ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕ್ಯಾಸನೂರು ಫಾರೆಸ್ಟ್ ಡಿಸೀಸ್ (kyasanur forest disease- ಕೆಎಫ್.ಡಿ)ಗೆ 18 ವರ್ಷದ ಯುವತಿಯೊಬ್ಬಳು ಸೋಮವಾರ ಮೃತಪಟ್ಟಿದ್ದಾಳೆ.
ಹೊಸನಗರ (Hosanagara) ತಾಲೂಕಿನ ಅರಮನೆ ಕೊಪ್ಪ ವ್ಯಾಪ್ತಿಯ ಗ್ರಾಮವೊಂದರಲ್ಲಿ ಯುವತಿಗೆ ಜ್ವರ (Fever) ಕಾಣಿಸಿಕೊಂಡಿತ್ತು. ಮೆಗ್ಗಾನ್ ಆಸ್ಪತ್ರೆ (Meggan Hospital)ಗೆ ಕರೆದುಕೊಂಡು ಬರಲಾಗಿದೆ. ಮಂಗನ ಕಾಯಿಲೆ (ಕೆಎಫ್.ಡಿ) ಲಕ್ಷಣಗಳು ಇದ್ದುದ್ದರಿಂದ ಕೆಎಫ್.ಡಿ. ಪರೀಕ್ಷೆ(kfd disease)ಗೆ ಒಳಪಡಿಸಲಾಗಿದೆ. ಆದರೆ, ನೆಗೆಟಿವ್ ಬಂದಿತ್ತು. ಚಿಕಿತ್ಸೆ ಬಳಿಕವೂ ಆರೋಗ್ಯ ಸ್ಥಿತಿ ಸುಧಾರಣೆ ಕಂಡಿರಲಿಲ್ಲ. ಹೀಗಾಗಿ, ಮೆಗ್ಗಾನ್ ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆರೋಗ್ಯ ಸ್ಥಿತಿ ಇನ್ನಷ್ಟು ವಿಷಮಗೊಂಡಿದ್ದರಿಂದ ಹೆಚ್ಚುವರಿ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಬಹುಅಂಗಾಂಗ ವೈಫಲ್ಯದಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
READ | ಯುವತಿಗೆ ಕೆಎಫ್ಡಿ ಪಾಸಿಟಿವ್, ಹೇಗಿದೆ ಆರೋಗ್ಯ ಸ್ಥಿತಿ?
ನಾಲ್ಕು ವರ್ಷಗಳ ಬಳಿಕ ಮೊದಲ ಸಾವು
ಕೆ.ಎಫ್.ಡಿ 2019ರಲ್ಲಿ ಮರಣ ಮೃದಂಗವನ್ನೇ ಬಾರಿಸಿತ್ತು. ಆ ಆ ವರ್ಷದಲ್ಲಿ ಅರಳಗೋಡು ಪಂಚಾಯಿತಿ ವ್ಯಾಪ್ತಿಯಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಜಾರಿಯಾಗಿತ್ತು. 12 ಜನರನ್ನು ಬಲಿ ಪಡೆದಿದ್ದ ಕಾಯಿಲೆ ನಂತರದ ವರ್ಷಗಳಲ್ಲಿ ಇಳಿಮುಖವಾಗುತ್ತಾ ಸಾಗಿದೆ. 2020ರಲ್ಲಿ ನಾಲ್ಕು ಜನ ಮೃತಪಟ್ಟಿದ್ದರು. 2021, 2022 ಮತ್ತು 2023ರಲ್ಲಿ ಮಂಗನ ಕಾಯಿಲೆಯಿಂದ ಯಾವುದೇ ಸಾವುಗಳು ಸಂಭವಿಸಿರಲಿಲ್ಲ. 2024ರ ಆರಂಭದಲ್ಲೇ ಮೊದಲ ಸಾವು ಸಂಭವಿಸಿದೆ. ಇದುವರೆಗೆ ಎರಡು ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ ಒಂದು ಸಾವಾಗಿದೆ.