ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಚಿಕ್ಕಮಗಳೂರಿನ 25 ವರ್ಷದ ಯುವತಿಯೊಬ್ಬಳು ಶಿವಮೊಗ್ಗದ ನಿವಾಸಿಯೊಬ್ಬನಿಗೆ ವಿವಾಹವಾಗಿದ್ದು, ಪತಿಯ ಕುಟುಂಬದವರು ದೌರ್ಜನ್ಯ ಎಸಗಿದ್ದಾರೆಂಬ ಕಾರಣಕ್ಕೆ ಮೂವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.
READ | ಶಿವಮೊಗ್ಗದಲ್ಲಿ ಐದು ದಿನ ಅದ್ಧೂರಿ ಕೋಟೆ ಶ್ರೀ ಮಾರಿಕಾಂಬ ಜಾತ್ರೆ, ಯಾವ ದಿನ ಏನೆಲ್ಲ ಕಾರ್ಯಕ್ರಮ?
ಶಿವಮೊಗ್ಗ ನಗರದ ಪತಿ ವಿನೋದ್ (29)ಗೆ 6 ವರ್ಷ ಶಿಕ್ಷೆ, ₹20,000 ದಂಡ, ಜಯಮ್ಮ(56) 3 ವರ್ಷ ಶಿಕ್ಷೆ ಮತ್ತು ₹10,000 ದಂಡ ಮತ್ತು ಶ್ರೀನಿವಾಸ್ (62) 3 ವರ್ಷ ಶಿಕ್ಷೆ ಮತ್ತು ₹10000 ದಂಡ ವಿಧಿಸಿ ಆದೇಶಿಸಲಾಗಿದೆ.
ಪ್ರಕರಣದ ಹಿನ್ನೆಲೆ
2017ನೇ ಸಾಲಿನಲ್ಲಿ ಚಿಕ್ಕಮಗಳೂರು ಜಿಲ್ಲೆಯ 25 ವರ್ಷದ ಯುವತಿಗೆ ಶಿವಮೊಗ್ಗ ನಗರದ ವಿನೋದ್ ನೊಂದಿಗೆ ವಿವಾಹವಾಗಿದ್ದಳು. ಆದರೆ ಅವನು ಈ ಮೊದಲೇ ಬೇರೆ ಮದುವೆಯಾಗಿದ್ದು, ಈ ಬಗ್ಗೆ ಯುವತಿಯು ಕೇಳಿದಾಗ ಆಕೆಯ ಮೇಲೆ ಕೌಟುಂಬಿಕ ದೌರ್ಜನ್ಯವೆಸಗಿರುತ್ತಾರೆಂದು ನೊಂದ ಯುವತಿ ನೀಡಿದ ದೂರಿನ ಮೇರೆಗೆ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಆಗಿನ ತನಿಖಾಧಿಖಾರಿ ಪ್ರಭಾವತಿ ಸಿ. ಶೇತಸನದಿ ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
2ನೇ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪಿತರ ವಿರುದ್ದ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಎಸ್.ಆರ್. ಸನ್ಮತಿ ಅವರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕಿರಣ್ ಕುಮಾರ್ ವಾದ ಮಂಡಿಸಿದ್ದರು.