ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಗೆ ಅತಿ ಹೆಚ್ಚಿನ ಮೊಬೈಲ್ ಟವರ್ (Mobile Tower)ಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತ್ತಿದ್ದು, ಈ ಎಲ್ಲ ಟವರ್ ಗಳ ನಿರ್ಮಾಣ ಕಾರ್ಯ ವಿವಿಧ ಹಂತದಲ್ಲಿದೆ. ಈ ಎಲ್ಲ ಟವರ್ ಗಳ ನಿರ್ಮಾಣ ಕಾರ್ಯ ಡಿಸೆಂಬರ್ ಮಾಸಾಂತ್ಯದೊಳಗೆ ಪೂರ್ಣಗೊಂಡು ಸಾರ್ವಜನಿಕ ಸೇವೆಗೆ ಮುಕ್ತಗೊಳ್ಳಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ (B.Y.Raghavendra) ಹೇಳಿದರು.
READ | ಜುಲೈ 10ರೊಳಗೆ ಮಳೆಯಾಗದಿದ್ದರೆ ಶಿವಮೊಗ್ಗಕ್ಕೆ ಕಾದಿದೆ ಆಪತ್ತು
ಜಿಲ್ಲಾ ಪಂಚಾಯಿತಿ(Zilla Panchayat)ಯ ಅಬ್ದುಲ್ ನಜೀರ್ ಸಾಬ್ ಸಭಾಂಗಣ(Abdul Nazeer sab hall)ದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಅಭಿವೃದ್ಧಿ, ಸಮನ್ವಯತೆ ಹಾಗೂ ಮೇಲ್ವಿಚಾರಣಾ ಸಮಿತಿ(District Development Coordination and Monitoring Committees (DISHA)ಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಧಿಕಾರಿಗಳು ಕೈಗೊಳ್ಳುವ ಎಲ್ಲ ಕಾಮಗಾರಿಗಳನ್ನು ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯದಲ್ಲಿಯೇ ಶಿವಮೊಗ್ಗ ಜಿಲ್ಲೆಗೆ ಅತೀ ಹೆಚ್ಚಿನ ಮೊಬೈಲ್ ಟವರ್ಗಳನ್ನು ಮಂಜೂರು ಮಾಡಿ ಸಹಕರಿಸಿದ ಕೇಂದ್ರ ಸರ್ಕಾರಕ್ಕೆ ಅಭಿನಂದಿಸುವುದಾಗಿ ತಿಳಿಸಿದರು.
ಪಿ ಆಂಡ್ ಟಿ ಕಾಲೋನಿಯ ರೈಲ್ವೆ ಕೆಳಸೇತುವೆಯನ್ನು ತಿಂಗಳೊಳಗಾಗಿ ಪೂರ್ಣಗೊಳಿಸಿ, ವಿದ್ಯಾನಗರದ ರೈಲ್ವೆ ಮೇಲ್ಸೇತುವೆಯನ್ನು ಆಗಸ್ಟ್ 15ರಂದೇ ಉದ್ಘಾಟಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಗುತ್ತಿಗೆದಾರರಿಗೆ ಸೂಚಿಸಿದರು. ಮೇಲ್ಸೇತುವೆಗಳ ಸಮೀಪವಿರುವ ವಿದ್ಯುತ್ ಟ್ರಾನ್ಸ್ಫಾರ್ಮರ್ಗಳನ್ನು ಹಾಗೂ ನೀರಿನ ಟ್ಯಾಂಕುಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳುವಂತೆ ಸ್ಮಾರ್ಟ್ಸಿಟಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದರು.
– ಬಿ.ವೈ.ರಾಘವೇಂದ್ರ, ಸಂಸದಮುಂದಿನ 10 ದಿನಗಳೊಳಗಾಗಿ ಮೊಬೈಲ್ ಟವರ್ಗಳ ನಿರ್ಮಾಣಕ್ಕೆ ನಿವೇಶನ ಒದಗಿಸುವಂತೆ ಆಯಾ ತಾಲೂಕಿನ ತಹಶೀಲ್ದಾರರಿಗೆ ಸೂಚನೆ ನೀಡಲಾಗಿದೆ.
