ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯ ಹಲವೆಡೆ ಅಗತ್ಯವಿರುವ ಸಿಬ್ಬಂದಿ ನೇಮಕಕ್ಕೆ ನೇರ ಸಂದರ್ಶನ ನಡೆಯಲಿದ್ದು, ಆಸಕ್ತ ಮತ್ತು ಅರ್ಹರು ನೇರ ಸಂದರ್ಶನಕ್ಕೆ ಹಾಜರಾಗುವಂತೆ ಕೋರಲಾಗಿದೆ.
ಎಲ್ಲೆಲ್ಲಿ ಯಾವ ಹುದ್ದೆಗಳ ನೇಮಕ?
ರಾಷ್ಟ್ರೀಯ ನಗರ ಆರೋಗ್ಯ ಮಿಷನ್ (National Urban Health Mission- NUHM) ಕಾರ್ಯಕ್ರಮದಡಿ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ಶಿರಾಳಕೊಪ್ಪ, ಆನವಟ್ಟಿ, ಹೊಳೆಹೊನ್ನೂರು ಇಲ್ಲಿ “ನಮ್ಮ ಕ್ಲಿನಿಕ್ (Namma Clinic) ಅನ್ನು ಹೊಸದಾಗಿ ಪ್ರಾರಂಭಿಸುವ ಸಂಬಂಧ ವೈದ್ಯಕೀಯ/ ಅರೆ ವೈದ್ಯಕೀಯ ಸಿಬ್ಬಂದಿ ಆಯ್ಕೆಗೆ ನೇರ ಸಂದರ್ಶನ ಹಾಗೂ ಶಿವಮೊಗ್ಗ ಮತ್ತು ತೀರ್ಥಹಳ್ಳಿ ತಾಲ್ಲೂಕಿಗೆ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ (Rashtriya Bal Swasthya Karyakram- RBSK) ಕಾರ್ಯಕ್ರಮದಡಿ ವೈದ್ಯಾಧಿಕಾರಿಗಳನ್ನು ಆಯ್ಕೆ ಮಾಡಲು ನೇರ ಸಂದರ್ಶನವನ್ನು ಏರ್ಪಡಿಸಲಾಗಿದೆ.
READ |ಅಗ್ನಿವೀರ್ ನೇಮಕಾತಿಗೆ ನೋಂದಣಿ ಆರಂಭ, ಯಾವಾಗಿಂದ ನೇಮಕಾತಿ?
ಎಷ್ಟು ಹುದ್ದೆಗಳು, ವಿದ್ಯಾರ್ಹತೆ ಏನು?
- ಎನ್.ಯು.ಎಚ್.ಎಂ ಕಾರ್ಯಕ್ರಮದಡಿ ವೈದ್ಯಾಧಿಕಾರಿ 3 ಹುದ್ದೆಗಳಿದ್ದು ಎಂಬಿಬಿಎಸ್, ಕೆಎಂಸಿ ನೋಂದಣಿ, ಪದವಿ ಪ್ರಮಾಣ ಪತ್ರ ಸಲ್ಲಿಸಬೇಕು.
- ಶುಶ್ರೂಷಕಿಯರು (ಮಹಿಳೆ) 3 ಹುದ್ದೆಗಳಿದ್ದು ಮಾನ್ಯತೆ ಪಡೆದಿರುವ ನರ್ಸಿಂಗ್ ಸಂಸ್ಥೆಯಿಂದ ಜಿ.ಎನ್.ಎಂ/ಬಿ.ಎಸ್ಸಿ ನರ್ಸಿಂಗ್/ ಡಿಪ್ಲೋಮಾ ನರ್ಸಿಂಗ್ ಪದವಿ ಪಡೆದಿರಬೇಕು. ಎಂ.ಎಸ್ಸಿ ಅಥವಾ ಬಿ.ಎಸ್ಸಿ ಪದವಿ ಪಡೆದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
- ಒಂದು ಎಂಬಿಬಿಎಸ್ ಮತ್ತು 2 ಆಯುಷ್ ವೈದ್ಯಾಧಿಕಾರಿಗಳ ಹುದ್ದೆಗಳಿಗೆ ಬಿ.ಎ.ಎಂ.ಎಸ್/ ಎಂ.ಬಿ.ಬಿ.ಎಸ್ ವೈದ್ಯ ಪದ್ದತಿಯನ್ನು ಅಂಗೀಕೃತ ವಿಶ್ವ ವಿದ್ಯಾನಿಲಯದಲ್ಲಿ ಪದವಿ ಪಡೆದಿರಬೇಕು.
