ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರನ್ನು ಸಂಸತ್ ಸದಸ್ಯತ್ವ ಸ್ಥಾನದಿಂದ ಅನರ್ಹಗೊಳಿಸಿದ್ದನ್ನು ವಿರೋಧಿಸಿ ಎನ್ಎಸ್ಯುಐ (NSUI- National Students’ Union of India) ವತಿಯಿಂದ ರೈಲ್ವೆ ನಿಲ್ದಾಣದ (SMET) ಎದುರು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾ ನಿರತ ಕಾರ್ಯಕರ್ತರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಲಾಯಿತು.
READ | ಶಿವಮೊಗ್ಗದ ಮೂವರು ಪೊಲೀಸರಿಗೆ ಮುಖ್ಯಮಂತ್ರಿ ಪದಕ, ಯಾರೆಲ್ಲ ಭಾಜನ?
ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪು ಹೊರಬಿದ್ದೊಡನೆ, ತೀರ್ಪಿನಲ್ಲಿ ಮೇಲ್ಮನವಿಗೆ ಅವಕಾಶವಿದ್ದರೂ ಆದೇಶದ ಪ್ರತಿ ಕೈಗೆ ಸಿಗುವ ಮೊದಲೇ ಕಾಂಗ್ರೆಸ್ನ ಹಿರಿಯ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿರುವುದನ್ನು ಖಂಡಿಸಲಾಯಿತು.
ಬಿಜೆಪಿಯಿಂದ ಸಂವಿಧಾನ ವಿರೋಧಿ ನೀತಿ: ಆರೋಪ
ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಾ ದ್ವೇಷದ ರಾಜಕಾರಣ ಮಾಡುತ್ತಿದೆ. ಆ ಮೂಲಕ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಆತಂಕ ತಂದೊಡ್ಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಮುಂದಿನ ಪ್ರಧಾನಿ ಅಭ್ಯರ್ಥಿ. ಅವರನ್ನು ರಾಜಕೀಯವಾಗಿ ಮುಗಿಸುವ ಸಂಚಿನಿಂದಾಗಿ ಬಿಜೆಪಿ ಅವರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದಾಗಲೂ ತರಾತುರಿಯಲ್ಲಿ ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿದೆ ಎಂದು ಟೀಕಿಸಿದ್ದಾರೆ.
ಕೂಡಲೇ ಅನರ್ಹಗೊಳಿಸಿರುವುದನ್ನು ವಾಪಸ್ ಪಡೆಯಬೇಕು. ರಾಷ್ಟ್ರಪತಿ ಮಧ್ಯೆ ಪ್ರವೇಶಿಸಿ ರಾಹುಲ್ ಗಾಂಧಿ ಅವರ ಅನರ್ಹತೆ ತಡೆಹಿಡಿಯಬೇಕು ಎಂದು ಒತ್ತಾಯಿಸಿದರು.
ಎನ್ಎಸ್ಯುಐ ಪ್ರಮುಖರಾದ ರವಿ ಕಾಟಿಕೆರೆ, ಚರಣ, ಹರ್ಷಿತ್, ವಿಜಯಕುಮಾರ್ ಎಸ್.ಎನ್., ರವಿಕುಮಾರ್, ಚಂದ್ರೋಜಿರಾವ್, ತೌಫಿಕ್, ಬಸವರಾಜ್ ಪ್ರಮೋದ್, ಸಮರ್ಥಗೌಡ, ಅಭಿಷೇಕ್ ಹಲವರು ಪಾಲ್ಗೊಂಡಿದ್ದರು.
Deportation | ಭದ್ರಾವತಿಯ ಮೂವರು ರೌಡಿಶೀಟರ್’ಗಳ ಗಡಿಪಾರು ಆದೇಶ, ಕಾರಣವೇನು?