– ಡಾ.ಆರ್.ಸೆಲ್ವಮಣಿ, ಜಿಲ್ಲಾಧಿಕಾರಿ
ಕೃಷಿ ಚಟುವಟಿಕೆಗೆ ಮಂದ
ಮಳೆ ಕೊರತೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಮಂದವಾಗಿದೆ. ಈ ಸಂದರ್ಭದಲ್ಲಿ ಅಧಿಕಾರಿಗಳು ರೈತರಿಗೆ ನೆರವಾಗುವ, ಅವರ ನೋವಿಗೆ ದನಿಯಾಗುವಲ್ಲಿ ಸ್ಪಂದಿಸಬೇಕು. ಕುಡಿಯುವ ನೀರಿನ ಯೋಜನೆಗೆ ಮಂಜೂರಾತಿ ದೊರೆತು ಕೈಗೊಂಡ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಅದಕ್ಕಾಗಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು.
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಕುಡಿಯುವ ನೀರಿನ ಸಮಸ್ಯೆಯನ್ನು ಹೋಗಲಾಡಿಸಲು ಖಾಸಗಿ ಬೋರ್ವೆಲ್ಗಳನ್ನು ಬಳಸಿಕೊಳ್ಳಿ. ಇನ್ನು ಹೆಚ್ಚಿನ ಬೋರ್ವೆಲ್ಗಳ ಅಗತ್ಯವಿರುವಲ್ಲಿ ಕೊಳವೆಬಾವಿಗಳನ್ನು ಕೊರೆಸಿ, ವಿದ್ಯುತ್ ಸಂಪರ್ಕ ಕಲ್ಪಿಸಿ, ನೀರನ್ನು ಒದಗಿಸಲು ಸೂಚಿಸಲಾಗಿದೆ. ಈ ವಿಷಯವನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುವಂತೆ ಸೂಚಿಸಲಾಗಿದೆ ಎಂದರು.
READ | ಸಂತೋಷ ಕೂಟಕ್ಕೆ ಬಂದವರ ದಾರುಣ ಸಾವು, ರಕ್ಷಣೆಗೆ ಧಾವಿಸಿದನೂ ಇನ್ನಿಲ್ಲ
ಸಂಸದರು ನೀಡಿದ ಸೂಚನೆಗಳಿವು
- ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ ಸಾಲಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವ ಎಲ್ಲ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಅನಗತ್ಯವಾಗಿ ಅರ್ಜಿಗಳನ್ನು ವಜಾಗೊಳಿಸಬಾರದು.
- ಪ್ರಸಕ್ತ ಸಾಲಿನ ಫಸಲ್ ಬಿಮಾ ಯೋಜನೆಯಡಿ ಒಂದೆರೆಡು ದಿನಗಳಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗುವುದು. ಉದ್ಯೋಗ ಖಾತ್ರಿ ಯೋಜನೆಯಡಿ ಅರ್ಹರನ್ನು ಗುರುತಿಸಿ ಸೌಲಭ್ಯ ಒದಗಿಸಲು ಪುನರ್ ಸಮೀಕ್ಷೆ ನಡೆಸಬೇಕು.
- ದೀನದಯಾಳ್ ಅಂತ್ಯೋದಯ ಯೋಜನೆಯಡಿ ಅರ್ಹರಿಗೆ ಸೌಲಭ್ಯ ಒದಗಿಸಲು ಅಧಿಕಾರಿಗಳು ಅವ್ಯವಹಾರಗಳಿಗೆ ಅವಕಾಶವಿಲ್ಲದಂತೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ.
- ಗ್ರಾಮೀಣ ಪ್ರದೇಶಗಳಲ್ಲಿ ಜಲಜೀವನ ಮಿಷನ್ ಯೋಜನೆಯಡಿ ಕೈಗೆತ್ತಿಕೊಂಡಿರುವ ಕಾಮಗಾರಿಗಳು ಗುಣಮಟ್ಟದ್ದಾಗಿರುವಂತೆ ಹಾಗೂ ಮೂಲಸೌಕರ್ಯಗಳಿಗೆ ಧಕ್ಕೆಯಾಗದಂತೆ ಎಚ್ಚರ ವಹಿಸಿ, ತ್ವರಿತವಾಗಿ ಪೂರ್ಣಗೊಳಿಸಬೇಕು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ಕುಮಾರ್, ಮೇಯರ್ ಶಿವಕುಮಾರ್, ಶಾಸಕರಾದ ಬಿ.ವೈ.ವಿಜಯೇಂದ್ರ, ಎಚ್.ಎಸ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.