- ಕಿರಿಯ ಪ್ರಯೋಗ ಶಾಲಾ ತಂತ್ರಜ್ಞರ 3 ಹುದ್ದೆಗಳಿದ್ದು ದ್ವಿತೀಯ ಪಿ.ಯು.ಸಿಯಲ್ಲಿ ವಿಜ್ಞಾನ ವಿಷಯದಲ್ಲಿ ಉತೀರ್ಣ ಮತ್ತು ಕರ್ನಾಟಕ ರಾಜ್ಯ ಅರೆವೈದ್ಯಕೀಯ ಮಂಡಳಿಯು ನಡೆಸುವ ಎರಡು ವರ್ಷದ ಪ್ರಯೋಗಶಾಲಾ ತಂತ್ರಜ್ಞರ ತರಬೇತಿ ಪಡೆದಿರಬೇಕು. ಕಂಪ್ಯೂಟರ್ (ಬೇಸಿಕ್ ) ಮತ್ತು ಅಂತರ್ಜಾಲ, ಇತ್ಯಾದಿಗಳ ಬಳಕೆಗೆ ಬೇಕಾಗುವ ಕಂಪ್ಯೂಟರ್ (ಬೇಸಿಕ್ ) ತರಬೇತಿ ಕಡ್ಡಾಯವಾಗಿ ಉತ್ತೀರ್ಣರಾಗಿರಬೇಕು.
ಮಾ.13ರಂದು ಸಂದರ್ಶನ?
ನೇರ ಸಂದರ್ಶನವನ್ನು ಮಾರ್ಚ್ 13 ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರ ವರೆಗೆ ಬಿ.ಎಚ್.ರಸ್ತೆಯಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ಆವರಣದಲ್ಲಿ ಮಧ್ಯಾಹ್ನ 12 ಗಂಟೆಯಿಂದ ಸಂಜೆ 5.30ರ ವರೆಗೆ ನಡೆಸಲಾಗುವುದು.
ಈ ದಾಖಲೆಗಳನ್ನು ಜೊತೆಯಲ್ಲಿ ತನ್ನಿ
ಎನ್.ಎಚ್.ಎಂ/ ಎನ್.ಯು.ಎಚ್.ಎಂ ಮಾರ್ಗಸೂಚಿಯಂತೆ ವೇತನ ಹಾಗೂ ನೇಮಕಾತಿಯು ಮೆರಿಟ್ ಕಂ ರೋಸ್ಟರ್ ಆಧಾರದ ಮೇಲೆ ಮೇಲಿನ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಸಂಬಂಧಪಟ್ಟ ಹುದ್ದೆಯ ಸ್ವಯಂ ದೃಢೀಕರಿಸಿದ ದಾಖಲೆಗಳ ನಕಲು ಪ್ರತಿ, ಇತ್ತೀಚಿನ ಭಾವಚಿತ್ರ, 2 ರಿಂದ 5 ವರ್ಷಗಳ ಅನುಭವ ಪ್ರಮಾಣ ಪತ್ರ, ಗುರುತಿನ ಚೀಟಿ, ಜಾತಿ ಪ್ರಮಾಣ ಪತ್ರ, ಕಾಯಂ ವಿಳಾಸ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 08182-200337 ಹಾಗೂ ಕಚೇರಿಯನ್ನು ಸಂಪರ್ಕಿಸಬಹುದೆಂದು ಆರ್.ಸಿ.ಎಚ್.ಓ ತಿಳಿಸಿದ್ದಾರೆ.
Jobs in shivamogga | ಹೆಲ್ತ್ ಆ್ಯಂಡ್ ವೆಲ್ನೆಸ್ ಸೆಂಟರ್’ಗಳಲ್ಲಿ ಉದ್ಯೋಗ, ಎಲ್ಲೆಲ್ಲಿ ಅವಕಾಶ?