ಸುದ್ದಿ ಕಣಜ.ಕಾಂ | DISTRICT | 18 OCT 2022
ಶಿವಮೊಗ್ಗ(Shivamogga): ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಇವರ ನಿರ್ದೇಶನದ ಮೇರೆಗೆ ಜಿಲ್ಲೆಯಲ್ಲಿ ನವೆಂಬರ್ 12 ರಂದು ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದೆ ಎಂದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಮಲ್ಲಿಕಾರ್ಜುನಗೌಡ ತಿಳಿಸಿದ್ದಾರೆ.
READ | ಶಿವಮೊಗ್ಗದ ಹಲವೆಡೆ ಪೊಲೀಸರ ದಿಢೀರ್ ಕಾರ್ಯಾಚರಣೆ, ರಿಪೋರ್ಟ್ ಪಾಸಿಟಿವ್ ಇದ್ರೆ ಅಂದರ್, ಕಾರಣವೇನು?
ಯಾವ ಬಗೆಯ ಪ್ರಕರಣಗಳ ಇತ್ಯರ್ಥ?
- ಈ ಲೋಕ ಅದಾಲತ್ನಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಸಿವಿಲ್, ವೈವಾಹಿಕ, ಮೋಟಾರು ಪರಿಹಾರ ಪ್ರಕರಣಗಳು, ಚೆಕ್ಬೌನ್ಸ್, ರಾಜೀಯಾಗಬಹುದಾದ ಕ್ರಿಮಿನಲ್ ಪ್ರಕರಣಗಳು
- ಕಲಂ 6 ಹಿಂದೂ ವಾರಸು ಕಾಯ್ದೆಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ವಿನೀತ ಶರ್ಮ ವಿರುದ್ದ ರಾಕೇಶ್ ಶರ್ಮ ಮತ್ತು ಇತರರು ಪ್ರಕರಣದಲ್ಲಿ 2020ರ ಆಗಸ್ಟ್ 11 ರಂದು ನೀಡಿರುವ ತೀರ್ಪಿನನ್ವಯ ಹೆಣ್ಣು ಮಕ್ಕಳಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲು ಕುರಿತು, ವಿಭಜನಾ ಪ್ರಕರಣಗಳು ಹಾಗೂ ಇತರೆ ಪ್ರಕರಣಗಳನ್ನು ಗುರುತಿಸಿ, ಉಭಯ ಕಕ್ಷಿದಾರರನ್ನು ಕರೆಯಿಸಿಕೊಂಡು ಅವರ ಒಪ್ಪಿಗೆ ಪ್ರಕಾರ ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗುವುದು.
- ಬ್ಯಾಂಕುಗಳಿಗೆ ಸಂಬಂಧಿಸಿದ ಸಾಲದ ಹಣದ ವಸೂಲಾತಿ ಪ್ರಕರಣಗಳು, ವಿದ್ಯುಚ್ಚಕ್ತಿ, ಜಲಮಂಡಳಿ ಹಾಗೂ ನ್ಯಾಯಾಲಯಕ್ಕೆ ಬರಬಹುದಾದಂತಹ ಇತರೆ ಯಾವುದೇ ಪ್ರಕರಣಗಳನ್ನು ಪೂರ್ವ ವ್ಯಾಜ್ಯ ಪ್ರಕರಣಗಳೆಂದು ಪರಿಗಣಿಸಿ, ಅವುಗಳಲ್ಲಿ ಸಹ ಉಭಯ ಕಕ್ಷಿದಾರರನ್ನು ಕರೆಯಿಸಿಕೊಂಡು ರಾಜೀ ಸಂಧಾನದ ಮೂಲಕ ವಿವಾದಗಳನ್ನು ಬಗೆಹರಿಸಿ ಅವಾರ್ಡ್ ಪಾಸು ಮಾಡಲಾಗುವುದು.
ಅಮಲ್ ಜಜಾವಣೆಗೆ ಅವಕಾಶವಿದೆ
ಈ ಅವಾರ್ಡ್ ನ್ಯಾಯಾಲಯದಲ್ಲಿ ಮಾಡಬಹುದಾದ ಡಿಕ್ರಿ ಇದ್ದಂತೆ ಆಗುತ್ತಿದ್ದು, ಅಂತಹ ಅವಾರ್ಡ್’ಗಳನ್ನು ಸಂಬಂಧಪಟ್ಟ ಸಿವಿಲ್ ನ್ಯಾಯಾಲಯಗಳಲ್ಲಿ ಅಮಲ್ ಬಜಾವಣೆ ಮಾಡಲು ಕಾನೂನಿನಲ್ಲಿ ಅವಕಾಶ ಇದೆ. ಇದರಿಂದ ಕಕ್ಷಿದಾರರಿಗೆ ನ್ಯಾಯಾಲಯದ ಖರ್ಚು ಹಾಗೂ ಅವರ ಅಮೂಲ್ಯ ಸಮಯ ಉಳಿತಾಯವಾಗುತ್ತದೆ. ಅಲ್ಲದೇ ಶೀಘ್ರವಾಗಿ ನ್ಯಾಯದಾನವಾಗುತ್ತದೆ. ಆದ್ದರಿಂದ ಜನತೆ ಇಂತಹ ಪ್ರಕ್ರಿಯೆ ಉಪಯೋಗವನ್ನು ಪಡೆಯಬೇಕು. ಪ್ರಕರಣಗಳನ್ನು ರಾಜೀ ಸಂಧಾನಕ್ಕಾಗಿ ಗುರುತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ.
https://suddikanaja.com/2022/10/17/home-clearance-operation-at-malligenahalli-hakkipikki-camp-shivamogga/