ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೆಲವೇ ದಿನಗಳಲ್ಲಿ ಮುಂಗಾರು ಮಳೆ ಆರಂಭವಾಗುವ ನಿರೀಕ್ಷೆ ಹಿನ್ನೆಲೆಯಲ್ಲಿ ಸೂಕ್ತ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸೂಚನೆ ನೀಡಿದ್ದಾರೆ.
ತಾಲೂಕು ಮಟ್ಟದ ಅಧಿಕಾರಿಗಳ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಅವರು, ನೆರೆ ಹಾವಳಿ ಉಂಟಾಗಬಹುದಾದ ಗ್ರಾಮಗಳನ್ನು ಗುರುತಿಸಬೇಕು. ಭೂಕುಸಿತ ಸಂಭವಿಸಬಹುದಾದ ಸ್ಥಳಗಳು, ನೆರೆ ನೀರಿಗೆ ಮುಳುಗಬಹುದಾದ ಕಿರು ಸೇತುವೆಗಳು, ನೀರು ನಿಲ್ಲಬಹುದಾದ ತಗ್ಗು ಪ್ರದೇಶಗಳು ಇತ್ಯಾದಿಗಳನ್ನು ಗುರುತಿಸಿ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.
https://www.suddikanaja.com/2021/01/07/flood-in-shivamogga-city-due-to-rain-fall/
ತಾಲೂಕು ಮಟ್ಟದಲ್ಲಿ ಕಂಟ್ರೋಲ್ ರೂಂ | ಜಲಾಶಯಗಳು, ಕೆರೆ ಕಟ್ಟೆಗಳು, ಅಣೆಕಟ್ಟಿನ ನೀರಿನ ಮಟ್ಟದ ಮೇಲೆ ನಿರಂತರ ನಿಗಾ ಇರಿಸಬೇಕು. ಎಲ್ಲ ತಾಲೂಕು ಕೇಂದ್ರಗಳಲ್ಲಿ ದಿನದ 24 ಗಂಟೆ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಂ ಆರಂಭಿಸಬೇಕು. ನಗರ ಪ್ರದೇಶದಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತಾಗಲು ಗಿಡ ಗಂಟಿಗಳು, ಕಸ ಕಡ್ಡಿಗಳನ್ನು ತೆರವುಗೊಳಿಸಿ ಸ್ವಚ್ಛ ಮಾಡುವ ಕಾರ್ಯವನ್ನು ಆದಷ್ಟು ಬೇಗನೇ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.
ಅಂಗಡಿಗಳಿಗೆ ತೆರೆಯಲು ಸೀಮಿತ ಅವಕಾಶ | ಕೃಷಿ ಚಟುವಟಿಕೆಗಳನ್ನು ಆರಂಭಿಸಲು ಪೂರಕವಾಗಿ ಬೀಜ, ರಸಗೊಬ್ಬರ, ಕೃಷಿ ಯಂತ್ರೋಪಕರಣಗಳ ದುರಸ್ತಿಯಂತಹ ಅಂಗಡಿಗಳಿಗೆ ಸೀಮಿತ ಅವಧಿಯ ಮಿತಿಗೆ ಒಳಪಟ್ಟು ತೆರೆಯಲು ಅವಕಾಶ ನೀಡಬಹುದಾಗಿದೆ. ಅವಶ್ಯಕ ವಸ್ತುಗಳ ಸಗಟು ವ್ಯಾಪಾರಿಗಳು ಚಿಲ್ಲರೆ ವ್ಯಾಪಾರಿಗಳಿಗೆ ನೇರವಾಗಿ ಸಾಮಗ್ರಿ ಪೂರೈಕೆ ಮಾಡಲು ಅವಕಾಶವಿದೆ ಎಂದರು.
ಜಿಪಂ ಸಿಇಒ ಎಂ.ಎಲ್.ವೈಶಾಲಿ, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ್ ವಟಾರೆ, ಡಿಎಚ್.ಒ ಡಾ.ರಾಜೇಶ್ ಸುರಗಿಹಳ್ಳಿ, ಸಿಮ್ಸ್ ನಿರ್ದೇಶಕ ಡಾ.ಸಿದ್ದಪ್ಪ ಇತರ ಅದಿಕಾರಿಗಳು ಉಪಸ್ಥಿತರಿದ್ದರು.
https://www.suddikanaja.com/2020/12/23/fake-cigarettes-in-shivamogga-karnataka/