ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಭದ್ರಾವತಿ (Bhadravathi) ನಗರದ ಕಂಟ್ರಿ ಕ್ಲಬ್ ಕಮ್ಯುನಿಟಿ ಹಾಲ್ ನಲ್ಲಿ ಪೊಲೀಸ್ ಅಧೀಕ್ಷಕ ಜಿ.ಕೆ.ಮಿಥುನ್ ಕುಮಾರ್ ನೇತೃತ್ವದಲ್ಲಿ ಮುಂಬರುವ ಗೌರಿ-ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಹಬ್ಬದ ಸಂಘಟನಾ ಕಮಿಟಿಯವರು ಮುಖಂಡರು ಮತ್ತು ಸಾರ್ವಜನಿಕರ ಸಭೆಯನ್ನು ನಡೆಸಿ ಸಲಹೆ ಮತ್ತು ಸೂಚನೆಗಳನ್ನು ನೀಡಲಾಯಿತು.
READ | ಪೊಲೀಸರ ದಿಢೀರ್ ದಾಳಿ, ಹೊರ ರಾಜ್ಯದವನೂ ಸೇರಿ ಐವರ ಬಂಧನ
- ಪ್ರತಿ ಹಬ್ಬಗಳು ತನ್ನದೇ ವಿಶೇಷ ಮಹತ್ವ ಮತ್ತು ಸಾವಿರಾರು ವರ್ಷಗಳ ಹಿನ್ನೆಲೆಯನ್ನು ಹೊಂದಿದ್ದು, ಹಬ್ಬವನ್ನು ಭಕ್ತಿ ಪೂರ್ವಕವಾಗಿ, ವಿಜೃಂಭಣೆಯಿಂದ ಮತ್ತು ಶಾಂತ ರೀತಿಯಲ್ಲಿ ಆಚರಣೆ ಮಾಡಬೇಕು.
- ಹಬ್ಬದ ಕಮಿಟಿ ಮುಖಂಡರುಗಳು ಮುಂದೆ ನಿಂತು ಜವಾಬ್ದಾರಿಯನ್ನು ತೆಗೆದುಕೊಂಡು ಹಬ್ಬವನ್ನು ಕಾನೂನು ಚೌಕಟ್ಟಿನ ಒಳಗೆ ಹಬ್ಬ ಆಚರಣೆ ಮಾಡುವ ನಿಟ್ಟಿನಲ್ಲಿ ಕೈಗೊಳ್ಳಲಾಗುವ ನಿರ್ಧಾರಗಳಿಗೆ ಪೊಲೀಸ್ ಇಲಾಖೆಯಿಂದ ಯಾವುದೇ ಹಸ್ತಕ್ಷೇಪ ಅಥವಾ ನಿರ್ಬಂಧ ಇರುವುದಿಲ್ಲ.
- ಸಾರ್ವಜನಿಕರ ಹಿತಾಸಕ್ತಿ ಮತ್ತು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಕಾರ್ಯ ನಿರ್ವಹಿಸುತ್ತದೆ. ನಮ್ಮೊಂದಿಗೆ ನಮ್ಮ ಕುಟುಂಬ ಹಾಗೂ ಸಾರ್ವಜನಿಕರು ಯಾವುದೇ ಭಯವಿಲ್ಲದೇ ಧೈರ್ಯದಿಂದ ಹಬ್ಬದ ಆಚರಣೆಯಲ್ಲಿ ತೊಡಗುವಂತಹ ವಾತಾವರಣವನ್ನು ಸೃಷ್ಟಿ ಮಾಡುವ ಜವಾಬ್ದಾರಿ ಎಲ್ಲರದ್ದಾಗಿದೆ.
- ಕೆಲವು ಕಿಡಿಗೇಡಿಗಳು ಮಾಡುವ ಕೃತ್ಯಗಳಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಯಾರೇ ಆಗಲಿ ಆಕ್ರೋಶ ಮತ್ತು ಆವೇಶದಿಂದ ವರ್ತನೆ ಮಾಡದೆ, ಶಾಂತ ರೀತಿಯಲ್ಲಿ ಹಬ್ಬದ ಆಚರಣೆಯಲ್ಲಿ ತೊಡಗುವುದು ಅವಶ್ಯಕವಾಗಿರುತ್ತದೆ. ನಮ್ಮ ವರ್ತನೆಯಿಂದ ಬೇರೆಯವರ ಮೇಲೆ ಆಗುವ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು ನಮ್ಮ ಕ್ರಿಯೆ ಮತ್ತು ಪ್ರತಿಕ್ರಿಯೆ ಇರಬೇಕಾಗುತ್ತದೆ. ಒಂದುವೇಳೆ ಹಬ್ಬದ ಸಂದರ್ಭದಲ್ಲಿ ಕಿಡಿಗೇಡಿಗಳು ವಿನಾಕಾರಣ ತೊಂದರೆ ನೀಡಿದ್ದಲ್ಲಿ ಅವರುಗಳ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಲಾಗುವುದು.
- ಸಾರ್ವಜನಿಕರು ಅನುಮತಿಗಾಗಿ ವಿವಿಧ ಇಲಾಖೆಗಳಿಗೆ ಓಡಾಡುವುದನ್ನು ತಪ್ಪಿಸುವ ಮತ್ತು ಅವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅರ್ಜಿ ಸಲ್ಲಿಸಿ, ಎಲ್ಲ ಇಲಾಖೆಗಳಿಂದ ಅನುಮತಿ ಪಡೆದುಕೊಳ್ಳಲು ನಗರ ಸಭೆಯಲ್ಲಿ ಸಿಂಗಲ್ ವಿಂಡೋ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತದೆ. ಅದರ ಪ್ರಯೋಜನ ಪಡೆಯಿರಿ.
