗಾಗಿಯೇ ರಿಷಬ್ ಆಟವನ್ನು ಬಿಸಿಸಿಐ ಅಧ್ಯಕ್ಷ ಹಾಗೂ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ, ಆಸ್ಟ್ರೇಲಿಯಾದ ಮಾಜಿ ಆಟಗಾರ ಆಡಂ ಗಿಲ್ ಕ್ರಿಸ್ಟ್ ಹಾಡಿ ಹೊಗಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸಿಡ್ನಿ ಮೈದಾನದಲ್ಲಿ ಗಳಿಸಿದ 97 ರನ್, ಕಡೆಯ ಪಂದ್ಯದಲ್ಲಿ ಗಾಬಾ ಮೈದಾನದಲ್ಲಿ ಬಾರಿಸಿದ ಅಜೇಯ 89 ರನ್ ತಂಡ ಸರಣಿ ಗೆಲ್ಲಲು ಕಾರಣವಾಯಿತು. ಹಾಗೇ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಗಳಿಸಿದ 91, 58 ರನ್ ಹಾಗೂ ಅಹಮದಾಬಾದ್ ನಲ್ಲಿ ಅಂತಿಮ ಟೆಸ್ಟ್ ಪಂದ್ಯದಲ್ಲಿ ಅದ್ಬುತ ಶತಕ ಗಳಿಸುವ ಮೂಲಕ ಟೀಂ ಇಂಡಿಯಾ ಸರಣಿ ಗೆಲ್ಲಲು ಕಾರಣರಾದರು. ಇನ್ನು ವಿಶೇಷವೆಂದರೆ, ತಂಡದ ಅಪಾಯದಲ್ಲಿದ್ದಾಗಲೇ ರಿಷಬ್ ಪಂತ್ ಅತ್ಯುತ್ತಮ ಆಟವಾಡುವ ಮೂಲಕ ಟೀಂನ ಆಧಾರ ಸ್ತಂಭವಾಗಿದ್ದಾರೆ.
ನಡಿಯಾದ್ ಹುಡುಗನ ಕೈಚಳಕ
ಗುಜರಾತ್ ನ ಜಾಮ್ ನಗರದಿಂದ ರಾಜ್ ಕೋಟ್ ಹಾಗೂ ನಡಿಯಾದ್ ವರೆಗಿನ 300 ಕಿ.ಮೀ ಸುತ್ತಳತೆಯ ಪ್ರದೇಶವನ್ನು ಸ್ಪಿನ್ನರ್ ಗಳ ತೊಟ್ಟಿಲು ಎಂದು ಕರೆಯಲಾಗುತ್ತದೆ.
ಸ್ಪಿನ್ ಮಾಂತ್ರಿಕ ವಿನೂ ಮಂಕಡ್, ರವೀಂದ್ರ ಜಡೇಜಾ, ಜಶು ಪಟೇಲ್, ಈಚೆಗಿನ ಅಕ್ಷರ್ ಪಟೇಲ್ ಸೇರಿ ಅನೇಕರು ಇದೇ ಭಾಗದವರು. ಅಹಮದಾಬಾದ್ ನಿಂದ 60 ಕಿ.ಮೀ ದೂರದಲ್ಲಿರುವ ನಡಿಯಾದ್ ಅಕ್ಷರ್ ಪಟೇಲ್ ಊರು.
ಇಂಗ್ಲೆಂಡ್ ವಿರುದ್ಧ ಟೆಸ್ಟ್ ಗೆ ಪದಾರ್ಪಣೆ ಮಾಡಿದ ಅಕ್ಷರ್ ಈ ಸರಣಿಯಲ್ಲಿ ಬರೋಬ್ಬರಿ 27 ವಿಕೆಟ್ ಕಿತ್ತುವ ಮೂಲಕ ದಾಖಲೆ ಬರೆದರು. ನಾಯಕ ವಿರಾಟ್ ಕೊಹ್ಲಿ ತಮ್ಮ ಮೇಲೆ ಇಟ್ಟಿದ್ದ ವಿಶ್ವಾಸ ಉಳಿಸಿಕೊಳ್ಳುವ ಮೂಲಕ ರವೀಂದ್ರ ಜಡೇಜಾ ಸ್ಥಾನವನ್ನು ಸಮರ್ಥವಾಗಿ ತುಂಬಿದರು. ಅಲ್ಲದೇ, ಟೀಂ ಇಂಡಿಯಾದ ಟೆಸ್ಟ್ ತಂಡದ ಕಾಯಂ ಸದಸ್ಯನಾಗುವ ಭರವಸೆ ಕೂಡ ಮೂಡಿಸಿದ್ದಾರೆ ಅಕ್ಷರ್ ಪಟೇಲ್..
