ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಆಟೋದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಶುಭ ಸುದ್ದಿ. ನಗರದ ಎರಡು ಕಡೆ ಪ್ರೀಪೇಯ್ಡ್ ಆಟೋ ನಿಲ್ದಾಣಗಳು ಆರಂಭವಾಗಲಿವೆ. ಜೊತೆಗೆ ರೇಟ್ ಕಾರ್ಡ್ ಸಹ ಅಳವಡಿಕೆಯಾಗಲಿದೆ.
READ | ಯುವನಿಧಿ ನೋಂದಾಯಿತರಿಗೆ ಬರಲಿದೆ SMS
ಗುರುವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಆಟೋರಿಕ್ಷಾ ಪರವಾನಗಿ ನೀಡುವ ಕುರಿತು ಏರ್ಪಡಿಸಲಾಗಿದ್ದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಆಟೋ ಚಾಲಕರು, ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.
ಮೊದಲನೇ ಹಂತದಲ್ಲಿ ರೈಲ್ವೇ ನಿಲ್ದಾಣ ಮತ್ತು ಬಸ್ ನಿಲ್ದಾಣದಲ್ಲಿ ಇನ್ನು 20 ದಿನಗಳ ಒಳಗೆ ಆಟೋರಿಕ್ಷಾ ಪ್ರಿ-ಪೇಯ್ಡ್ ಕೌಂಟರ್ ಗಳನ್ನು ತೆರೆಯಬೇಕೆಂದು ಆರ್ಟಿ.ಓ ಅಧಿಕಾರಿಗೆ ಸೂಚಿಸಿದರು.
ಎಲ್ಲೆಲ್ಲಿ ಪ್ರೀಪೇಯ್ಡ್ ಆಟೋ ನಿಲ್ದಾಣ?
ನಗರದ ರೈಲು ನಿಲ್ದಾಣ ಹಾಗೂ ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣದಲ್ಲಿ ಪ್ರೀಪೇಯ್ಡ್ ಆಟೋ ನಿಲ್ದಾಣಗಳನ್ನು ಶೀಘ್ರ ಆರಂಭಿಸಬೇಕು ಎಂದು ಡಿಸಿ ಸೂಚನೆ ನೀಡಿದರು.
ಆಟೋದಲ್ಲಿ ಪ್ರಯಾಣಿಸುವವರಿಂದ ಹೆಚ್ಚು ಹಣ ವಸೂಲಿ ಮಾಡುವುದನ್ನು ತಪ್ಪಿಸಲು ಉಭಯ ನಿಲ್ದಾಣಗಳಲ್ಲಿ ರೇಟ್ ಬೋರ್ಡ್ ಅಳವಡಿಸುವಂತೆ ತಿಳಿಸಿದರು.
ರೈಲು ನಿಲ್ದಾಣದಿಂದ ಬಸ್ ಆರಂಭ
ನಗರದ ರೈಲು ನಿಲ್ದಾಣದಿಂದ ಬಸ್ ಸ್ಟ್ಯಾಂಡ್ ಕಡೆ ತೆರಳಲು ಕೆಎಸ್ಆರ್.ಟಿಸಿ ಬಸ್ ಕಾರ್ಯಾಚರಣೆಯನ್ನು 10 ದಿನಗಳ ಒಳಗೆ ಆರಂಭಿಸಬೇಕೆಂದು ಕೆಎಸ್ಆರ್.ಟಿಸಿ ಡಿಸಿ ಅವರಿಗೆ ಸೆಲ್ವಮಣಿ ಸೂಚಿಸಿದರು.
ರೈಲು ನಿಲ್ದಾಣದಲ್ಲಿ ಬಸ್ ನಿಲ್ದಾಣ ಸ್ಥಳ ನಿಗದಿ ಮಾಡಬೇಕು. ಅದಕ್ಕೆ ಆರ್.ಟಿಓ, ಆಟೋ, ಬಸ್ ಚಾಲಕರ ಸಂಘ, ಟ್ರಾಫಿಕ್ ಪೊಲೀಸ್, ಕೆಎಸ್ಆರ್.ಟಿಸಿ ಅವರು ಸರ್ವೇ ಮಾಡಿ ನಿಗದಿಪಡಿಸುವಂತೆ ಸೂಚನೆ ನೀಡಿದರು.
ಸಹ್ಯಾದ್ರಿ ಕಾಲೇಜು ಬಳಿಯ ಕೆಇಬಿ ವೃತ್ತದಲ್ಲಿ ಬಸ್ ಕಾಯುವವರ ಸಂಖ್ಯೆ ಹೆಚ್ಚಿದ್ದು, ಒಂದು ಬಸ್ ಶೆಲ್ಟರ್ ಸ್ಥಾಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕರು ಮನವಿ ಮಾಡಿದರು.
ಸಭೆಯಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರಡ್ಡಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಬಿ.ಶಂಕ್ರಪ್ಪ, ಕೆಎಸ್ಆರ್.ಟಿಸಿ ಡಿಸಿ ವಿಜಯಕುಮಾರ್, ಸರ್ಕಲ್ ಇನ್ಸ್ ಪೆಕ್ಟರ್ ಸಂತೋಷ್ ಸೇರಿದಂತೆ ಅಧಿಕಾರಿಗಳು, ನಾಗರಿಕ ಹಿತರಕ್ಷಣಾ ವೇದಿಕೆಯ ವಸಂತಕುಮಾರ್, ಇತರೆ ಪದಾಧಿಕಾರಿಗಳು, ಆಟೋ ಚಾಲಕರ ಸಂಘದ ಪದಾಧಿಕಾರಿಗಳು, ಖಾಸಗಿ ಬಸ್ ಮಾಲೀಕರ ಸಂಘದವರು, ಇತರರು ಹಾಜರಿದ್ದರು.