ಸುದ್ದಿ ಕಣಜ.ಕಾಂ
ಶಿವಮೊಗ್ಗ: ಇತ್ತೀಚೆಗೆ ಮಕ್ಕಳ ದಿನಾಚರಣೆ ಪ್ರಯುಕ್ತ ಆನ್’ಲೈನ್ ನಲ್ಲಿಯೇ ಆಯೋಜಿಸಿದ್ದ ಚಿತ್ರ ಕಲಾ ಸ್ಪರ್ಧೆಯಲ್ಲಿ ಶಿಕ್ಷಣದೆಡೆಗಿನ ಮಕ್ಕಳ ಪರಿಕಲ್ಪನೆ ಅನಾವರಣಗೊಂಡಿತು. ಬಾಲಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳು ಕುಂಚದಲ್ಲಿ ಮಾರ್ಮಿಕವಾಗಿ ಬಿತ್ತರಗೊಂಡಿದ್ದವು. ಕೆಲವು ಮಕ್ಕಳು ನೈತಿಕ ಮೌಲ್ಯ ಸೂಚಕ ಚಿತ್ರಗಳನ್ನು ಬಿಡಿಸಿದ್ದರು.
ಭದ್ರಾವತಿ ನ್ಯೂಟೌನ್’ನ ಸರ್ಕಾರಿ ಬಾಲಿಕಾ ಪಿಯು ಕಾಲೇಜು ಪ್ರೌಢ ಶಾಲೆ ವಿಭಾಗದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಹಲವು ಮಕ್ಕಳು ಪಾಲ್ಗೊಂಡು ತಮ್ಮ ಕ್ರಿಯಾಶೀಲತೆಯನ್ನು ಚಿತ್ರದಲ್ಲಿ ವ್ಯಕ್ತಿಪಡಿಸಿದರು. ಶಾಲೆ ಉಪ ಪ್ರಾಂಶುಪಾಲರಾದ ಟಿ.ಎಸ್. ಸುಮನಾ ಅವರು ಸ್ಪರ್ಧೆ ಆಯೋಜಿಸಿದ್ದರು.
ಹತ್ತನೇ ತರಗತಿ ವಿದ್ಯಾರ್ಥಿನಿ ಎಚ್.ವೈ.ಅಂಕಿತಾ ಅವರು ಬಾಲ ಕಾರ್ಮಿಕ ಪದ್ಧತಿಯನ್ನು ಖಂಡಿಸುವ ಚಿತ್ರಕ್ಕೆ ಜೀವ ತುಂಬಿದ್ದಾರೆ. ವ್ಯವಸ್ಥೆಯ ಶೋಷಣೆಗೆ ಸಿಲುಕಿ ಕಮರುತ್ತಿರುವ ಬಾಲ್ಯದ ದಿನಗಳನ್ನು ಬಣ್ಣದಲ್ಲಿ ಬಿಂಬಿಸಿದ್ದಾರೆ.
10ನೇ ತರಗತಿಯ ಮತ್ತೊಬ್ಬ ವಿದ್ಯಾರ್ಥಿನಿ ಫರಜಾನ್ ಬಾನು ಅವರು ಶಿಕ್ಷಣ ಮತ್ತು ಬಾಲ ಕಾರ್ಮಿಕ ಎರಡು ನಮ್ಮ ಆಯ್ಕೆ ಎಂಬುವುದನ್ನು ಚಿತ್ರದಲ್ಲಿ ಅಭಿವ್ಯಕ್ತ ಪಡಿಸಿದ್ದಾರೆ.
9ನೇ ತರಗತಿಯ ಬಿ.ಜೆ.ಯಶಸ್ವಿನಿ ಅವರು ಮಕ್ಕಳು ವಹಿಸಬೇಕಾದ ಎಚ್ಚರಿಕೆಗಳನ್ನು ವಿವರಿಸಿದ್ದಾರೆ. ಅಪರಿಚಿತರೊಂದಿಗೆ ಮಾತನಾಡಬಾರದು. ರಸ್ತೆ ದಾಟುವಾಗ ವಹಿಸಬೇಕದ ಎಚ್ಚರಿಕೆ ಇತ್ಯಾದಿ ವಿಷಯಗಳಿಗೆ ಚಿತ್ರದಲ್ಲಿ ಹೆಣೆದಿದ್ದಾರೆ.
ಸೃಜನಾತ್ಮಕತೆ ಒರೆಹಚ್ಚಿದ ಸ್ಪರ್ಧೆ: ರಾಜ್ಯಾದ್ಯಂತ ಹಮ್ಮಿಕೊಂಡಿದ್ದ ಚಿತ್ರ ಕಲಾ ಸ್ಪರ್ಧೆ ಕೋವಿಡ್’ನಿಂದಾಗಿ ಮನೆಯಲ್ಲಿಯೇ ಕುಳಿತ ಮಕ್ಕಳ ಕೌಶಲ ಮತ್ತು ಸೃಜನಾತ್ಮಕತೆ ಒರೆಹಚ್ಚುವ ಕೆಲಸ ಮಾಡಿತು.