ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ನಗರದಲ್ಲಿ ಶುಕ್ರವಾರ ಸಂಜೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದರು. ಹಾಫ್ ಹೆಲ್ಮೆಟ್ (Half helmet) ಧರಿಸಿ ವಾಹನ ಚಲಾಯಿಸುತ್ತಿದ್ದವರನ್ನು ತಡೆದು ಹೆಲ್ಮೆಟ್ ವಶಕ್ಕೆ ಪಡೆದರು.
ಮಹಾವೀರ ವೃತ್ತ, ಶಿವಪ್ಪನಾಯಕ ವೃತ್ತ, ಅಶೋಕ ವೃತ್ತ ಹಾಗೂ ಗೋಪಿ ವೃತ್ತದಲ್ಲಿ ಶಿವಮೊಗ್ಗ ಪೂರ್ವ ಮತ್ತು ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಿಂದ ವಿಶೇಷ ಕಾರ್ಯಾಚರಣೆಯನ್ನು ಕೈಗೊಳ್ಳಲಾಯಿತು.
READ | ಮಲೆನಾಡಿನಲ್ಲಿ ಕಣ್ಮರೆಯಾದ ಮಳೆ, ಮಳೆಗಾಲದಲ್ಲೂ ಬಿಸಿಲಿನ ಶಕೆ, ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ?
ಇತ್ತೀಚೆಗಷ್ಟೇ ನಗರದಲ್ಲಿ ಪೊಲೀಸರು ಭಾರೀ ಸಂಖ್ಯೆಯಲ್ಲಿ ಹಾಫ್ ಹೆಲ್ಮೆಟ್’ಗಳನ್ನು ವಶಕ್ಕೆ ಪಡೆದಿದ್ದರು. ವಾಹನಗಳಲ್ಲಿ ಲೋಡ್ ತುಂಬಿ ಕಳುಹಿಸಿದ್ದರು. ಐಎಸ್.ಐ ಪ್ರಮಾಣೀಕೃತವಲ್ಲದ ಹೆಲ್ಮೆಟ್ ಗಳನ್ನು ಮಾರಾಟ ಮಾಡುವ ಅಂಗಡಿಗಳ ಮೇಲೆಯೂ ದಾಳಿ ನಡೆಸಿ ತಿಳಿವಳಿಕೆ ನೀಡಿದರು. ಇಷ್ಟಾದರೂ ಸಾರ್ವಜನಿಕರು ಹಾಫ್ ಹೆಲ್ಮೆಟ್ ಧರಿಸುವುದು ಮಾತ್ರ ನಿಂತಿಲ್ಲ. ಹೀಗಾಗಿ, ಮತ್ತೊಂದು ಹಂತದ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ.
500ಕ್ಕೂ ಹೆಚ್ಚು ಹೆಲ್ಮೆಟ್ ಸೀಜ್
ಶುಕ್ರವಾರ ಸಂಜೆ ವಿವಿಧೆಡೆ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಸುಮಾರು 500ಕ್ಕೂ ಹೆಚ್ಚು ಹಾಫ್ ಹೆಲ್ಮೆಟ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಅವುಗಳನ್ನು ವಾಹನದಲ್ಲಿ ಲೋಡ್ ಮಾಡಿ ಕಳುಹಿಸಲಾಗಿದೆ.
ಫೀಲ್ಡಿಗಿಳಿದ ಎಸ್ಪಿ ಮಿಥುನ್ ಕುಮಾರ್
ಸಂಜೆ ಗೋಪಿ ವೃತ್ತದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು. ದ್ವಿಚಕ್ರ ವಾಹನಗಳನ್ನು ತಡೆದು ಹಾಫ್ ಹೆಲ್ಮೆಟ್ ಗಳನ್ನು ವಶಪಡಿಸಿಕೊಳ್ಳಲಾಗುತ್ತಿತ್ತು. ಇದರೊಂದಿಗೆ ಪೊಲೀಸ್ ಅಧೀಕ್ಷಕ ಜಿ.ಕೆ.ಮಿಥುನ್ ಕುಮಾರ್ ಫೀಲ್ಡಿಗಿಳಿದು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಜೀವದ ಸುರಕ್ಷತೆ ದೃಷ್ಟಿಯಿಂದ ಜನರು ಐಎಸ್.ಐ ಪ್ರಮಾಣೀಕೃತ ಹೆಲ್ಮೆಟ್ ಧರಿಸಬೇಕು ಎಂದು ತಿಳಿಸಿದರು.
ಸಂದರ್ಭದಲ್ಲಿ ಶಿವಮೊಗ್ಗ ಬಿ ಉಪ ವಿಭಾಗ ಡಿವೈಎಸ್.ಪಿ ಸುರೇಶ್, ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್, ಶಿವಮೊಗ್ಗ ಪೂರ್ವ ಮತ್ತು ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಅಧಿಕಾರಿ ಮತ್ತು ಸಿಬ್ಬಂದಿ ತಂಡವು ಶಿವಮೊಗ್ಗ ನಗರದ ಪ್ರಮುಖ ವೃತ್ತಗಳಲ್ಲಿ ವಿಶೇಷ ಕಾರ್ಯಾಚರಣೆಯನ್ನು ನಡೆಸಿತು.