ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯ ಮತದಾರರ ಪಟ್ಟಿಯನ್ನು ಪರಿಷ್ಕರಣೆಗೊಳಿಸಲಾಗಿದ್ದು, ಅಂತಿಮ ಮತದಾರರ ಪಟ್ಟಿಯಲ್ಲಿ 7,27,310 ಮಹಿಳಾ ಮತದಾರರು, 7,14,490 ಪುರುಷ ಮತದಾರರು ಹಾಗೂ 33 ತೃತೀಯ ಲಿಂಗ ಮತದಾರರು ಸೇರಿ ಒಟ್ಟು 14,41,833 ಅರ್ಹ ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದರು.
ಗುರುವಾರ ಸಂಜೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ 2023ರ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಲಿಂಗಾನುಪಾತ ಅತಿ ಹೆಚ್ಚು ಭದ್ರಾವತಿ ಕ್ಷೇತ್ರದಲ್ಲಿ 1,054 ಇದ್ದು, ಅತಿ ಕಡಿಮೆ ಸೊರಬ ಕ್ಷೇತ್ರದಲ್ಲಿ 980 ಇದೆ. ಕಳೆದ ನವೆಂಬರ್ 9ರಂದು ಪ್ರಕಟಿಸಲಾಗಿದ್ದ ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 14,34,138 ಮತದಾರರ ಹೆಸರು ಪ್ರಕಟಿಸಲಾಗಿತ್ತು. ಅಂತಿಮ ಪಟ್ಟಿಯಲ್ಲಿ 40,767 ಮತದಾರರನ್ನು ಹೊಸದಾಗಿ ಸೇರ್ಪಡೆಗೊಳಿಸಲಾಗಿದ್ದು, 33,072 ಮತದಾರರ ಹೆಸರು ಕೈ ಬಿಡಲಾಗಿದೆ. 11,651 ತಿದ್ದುಪಡಿ ಮಾಡಲಾಗಿದೆ. ತೆಗೆದು ಹಾಕಿರುವುದಕ್ಕೆ 11873 ಮರಣ, 17,064 ಸ್ಥಳಾಂತರ, 1,058 ಪುನರಾವರ್ತನೆ ಮತ್ತು 3,077 ವಲಸೆ ಕಾರಣವಾಗಿದೆ. ಕರಡು ಪಟ್ಟಿಯಲ್ಲಿ ಲಿಂಗಾನುಪಾತ 1 ಸಾವಿರ ಪುರುಷ ಮತದಾರರಿಗೆ 1,014 ಮಹಿಳಾ ಮತದಾರರು ಇದ್ದರು ಎಂದು ಅವರು ಮಾಹಿತಿ ನೀಡಿದರು.
– ಡಾ.ಆರ್.ಸೆಲ್ವಮಣಿ, ಜಿಲ್ಲಾಧಿಕಾರಿ
ಅಂತಿಮ ಮತದಾರರ ಪಟ್ಟಿಯಲ್ಲಿ ಮತದಾರರ ಲಿಂಗಾನುಪಾತ ಉತ್ತಮಗೊಂಡಿದ್ದು, 1 ಸಾವಿರ ಪುರುಷ ಮತದಾರರಿಗೆ 1,018 ಮಹಿಳಾ ಮತದಾರರು ಇದ್ದಾರೆ. ಮತದಾರರ ಪಟ್ಟಿಯಲ್ಲಿ ಹೊಸದಾಗಿ 22,185 ಯುವ ಮತದಾರರ ಸೇರ್ಪಡೆಯಾಗಿದ್ದು, ಇವರಲ್ಲಿ 11,760 ಪುರುಷ ಹಾಗೂ 10,419 ಮಹಿಳಾ ಮತದಾರರು ಇದ್ದಾರೆ. ಜಿಲ್ಲೆಯಲ್ಲಿ ಪ್ರಸ್ತುತ 1,775 ಮತಗಟ್ಟೆಗಳು ಇವೆ ಎಂದು ಹೇಳಿದರು.
READ | ಖಾಸಗಿ ಸಿಟಿ ಬಸ್ ಮಾಲೀಕರಿಗೆ ಜಿಲ್ಲಾಧಿಕಾರಿ ಖಡಕ್ ವಾರ್ನಿಂಗ್
ವಿಧಾನಸಭಾ ಕ್ಷೇತ್ರವಾರು ವಿವರ
- ಶಿವಮೊಗ್ಗ ಗ್ರಾಮಾಂತರದಲ್ಲಿ 1,03,534 ಪುರುಷ, 104525 ಮಹಿಳಾ, ಮೂವರು ತೃತೀಯ ಲಿಂಗಿ ಸೇರಿದಂತೆ ಒಟ್ಟು 208062 ಮತದಾರರು ಇದ್ದಾರೆ.
