ಸುದ್ದಿ ಕಣಜ.ಕಾಂ
ಶಿವಮೊಗ್ಗ: 67 ಗ್ರಾಮ ಪಂಚಾಯಿತಿಗಳ 163 ಗ್ರಾಮಗಳು, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ 74 ಪ್ರದೇಶಗಳು ಹಾಗೂ 18 ಮುಖ್ಯ ರಸ್ತೆಗಳನ್ನು ಅತಿವೃಷ್ಟಿಯಿಂದ ತೊಂದರೆ ಉಂಟಾಗಬಹುದಾದ ಸ್ಥಳಗಳೆಂದು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಹೇಳಿದರು.
https://www.suddikanaja.com/2021/06/07/criminal-case-against-fake-pesticide-seller/
ಮುಂಗಾರು ಮಳೆ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗರೂಕತಾ ಕ್ರಮಗಳ ಕುರಿತು ಶನಿವಾರ ಮುಖ್ಯಮಂತ್ರಿ ಅವರ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ ಜಿಲ್ಲಾಧಿಕಾರಿಗಳು ಮಾತನಾಡಿದರು.
ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದೆ. ಅತಿವೃಷ್ಟಿಯಿಂದ ಉಂಟಾಗಬಹುದಾದ ಅನಾಹುತಗಳನ್ನು ಎದುರಿಸಲು ಎಲ್ಲ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಶೇ.20ರಷ್ಟು ಅಧಿಕ ಮಳೆ | ಜಿಲ್ಲೆಯಲ್ಲಿ ಕಳೆದ 18 ದಿನಗಳಲ್ಲಿ ಸರಾಸರಿಗಿಂತ ಶೇ.20ರಷ್ಟು ಹೆಚ್ಚಿನ ಮಳೆಯಾಗಿದೆ. ಭದ್ರಾ ಮತ್ತು ಲಿಂಗನಮಕ್ಕಿ ಜಲಾಶಯಗಳಿಗೆ ಕಳೆದ ಒಂದು ವಾರದಿಂದ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ತುಂಗಾಭದ್ರಾ ಜಲಾಶಯ ಬಹುತೇಕ ತುಂಬಿದೆ. ಎಲ್ಲ ಜಲಾಶಯಗಳ ನೀರಿನ ಮಟ್ಟದ ಬಗ್ಗೆ ನಿರಂತರ ನಿಗಾ ವಹಿಸಲಾಗಿದೆ ಎಂದು ತಿಳಿಸಿದರು.
ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರತಿ ತಾಲೂಕು ಮಟ್ಟದಲ್ಲಿ ಕಂಟ್ರೋಲ್ ರೂಮ್ ಆರಂಭಿಸಲಾಗಿದೆ ಎಂದರು.
ಅತಿವೃಷ್ಟಿಯಿಂದ ಮಾನವ ಜೀವ ಹಾನಿ ಹಾಗೂ ಜಾನುವಾರುಗಳಿಗೆ ಹಾನಿಯಾಗದಂತೆ ಗರಿಷ್ಠ ಎಚ್ಚರಿಕೆ ವಹಿಸಬೇಕು. ಜಾನುವಾರುಗಳಿಗೆ ಸಾಕಷ್ಟು ಮೇವು ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಅಗತ್ಯವಿರುವ ಕಡೆಗಳಲ್ಲಿ ಕಾಳಜಿ ಕೇಂದ್ರಗಳನ್ನು ಸ್ಥಾಪಿಸಲು ವ್ಯವಸ್ಥೆ ಮಾಡಬೇಕು. ಅತಿವೃಷ್ಟಿ ಪರಿಹಾರ ಕಾಮಗಾರಿಗಳಿಗೆ ಯಾವುದೇ ಅನುದಾನ ಕೊರತೆಯಾಗದಂತೆ ನೋಡಿಕೊಳ್ಳಲಾಗಿದ್ದು, ಈಗಾಗಲೇ ಎಲ್ಲ ಜಿಲ್ಲಾಧಿಕಾರಿಗಳ ಖಾತೆಗೆ ಅಗತ್ಯ ಅನುದಾನ ಬಿಡುಗಡೆ ಮಾಡಲಾಗಿದೆ. ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕೆ ಕೊರತೆ ಆಗದಂತೆ ನೋಡಿಕೊಳ್ಳಬೇಕು.
– ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ
ಬಿತ್ತನೆ ಬೀಜಕ್ಕಿಲ್ಲ ಕೊರತೆ | 26,459 ಕ್ವಿಂಟಾಲ್ ಬಿತ್ತನೆ ಬೀಜ ಬೇಡಿಕೆ ಇದ್ದು, 30,242 ಕ್ವಿಂಟಾಲ್ ದಾಸ್ತಾನು ಇದೆ. ಎಲ್ಲ ಕಡೆ ಕೃಷಿ ಚಟುವಟಿಕೆ ಆರಂಭವಾಗಿದ್ದು, ಈಗಾಗಲೇ 3,341 ಕ್ವಿಂಟಾಲ್ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ.
ಜೂನ್ ಅಂತ್ಯದವರೆಗೆ 52 ಸಾವಿರ ಮೆಟ್ರಿಕ್ ಟನ್ ವಿವಿಧ ರಸಗೊಬ್ಬರ ಬೇಡಿಕೆ ಇದ್ದು, 1.07 ಮೆ.ಟನ್ ದಾಸ್ತಾನಿದೆ. ಪ್ರಸ್ತುತ ಸಾಲಿನಲ್ಲಿ ಮಳೆಯಿಂದ 3 ಮಾನವ ಜೀವ ಹಾನಿ ಸಂಭವಿಸಿದ್ದು, 15 ಲಕ್ಷ ರೂ. ಪರಿಹಾರ ನೀಡಲಾಗಿದೆ. 2 ಜಾನುವಾರುಗಳು ಮೃತಪಟ್ಟಿದ್ದು 60 ಸಾವಿರ ರೂಪಾಯಿ ನೀಡಲಾಗಿದೆ. 4 ಮನೆಗಳು ಶೇ.75ರಷ್ಟು ಹಾಗೂ 69 ಮನೆಗಳು ಸ್ವಲ್ಪಮಟ್ಟಿನ ಹಾನಿಗೀಡಾಗಿದ್ದು ಮಾರ್ಗಸೂಚಿ ಪ್ರಕಾರ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
https://www.suddikanaja.com/2020/12/21/health-insurance-to-memcos-members-shivamogga/