Congress | ಶಿವಮೊಗ್ಗದಲ್ಲಿ ಮೂವರಲ್ಲಿ ಯಾರಿಗೆ ಸಚಿವ ಸ್ಥಾನ? ಯಾರದ್ದೇನು ಪ್ಲಸ್ ಪಾಯಿಂಟ್

Congress madhu

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದೇ ಜಿಲ್ಲಾವಾರು ಯಾರು ರೇಸ್’ನಲ್ಲಿದ್ದಾರೆಂಬ ಚರ್ಚೆ ಬಲು ಜೋರಾಗಿ ನಡೆಯುತ್ತಿದೆ. ಇದು ಶಿವಮೊಗ್ಗಕ್ಕೆ‌ ಹೊರತೇನಲ್ಲ.
ಜಿಲ್ಲೆಯಲ್ಲೂ ಕಾಂಗ್ರೆಸ್ ಪಾಳಯದ ಹಿರಿಯ ಮತ್ತು ಅನುಭವಿ ರಾಜಕಾರಣಿಗಳಿದ್ದಾರೆ. ಹೀಗಾಗಿ, ಯಾರಿಗೆ ಸಚಿವ ಸ್ಥಾನ ಸಿಗಬಹುದೆಂಬ ಚರ್ಚೆ ಬಿರುಸಾಗಿದೆ.

READ | ಶಿವಮೊಗ್ಗದಲ್ಲಿ ಯಾರಿಗೆಲ್ಲ ಗೆಲುವು, ಎಷ್ಟು ಅಂತರ, ಇಲ್ಲಿದೆ ಕಂಪ್ಲೀಟ್ ಮಾಹಿತಿ

ಯಾರೆಲ್ಲ ರೇಸ್’ನಲ್ಲಿದ್ದಾರೆ?
ಶಿವಮೊಗ್ಗ ಜಿಲ್ಲೆಯ ಮೂರು ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಮೂವರೂ ಪ್ರಭಾವಿಗಳೇ ಆಗಿದ್ದು, ಸಚಿವ ಸ್ಥಾನ ಆಕಾಂಕ್ಷಿಗಳಾಗಿದ್ದಾರೆ. ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ (BK Sangameshwar), ಸಾಗರದ ಶಾಸಕ‌ ಬೇಳೂರು ಗೋಪಾಲಕೃಷ್ಣ (Beluru Gopalakrishna) ಹಾಗೂ ಸೊರಬ ಶಾಸಕ ಮಧು ಬಂಗಾರಪ್ಪ (Madhu Bangarappa) ಅವರು ಸಚಿವ ಸ್ಥಾನ ಆಕಾಂಕ್ಷಿಗಳಾಗಿದ್ದಾರೆ.
ಯಾರದ್ದೇನು ಪ್ಲಸ್ ಪಾಯಿಂಟ್?
ಮಧು ಬಂಗಾರಪ್ಪ
ಕೆಪಿಸಿಸಿ ಹಿಂದುಳಿದ ಘಟಕಗಳ ಅಧ್ಯಕ್ಷ ಮಧು ಅವರ ಹೆಸರು ಮುಂಚೂಣಿಯಲ್ಲಿದೆ. ಅದಕ್ಕೆ ಅವರ ತಂದೆಯ ನಾಮಬಲವೂ ಕಾರಣವಾಗಿದೆ. ಕಾಂಗ್ರೆಸ್’ನಲ್ಲಿ ಪ್ರಭಾವಿಯೂ ಆಗಿದ್ದಾರೆ. ಎರಡನೇ ಸಲ ಸಚಿವರಾಗಿ ಆಯ್ಕೆಯಾಗಿದ್ದು, ಬೇಗೂರು, ಸಂಗಮೇಶ್ವರ್ ಅವರಿಗೆ ಹೋಲಿಸಿದ್ದಲ್ಲಿ ಅನುಭವ ಕಡಿಮೆ. ಆದರೆ, ಹಿಂದುಳಿದ ವರ್ಗಗಳ ಕೋಟಾ ಲೆಕ್ಕಾಚಾರದಲ್ಲಿ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಮಧು ಆಪ್ತರೂ ಆಗಿದ್ದಾರೆ.
ಬಿ.ಕೆ.ಸಂಗಮೇಶ್ವರ್
ಇವರು ಭದ್ರಾವತಿ ಕ್ಷೇತ್ರದಿಂದ ಶಾಸಕರಾಗಿ ನಾಲ್ಕನೇ ಸಲ ಆಯ್ಕೆಯಾಗಿದ್ದಾರೆ. ಅನುಭವಿ ರಾಜಕಾರಣಿಯೂ ಆಗಿದ್ದಾರೆ. ಈ ಸಲ ಕೆಪಿಸಿಸಿ ಮುಖಂಡರು ಭದ್ರಾವತಿ ಪ್ರಚಾರ ವೇಳೆ ಸಂಗಮೇಶ್ವರ್’ಗೆ ಗೆಲ್ಲಿಸಿದರೆ ಸಚಿವ ಸ್ಥಾನ ನೀಡುತ್ತೇವೆಂಬ ಆಶ್ವಾಸನೆಯನ್ನು ನೀಡಿದ್ದರು. ಹೀಗಾಗಿ, ಸಚಿವ ಸ್ಥಾನ ನೀಡುವ ಅನಿವಾರ್ಯತೆ ಇದೆ.
ಇವರು ನಾಲ್ಕು‌ ಶಾಸಕರಾದರೂ ಪ್ರತಿ ಸಲ ಸ್ಪಷ್ಟ ಬಹುಮತ ಸಿಕ್ಕಿರಲಿಲ್ಲ‌. ರಾಜ್ಯದಲ್ಲಿ ಮೈತ್ರಿ ಸರ್ಕಾರ ಇದ್ದಾಗಲೂ ಇವರು ಶಾಸಕರಾಗಿದ್ದವರು. ಮೊದಲ ಸಲ‌ ಶಾಸಕರಾದಾಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿತ್ತು. ಎರಡನೇ ಸಲ ಬಿಜೆಪಿ‌ ಅಧಿಕಾರದಲ್ಲಿತ್ತು. ಮೂರನೇ ಸಲ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚಿಸಲಾಗಿತ್ತು. ಆದರೆ, ಇದೇ‌ ಮೊದಲ‌ ಸ್ಪಷ್ಟ ಬಹುಮತವಿದ್ದು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.
ಬೇಳೂರು ಗೋಪಾಲಕೃಷ್ಣ
ಸಾಗರದಿಂದ ಮೂರನೇ ಸಲ ಶಾಸಕರಾಗಿ ಆಯ್ಕೆಯಾಗಿದ್ದು, ಅನುಭವಿ ರಾಜಕಾರಣಿಯೂ ಆಗಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವ ಸ್ಥಾನಕ್ಕಾಗಿ‌ ಪಟ್ಟು ಹಿಡಿದು ಹೊನ್ನಾಳಿ ಶಾಸಕರಾಗಿದ್ದ ಎಂ.ಪಿ.ರೇಣುಕಾಚಾರ್ಯರೊಂದಿಗೆ ಜೊತೆಗೂಡಿ ರೆಸಾರ್ಟ್ ರಾಜಕಾರಣಕ್ಕೂ ಹೋಗಿದ್ದರು.

Mysuru Court | ಮೈಸೂರು ನ್ಯಾಯಾಲಯದಲ್ಲಿ 45 ಹುದ್ದೆಗಳು ಖಾಲಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು

error: Content is protected !!