ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಉಕ್ಕಿನ ನಗರಿ ಭದ್ರಾವತಿಯಲ್ಲಿರುವ ವಿಐಎಸ್.ಎಲ್ ಕಾರ್ಖಾನೆ ಪುನರಾರಂಭಿಸುವುದಕ್ಕೆ ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಈ ವಾರದಲ್ಲಿ ಸಭೆಯನ್ನು ಕರೆದಿದ್ದು, ಅಲ್ಲಿನ ನಿರ್ಣಯಗಳನ್ನು ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆಶ್ವಾಸನೆ ನೀಡಿದರು.
ಟರ್ಕಿಯಲ್ಲಿನ ಭೀಕರ ಭೂಕಂಪನದಲ್ಲಿ ಎಷ್ಟು ಮಂದಿ ಕನ್ನಡಿಗರಿದ್ದಾರೆ ಎಂಬ ಮಾಹಿತಿ ಲಭಿಸಿಲ್ಲ. ದೆಹಲಿಯಲ್ಲಿರುವ ರಾಜ್ಯದ ಆಯುಕ್ತರು ನೋಡಲ್ ಅಧಿಕಾರಿಯಾಗಿದ್ದು, ಅವರಿಂದ ಮಾಹಿತಿ ಪಡೆಯಲಾಗುವುದು.
– ಬಸವರಾಜ್ ಬೊಮ್ಮಾಯಿ, ಸಿಎಂ
ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಟೀಲ್ ಕೈಗಾರಿಕೆಗಳೊಂದಿಗೆ ಬೆಂಗಳೂರಿನಲ್ಲಿ ಸಭೆಯನ್ನು ಕರೆಯಲಾಗುವುದು. ಅಲ್ಲಿ ಕೈಗೊಂಡ ನಿರ್ಣಯಗಳನ್ನು ಕೇಂದ್ರಕ್ಕೆ ಕಳುಹಿಸಲಾಗುವುದು. ನಮ್ಮ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡುವ ವಿಶ್ವಾಸ ಇದೆ ಎಂದರು.
ವಿ.ಐ.ಎಸ್.ಎಲ್ ಕಾರ್ಖಾನೆ ಕಾರ್ಮಿಕರ ಮುಷ್ಕರದ ಬಗ್ಗೆ ನನಗೆ ಮಾಹಿತಿ ಇದೆ. ಅವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಈ ವಿಚಾರವನ್ನು ರಾಜಕೀಯಕ್ಕೆ ಬಳಸುವುದು ಸರಿಯಲ್ಲ ಎಂದು ಹೇಳಿದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಶಾಸಕ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.