- ಭದ್ರಾವತಿ ಕ್ಷೇತ್ರದಲ್ಲಿ 1,01,058 ಪುರುಷ, 1,06,546 ಮಹಿಳಾ, ಐವರು ತೃತೀಯ ಲಿಂಗಿ ಸೇರಿದಂತೆ ಒಟ್ಟು 2,07,609 ಮತದಾರರು ಇದ್ದಾರೆ.
- ಶಿವಮೊಗ್ಗ ನಗರ ಕ್ಷೇತ್ರದಲ್ಲಿ 1,23,770 ಪುರುಷ, 1,29,204 ಮಹಿಳಾ, 15 ತೃತೀಯ ಲಿಂಗಿ ಸೇರಿದಂತೆ 2,52,989 ಮತದಾರರು ಇದ್ದಾರೆ.
- ತೀರ್ಥಹಳ್ಳಿ ಕ್ಷೇತ್ರದಲ್ಲಿ 91,376 ಪುರುಷ, 93,475 ಮಹಿಳಾ, ಮೂವರು ತೃತೀಯ ಲಿಂಗಿ ಸೇರಿದಂತೆ 1,84,854 ಮತದಾರರು ಇದ್ದಾರೆ.
- ಶಿಕಾರಿಪುರ ಕ್ಷೇತ್ರದಲ್ಲಿ 98,281 ಪುರುಷ, 97,086 ಮಹಿಳಾ, ನಾಲ್ವರು ತೃತೀಯ ಲಿಂಗಿ ಸೇರಿದಂತೆ ಒಟ್ಟು 1,95,371 ಮತದಾರರು ಇದ್ದಾರೆ.
- ಸೊರಬ ಕ್ಷೇತ್ರದಲ್ಲಿ 97,070 ಪುರುಷ, 95,148 ಮಹಿಳಾ, ಇಬ್ಬರು ತೃತೀಯ ಲಿಂಗಿ ಸೇರಿದಂತೆ ಒಟ್ಟು 1,92,220 ಮತದಾರರು ಇದ್ದಾರೆ.
- ಸಾಗರ ಕ್ಷೇತ್ರದಲ್ಲಿ 99,401 ಪುರುಷ, 1,01,326 ಮಹಿಳಾ, ಒಂದು ತೃತೀಯ ಲಿಂಗಿ ಸೇರಿದಂತೆ ಒಟ್ಟು 2,00,728 ಮತದಾರರು ಇದ್ದಾರೆ.
ಇನ್ನೂ ಸೇರ್ಪಡೆಗೆ ಇದೆ ಅವಕಾಶ
2023ರ ಸಾರ್ವತ್ರಿಕ ವಿಧಾನಸಭಾ ಚುನಾವಣಾ ಸಂಬಂಧದಲ್ಲಿ ಅರ್ಹ ಮತದಾರರು ಮತದಾರರ ಪಟ್ಟಿಗೆ ಚುನಾವಣಾ ಆಯೋಗ ನಿಗದಿಪಡಿಸುವ ದಿನಾಂಕದವರೆಗೂ ಹೆಸರು ಸೇರಿಸಲು ಅವಕಾಶವಿರುತ್ತದೆ. ನಮೂನೆ 6 ಸೇರ್ಪಡೆ, ನಮೂನೆ 6ಎ ಅನಿವಾಸಿ ಭಾರತೀಯರು ಹೆಸರು ನೋಂದಾಯಿಸಿಕೊಳ್ಳಲು, 6ಬಿ ಮತದಾರರ ಪಟ್ಟಿಯೊಂದಿಗೆ ಆಧಾರ್ ಜೋಡಣೆ ಮಾಡಿಕೊಳ್ಳಲು, ನಮೂನೆ 7 ತೆಗೆದು ಹಾಕಲು, ನಮೂನೆ 8ರಲ್ಲಿ ತಿದ್ದುಪಡಿ, ವರ್ಗಾವಣೆ, ಬದಲಿ ಎಪಿಕ್ಗೆ ಮನವಿ ಮತ್ತು ಅಂಗವೈಕಲ್ಯ ಹೊಂದಿರುವ ಮತದಾರರು ವಿವರ ದಾಖಲಿಸಲು ಅವಕಾಶವಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ ತಿಳಿಸಿದರು.
ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
https://suddikanaja.com/2023/01/05/home-minister-araga-jnanendra-help/