Crop loss | ಶಿವಮೊಗ್ಗದಲ್ಲಿ ₹422 ಕೋಟಿ ಮೌಲ್ಯದ ‌ಬೆಳೆ ಹಾನಿ, ಎಷ್ಟು ಹೆಕ್ಟೆರ್ ಹಾನಿಯಾಗಿದೆ?

ಬಿ.ವೈ.ರಾಘವೇಂದ್ರ

 

 

ಸುದ್ದಿ‌ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಳೆ ಕೊರತೆಯಿಂದ ಶಿವಮೊಗ್ಗ ಜಿಲ್ಲೆಯಲ್ಲಿ ₹422 ಕೋಟಿ ಮೌಲ್ಯದ ಬೆಳೆ‌ ಹಾನಿ (crop loss) ಸಂಭವಿಸಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 7 ತಾಲೂಕಿನಲ್ಲಿ ಒಟ್ಟು 41530 ಹೆಕ್ಟೇರ್ ಭತ್ತ ಒಣಗಿ ಹೋಗಿ ₹192 ಕೋಟಿ ಹಾಗೂ 38,240 ಹೆಕ್ಟೇರ್ ಮೆಕ್ಕೆಜೋಳ ಒಣಗಿ ₹230 ಕೋಟಿ ಬೆಳೆ ಹಾನಿಯಾಗಿದೆ. ರಾಜ್ಯವು ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಟೀಕಿಸಿದರು.

one click many news logo

ಸಚಿವ ಸಂಪುಟ ಸಭೆ ನಡೆಯಲಿದ್ದು, ಸಭೆಯಲ್ಲಿ ರಾಜ್ಯ ಸರ್ಕಾರ ರೈತರ ನೆರವಿಗೆ ಬರುವ ತೀರ್ಮಾನ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಪ್ರತಿ ಜಿಲ್ಲೆಯಲ್ಲೂ ಬಿಜೆಪಿ ಬೀದಿಗಿಳಿದ ಹೋರಾಟ ನಡೆಸುತ್ತದೆ. ತೋಟಗಾರಿಕೆ ಬೆಳೆಗಳಿಗೆ ಕೂಡ ಹಾನಿಯಾಗಿದೆ. ಅಡಿಕೆ ಬೆಳೆಗಾರರು ತೊಂದರೆಯಲ್ಲಿದ್ದಾರೆ. ಈ ಬಗ್ಗೆಯೂ ಸಮೀಕ್ಷೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
– ಬಿ.ವೈ.ರಾಘವೇಂದ್ರ, ಸಂಸದ

ಕಾಂಗ್ರೆಸ್ ಅಸಮರ್ಥ ಸರ್ಕಾರ
ಕಾಂಗ್ರೆಸ್ ಕರ್ನಾಟಕದಲ್ಲಿ ಅಸಮರ್ಥ ಸರಕಾರವಾಗಿದೆ. ಬರಗಾಲ ಎದುರಿಸುವ ದಿಕ್ಕಿನಲ್ಲಿ ಸ್ಪಷ್ಟ ನೀತಿ, ಗಂಭೀರತೆ ಕಾಣುತ್ತಿಲ್ಲ. ಯಾವುದೇ ಮಂತ್ರಿಗಳು ಜಿಲ್ಲೆಗೆ ಭೇಟಿ ನೀಡಿಲ್ಲ. ಗ್ಯಾರಂಟಿ ಯೋಜನೆಯ ಹಿಂದೆಯೇ ಬಿದ್ದಿದ್ದಾರೆ ಎಂದು ಟೀಕಿಸಿದರು.
ರಾಜ್ಯ ಸರ್ಕಾರ ತನ್ನ ಪಾಲಿನ ಪರಿಹಾರ ನೀಡದೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಈಗ ಸರ್ಕಾರ ರೈತರಿಗೆ 7 ಗಂಟೆ ತ್ರೀಫೇಸ್ ವಿದ್ಯುತ್ ನೀಡುವುದಾಗಿ ಪ್ರಕಟಿಸಿದೆ. ಇದೇ 7 ಗಂಟೆ ಜೂನ್, ಜುಲೈ, ಆಗಸ್ಟ್‌ನಲ್ಲಿ ನೀಡಿದ್ದರೆ ಬೆಳೆಗಳು ಒಣಗುತ್ತಿರಲಿಲ್ಲ. ಈಗ ಒಣಗಿ ರೈತರಿಗೆ ಭಾರೀ ನಷ್ಟವಾಗಿದೆ ಎಂದರು.

READ | ಬೆಳೆ‌ ಹಾನಿ ವರದಿ ಸಲ್ಲಿಸಲು ನ.15ರ ಡೆಡ್ ಲೈನ್, ಮಧು ನೀಡಿದ ಸೂಚನೆಗಳೇನು?

ಕಾನೂನಿನ ಪ್ರಕಾರ ಹಣ ಬಿಡುಗಡೆ
ರಾಜ್ಯದಲ್ಲಿ ಕೇಂದ್ರದಿಂದ ತಂಡ ಬಂದು ಬರ ಅಧ್ಯಯನ ಮಾಡಿದ್ದು, ಈ ಅಧ್ಯಯನದ ವರದಿಯಂತೆ ಕೇಂದ್ರ ಸರ್ಕಾರ ತನ್ನ ಪಾಲಿನ ಹಣವನ್ನು ಕಾನೂನು ಪ್ರಕಾರ ಬಿಡುಗಡೆ ಮಾಡಲಿದೆ. ಪರಿಹಾರವನ್ನು ನೀಡದ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಾ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದೆ ಎಂದು ದೂರಿದರು.
ಈ ಹಿಂದೆ ಬಿಜೆಪಿ ನೀಡಿದ್ದೆಷ್ಟು?
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 2006ರಿಂದ 2014ರ ವರೆಗೆ ರಾಜ್ಯಕ್ಕೆ ಕೇವಲ ₹2250 ಕೋಟಿ ನೀಡಿತ್ತು. ಆದರೆ ಬಿಜೆಪಿ ಸರ್ಕಾರ 2014ರಿಂದ 22ರ ವರೆಗೆ ಒಟ್ಟು ₹13,500 ಕೋಟಿ ರಾಜ್ಯಕ್ಕೆ ನೀಡಿದೆ. ಕಳೆದ ಎರಡು ಮೂರು ದಿನಗಳಿಂದ ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು, ಬೆಳೆ ನಷ್ಟ ಅನುಭವಿಸಿದ ರೈತರಿಗೆ ಮುಂದಿನ ಬೆಳೆ ಬೆಳೆಯುವ ಬಗ್ಗೆ ತಜ್ಞರಿಂದ ಮಾಹಿತಿ ನೀಡಬೇಕು ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಎಸ್.ರುದ್ರೇಗೌಡ, ಡಿ.ಎಸ್. ಅರುಣ್, ಮಾಜಿ ಶಾಸಕರಾದ ಭಾನುಪ್ರಕಾಶ್, ಅಶೋಕ್ ನಾಯ್ಕ, ಪ್ರಮುಖರಾದ ಗಿರೀಶ್ ಪಟೇಲ್, ಬಿ.ಕೆ. ಶ್ರೀನಾಥ್, ವಿರೂಪಾಕ್ಷಪ್ಪ ಉಪಸ್ಥಿತರಿದ್ದರು.

error: Content is protected !!