ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ 50ನೇ ವರ್ಷಾಚರಣೆಯ ಅಂಗವಾಗಿ ಮಾ.10ರಂದು ಬೆಳಗ್ಗೆ 6.30ಕ್ಕೆ ಮ್ಯಾರಥಾನ್ ಆಯೋಜಿಸಲಾಗಿದೆ. ಗೆದ್ದವರಿಗೆ ಆಕರ್ಷಕ ಬಹುಮಾನ ನೀಡಲಾಗುವುದು.
ಪೊಲೀಸ್ ಇಲಾಖೆಯ ನಾಗರಿಕ ಕೇಂದ್ರೀಕೃತ ಯೋಜನೆಗಳು, ಸಿಬ್ಬಂದಿ ಕಲ್ಯಾಣ ಕಾರ್ಯಕ್ರಮಗಳು, ಪೊಲೀಸ್ ಇಲಾಖೆಯ ಮೈಲಿಗಲ್ಲಿನ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ, ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಶಿವಮೊಗ್ಗ ನಗರದಲ್ಲಿ ಮ್ಯಾರಥಾನ್ ಓಟವನ್ನು ಹಮ್ಮಿಕೊಳ್ಳಲಾಗಿದೆ.
ಎಲ್ಲಿಂದ ಎಲ್ಲಿಯವರೆಗೆ ಮ್ಯಾರಥಾನ್?
ಮ್ಯಾರಥಾನ್ ಓಟವನ್ನು ಡಿಎಆರ್ ಪೊಲೀಸ್ ಕವಾಯತು ಮೈದಾನದಿಂದ ಪ್ರಾರಂಭಿಸಿ, ಅಶೋಕ ವೃತ್ತ, ಅಮೀರ್ ಅಹಮ್ಮದ್ ವೃತ್ತ, ಶಿವಪ್ಪ ನಾಯಕ ವೃತ್ತ, ಕರ್ನಾಟಕ ಸಂಘ ವೃತ್ತ, ಡಿವಿಎಸ್ ವೃತ್ತ, ಮಹಾವೀರ ವೃತ್ತ, ಶಿವಮೂರ್ತಿ ವೃತ್ತ, ಜೈಲ್ ವೃತ್ತ, ಐಬಿ ವೃತ್ತದ ಮುಖಾಂತರ ಡಿಎಆರ್ ಪೊಲೀಸ್ ಕವಾಯತು ಮೈದಾನಕ್ಕೆ ಬಂದು ಮುಕ್ತಾಯ ಮಾಡಲಾಗುವುದು.
ಯಾರೆಲ್ಲ ಪಾಲ್ಗೊಳ್ಳಬಹುದು?
ಮ್ಯಾರಥಾನ್ ಓಟದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಕೆ.ಎಸ್.ಆರ್.ಪಿ 8ನೇ ಪಡೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಯುವಜನ ಮತ್ತು ಕ್ರೀಡಾ ಇಲಾಖೆಯ ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಇವರೊಂದಿಗೆ ಮ್ಯಾರಥಾನ್ ಓಟದಲ್ಲಿ ಭಾಗವಹಿಸಲು ಇಚ್ಚೆಯುಳ್ಳ ಸಾರ್ವಜನಿಕರು ಮತ್ತು ಮಾಧ್ಯಮದವರು ಸಹ ಭಾಗವಹಿಸಬಹುದು.
ಮ್ಯಾರಥಾನ್ ಓಟದಲ್ಲಿ ಭಾಗವಹಿಸಿ ವಿಜೇತರಾಗುವ ಪುರುಷ ಮತ್ತು ಮಹಿಳಾ ಓಟಗಾರರಿಗೆ ಪ್ರಥಮ ಬಹುಮಾನ ₹10,000 ಮತ್ತು ದ್ವಿತೀಯ ಬಹುಮಾನ ₹5,000 ಗಳನ್ನು ಪ್ರತ್ಯೇಕವಾಗಿ ನೀಡಲಾಗುವುದು.