ಸ್ಪಿನ್ ಬೌಲಿಂಗ್ ಟ್ರಂಪ್ ಕಾರ್ಡ್ ಮೋಡಿಗಾರ ಅಶ್ವಿನ್
ಟೀಂ ಇಂಡಿಯಾದ ಸ್ಪಿನ್ ಬೌಲಿಂಗ್ ಟ್ರಂಪ್ ಕಾರ್ಡ್ ಆರ್.ಅಶ್ವಿನ್. ತಮ್ಮ ಅಮೋಘ ಕೈಚಳಕದ ಮೂಲಕ ಎದುರಾಳಿ ದಿಕ್ಕು ತಪ್ಪಿಸಬಲ್ಲ ಆಫ್ ಸ್ಪಿನ್ ಬೌಲರ್.
ಬೌಲಿಂಗ್ ಅಲ್ಲದೇ ಸಮಯೋಚಿತ ಬ್ಯಾಟಿಂಗ್ ನಿಂದಲೂ ತಂಡಕ್ಕೆ ಆಧಾರವಾಗಬಲ್ಲ ಚಾಣಕ್ಷ ಇವರು. ತಂಡದ ಸಂಕಷ್ಟದ ವೇಳೆ ಕ್ರಿಸ್ ಕಚ್ಚಿಕೊಂಡು ಬ್ಯಾಟಿಂಗ್ ಮಾಡುವ ಅಶ್ವಿನ್ ಅನೇಕ ಬಾರಿ ತಂಡವನ್ನು ಸೋಲಿನಿಂದ ಪಾರು ಮಾಡುವಲ್ಲಿ ಯಶಸ್ವಿ ಆಗಿದ್ದಾರೆ.
ಇಂಗ್ಲೆಂಡ್ ವಿರುದ್ಧ ತವರಿನ ಅಂಗಳದಲ್ಲಿ ಗಳಿಸಿದ ಶತಕ ಮತ್ತು ಬೌಲಿಂಗ್ ಕೈಚಳಕ ಮೆಚ್ಚುವಂತದ್ದೇ. ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ 32 ವಿಕೆಟ್ ಕಬಳಿಸುವ ಮೂಲಕ ಆಂಗ್ಲರನ್ನು ಕಂಗಾಲು ಆಗುವಂತೆ ಮಾಡಿದ್ದರು.
ಬೌಲಿಂಗ್ ಗೂ ಜೈ, ಬ್ಯಾಟಿಂಗ್ ಗೂ ಸೈ
ಇನ್ನು ಫ್ಯಾಬ್-4ರ ಮತ್ತೊಬ್ಬ ಆಟಗಾರ ವಾಷಿಂಗ್ಟನ್ ಸುಂದರ್. ತಮಿಳುನಾಡಿನ ಈ ಹುಡುಗ ಬೌಲಿಂಗ್ ಹಾಗೂ ಬ್ಯಾಟಿಂಗ್ ಗೂ ಸೈ. ತನ್ನ ವೆರಿಯೇಷನ್ ಕೈಚಳಕದ ಮೂಲಕ ಎದುರಾಳಿಗಳನ್ನು ಕೆಂಗಡಿಸುವ ಸುಂದರ್, ತಂಡ ಸಂಕಷ್ಟಕ್ಕೆ ಸಿಲುಕಿದ ವೇಳೆ ಕ್ರಿಸ್ ಗೆ ಕಚ್ಚಿಕೊಂಡು ರನ್ ಗಳನ್ನು ಸರಪಣಿಯಂತೆ ಜೋಡಿಸುವ ಕಲೆ ಮೆಚ್ಚಲೇಬೇಕು. ಇದಕ್ಕೆ ಉದಾಹರಣೆ ಅಹಮದಾಬಾದ್ ನಲ್ಲಿ ಕಡೆಯ ಪಂದ್ಯದಲ್ಲಿ ಬಾರಿಸಿದ ತಾಳ್ಮೆಯ 96 ರನ್ ಗಳು ಸಾಕ್ಷಿ. ಹಾಗೇ ತನ್ನ ಸ್ಪಿನ್ ಬೌಲಿಂಗ್ ಮೂಲಕ ತಂಡಕ್ಕೆ ಯಾವಾಗಲೂ ನೆರವಾಗಬಲ್ಲರೂ ಸುಂದರ್. ಹೆಸರಿನಷ್ಟೇ ಇವರ ಆಟವೂ ಸುಂದರವಾಗಿದೆ.
https://www.suddikanaja.com/2021/03/16/national-level-carrom-tourney-in-shivamogga/