ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕೋಟೆ ಶ್ರೀ ಮಾರಿಕಾಂಬ ಜಾತ್ರಾ ಮಹೋತ್ಸವ ಮಾ.12ರಿಂದ 16ರವರೆಗೆ ನಡೆಯಲಿದೆ ಎಂದು ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿಯ ಅಧ್ಯಕ್ಷ ಎಸ್.ಕೆ.ಮರಿಯಪ್ಪ ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ ಐದು ದಿನಗಳ ನಡೆಯುವ ವಿವಿಧ ಕಾರ್ಯಕ್ರಮ ವಿಧಿವಿಧಾನಗಳನ್ನು ವಿವರಿಸಿದರು.
READ | ಇಸ್ರೋದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?
- ಮಾ.12ರಂದು ಮುಂಜಾನೆ 5 ಗಂಟೆಗೆ ನಗರದ ಗಾಂಧಿಬಜಾರ್‍ನ ದೇವಿಯ ತವರು ಮನೆಯಲ್ಲಿ ಮಂಗಳವಾದ್ಯದೊಂದಿಗೆ ಬಿ.ಬಿ. ರಸ್ತೆಯ ಬ್ರಾಹ್ಮಣ ಸಮಾಜದ ನಾಡಿಗ ಕುಟುಂಬದವರು ಪೂಜೆಗೆ ಬರುತ್ತಾರೆ. ಆ ಕುಟುಂಬದ ಮುತ್ತೈದೆಯರು ಮಂಗಳ ದ್ರವ್ಯಾದಿ ಗಳೊಂದಿಗೆ ದೇವಿಗೆ ಉಡಿತುಂಬುವ ಮೂಲಕ ಪೂಜೆ ಸಲ್ಲಿಸುವರು. ನಂತರ ವಿಶ್ವ ಕರ್ಮ ಸಮಾಜದವರು ಸಾರ್ವಜನಿಕವಾಗಿ ಪೂಜೆಯನ್ನು ಆರಂಭಿಸುತ್ತಾರೆ.
- ರಾತ್ರಿ 10 ಗಂಟೆಯವರೆಗೆ ಗಾಂಧಿ ಬಜಾರ್‍ನಲ್ಲಿ ಪೂಜೆಗೆ ಅವಕಾಶ ಇರುತ್ತದೆ. ರಾತ್ರಿ ಉಪ್ಪಾರ ಸಮಾಜದವರು ದೇವಿಯನ್ನು ರಥದಲ್ಲಿ ಕೂರಿಸಿಕೊಂಡು ಮೆರವಣಿಗೆ ಮುಖಾಂತರ ಮಾರಿಗ ಗದ್ದುಗೆಗೆ ತಂದು ಪ್ರತಿಷ್ಠಾಪಿಸುವರು.
- ಗಂಗಾ ಪರಮೇಶ್ವರಿ ದೇವಸ್ಥಾನದಿಂದ ಗಂಗಾ ಪೂಜೆಯೊಂದಿಗೆ ಅಮ್ಮನವರನ್ನು ಮಂಗಳವಾದ್ಯದೊಂದಿಗೆ ಎದುರುಗೊಂಡು ಗಂಗಾಮತಸ್ಥ ಸಮಾಜದವರು ಪೂಜೆ ಸಲ್ಲಿಸುವರು.
- ಮಾ.13ರ ಮುಂಜಾನೆ 4 ಗಂಟೆಗೆ ವಿದ್ಯಾನಗರ ಕರಲಹಟ್ಟಿಯ ಹರಿಜನ ಸಮಾಜದವರು ಬೇವಿನ ಉಡುಗೆಯೊಂದಿಗೆ ಆಗಮಿಸಿ ಶ್ರೀ ಮಾರಿಕಾಂಬೆಗೆ ಪೂಜೆ ಸಲ್ಲಿಸುವರು. ನಂತರ ಅಮ್ಮನವರನ್ನು ಗದ್ದುಗೆಗೆ ಪ್ರತಿಷ್ಠಾಪಿಸಲಾಗುವುದು.
- ಕುರುಬ ಜನಾಂಗದ ಗುತ್ಯಮ್ಮ ದೇವಾಲಯದ ಅರ್ಚಕ ಚೌಡಿಕೆರಾದ ಕುಟುಂಬದವರು ನೈವೇದ್ಯ ಮಾಡಿ ಪೂಜೆ ಸಲ್ಲಿಸುವರು.
- ಬುಧವಾರ ಬೆಳಗ್ಗೆ 6ರಿಂದ 10 ಗಂಟೆಯವರೆಗೆ ವಾಲ್ಮೀಕಿ ಸಮಾಜದವರು ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಉಪ್ಪಾರ ಸಮಾಜದವರು, ತದನಂತರ ರಾತ್ರಿ 11 ಗಂಟೆಯವರೆಗೆ ಮಡಿವಾಳ ಸಮಾಜದವರು ಸರದಿಯಂತೆ ನಾಲ್ಕು ದಿನಗಳ ಕಾಲ ಅಮ್ಮನವರಿಗೆ ಪೂಜೆ ಸಲ್ಲಿಸುವರು.
- ಮಾ.16ರಂದು ರಾತ್ರಿ 7 ಗಂಟೆಗೆ ದೇವಿಗೆ ಮಹಾ ಮಂಗಳಾರತಿ ಸಲ್ಲಿಸಿದ ನಂತರ ಶ್ರೀ ಮಾರಿಕಾಂಬೆಯ ಉತ್ಸವ ವಿವಿಧ ಜಾನಪದ ತಂಡಗಳ ಮೆರವಣಿಗೆಯೊಂದಿಗೆ ಅಮ್ಮನವರನ್ನು ವನ ಪ್ರವೇಶಕ್ಕೆ ಕಳುಹಿಸಿಕೊಡುವ ಮೂಲಕ ಜಾತ್ರೆಗೆ ತೆರೆ ಬೀಳಲಿದೆ.
ಉಪಾಧ್ಯಕ್ಷ ಎನ್.ಉಮಾಪತಿ, ಕೋಶಾಧ್ಯಕ್ಷ ಎಚ್.ವಿ.ತಿಮ್ಮಪ್ಪ, ಕಾರ್ಯದರ್ಶಿ ಎಸ್.ಹನುಮಂತಪ್ಪ, ಬಿ.ಎಂ. ರಾಮಯ್ಯ, ಎಸ್.ಸಿ.ಲೋಕೇಶ್, ಸಹ ಕಾರ್ಯದರ್ಶಿ ಎ.ಎಚ್. ಸುನೀಲ್, ಟಿ.ಎಸ್.ಚಂದ್ರಶೇಖರ್, ಸತ್ಯನಾರಾಯಣ ಉಪಸ್ಥಿತರಿದ್ದರು.