- ಹಬ್ಬದ ಆಚರಣೆಯ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳು ಉದ್ಭವವಾಗದಂತೆ ಮತ್ತು ಶಾಂತ ರೀತಿಯಲ್ಲಿ ಹಬ್ಬ ಆಚರಿಸುವಂತೆ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂಧಿಗಳು ನಿಮಗಿಂತ ಮುಂಚೆಯೇ ಕಾರ್ಯಪ್ರವೃತ್ತರಾಗಿ ಮುಂಚೂಣಿಯಲ್ಲಿರುತ್ತಾರೆ. ಅದನ್ನು ಮನಗಾಣಬೇಕು.
- ಪೊಲೀಸ್ ಇಲಾಖೆಯು ಒಂದು ಒಕ್ಕೂಟ ವ್ಯವಸ್ಥೆಯಾಗಿರುತ್ತದೆ. ಯಾವುದೇ ಸಮಸ್ಯೆ ಬಂದರೂ ಎದುರಿಸುವ ಕ್ಷಮತೆ ಪೊಲೀಸ್ ಅಧಿಕಾರಿಗಳಲ್ಲಿದೆ ಮತ್ತು ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಸಕ್ಷಮವಾಗಿರುತ್ತದೆ. ಸಾರ್ವಜನಿಕರ ಸುರಕ್ಷತೆಗಾಗಿ ಪೊಲೀಸ್ ಇಲಾಖೆಯ ಅಧಿಕಾರಿ ಸಿಬ್ಬಂದಿ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸಲಿದ್ದು, ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರ ದೃಷ್ಟಿಕೋನವು ಬದಲಾಗಬೇಕಿರುತ್ತದೆ. ಆಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ.
- ಹಬ್ಬದ ಸಂದರ್ಭದಲ್ಲಿ ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಿ ಕೆಲಸ ಮಾಡಲು ಮುಂದೆ ಬರುವ ಸ್ವಯಂ ಸೇವಕರಿಗೆ ಪೊಲೀಸ್ ಇಲಾಖೆಯು ಸ್ವಾಗತಿಸುತ್ತದೆ. ಈ ಬಗ್ಗೆ ಆಸಕ್ತಿ ಇರುವ ಸಾರ್ವಜನಿಕರು/ ಸಂಘ ಸಂಸ್ಥೆಯವರು ತಮ್ಮ ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡಿ ತಮ್ಮ ಹೆಸರು ಮತ್ತು ವಿಳಾಸದ ವಿವರವನ್ನು ನೋಂದಾಯಿಸಿಕೊಳ್ಳಿ.
- ಈಗಾಗಲೇ ಪೊಲೀಸ್ ಇಲಾಖೆಯು ಏರಿಯಾ ಡಾಮಿನೇಷನ್ ವಿಶೇಷ ಕಾರ್ಯಾಚರಣೆ ನಡೆಸಿ ಸಾರ್ವಜನಿಕರಿಗೆ/ ಮಹಿಳೆಯರಿಗೆ ಉಪಟಳ ನೀಡುವ ವ್ಯಕ್ತಿಗಳನ್ನು ಠಾಣೆಗೆ ಕರೆತಂದು ಅವರನ್ನು ಗಾಂಜಾ ಸೇವನೆ ಪರೀಕ್ಷೆಗೆ ಒಳಪಡಿಸಿ, ಪರೀಕ್ಷೆಯಲ್ಲಿ ಗಾಂಜಾ ಸೇವನೆ ದೃಢಪಟ್ಟಲ್ಲಿ ಅಂತಹವರ ವಿರುದ್ಧ NDPS ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಮಾದಕ ವಸ್ತು ಗಾಂಜಾ ಮಾರಾಟ/ ಸಾಗಾಟ, ಓಸಿ, ಮಟ್ಕಾ ಜೂಜಾಟದಂತಹ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗುವವರ ವಿರುದ್ಧ ಪೊಲೀಸ್ ಇಲಾಖೆಯು ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸುತ್ತಿದೆ. ಈ ಬಗ್ಗೆ ಮಾಹಿತಿ ಇದ್ದಲ್ಲಿ ಕೂಡಲೇ ಪೊಲೀಸ್ ಇಲಾಖೆಯ ಗಮನಕ್ಕೆ ತರುವುದು.
- ರಸ್ತೆ ಅಪಘಾತಗಳಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಕ್ಕೀಡಾಗುತ್ತಿದ್ದು, ಅವರು ವಯಸ್ಸಿನ ಹುಮ್ಮಸ್ಸಿನಲ್ಲಿ ಹೆಲ್ಮೆಟ್ ಧರಿಸದೇ, ಸೀಟ್ ಬೆಲ್ಟ್ ಧರಿಸದೇ, ವೇಗದ ಮಿತಿ ಮೀರಿ ವಾಹನಗಳನ್ನು ಚಾಲನೆ ಮಾಡಿ, ಅಪಘಾತಕ್ಕೆ ಕಾರಣರಾಗುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆಯು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲನೆ ಮಾಡಿ. ಅಪಘಾತಗಳಿಂದ ಸುರಕ್ಷಿತರಾಗಿರಿ.
ಭದ್ರಾವತಿ ಡಿವೈಎಸ್.ಪಿ ನಾಗರಾಜ್, ಭದ್ರಾವತಿ ನಗರ ವೃತ್ತದ ಸಿಪಿಐ ಶೈಲಕುಮಾರ್, ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಗುರುರಾಜ್ ಮೈಲಾರ್, ಹೊಳೆಹೊನ್ನೂರು ಪೊಲೀಸ್ ನಿರೀಕ್ಷಕ ಲಕ್ಷ್ಮೀಪತಿ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.