ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕೋವಿಡ್ (covid 19) ವೇಳೆ ಆಹಾರ ಕೊಡಿಸುವುದಾಗಿ ಹೇಳಿ ಕರೆದೊಯ್ದು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ನಾಲ್ವರಿಗೆ ಶಿಕ್ಷೆ ವಿಧಿಸಿ ಶಿವಮೊಗ್ಗದ 2ನೇ ಪೋಕ್ಸೋ (Pocso) ನ್ಯಾಯಾಲಯ ಆದೇಶಿಸಿದೆ.
ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕೆ ನಾಲ್ವರಿಗೆ 20 ವರ್ಷ ಜೈಲು ಶಿಕ್ಷೆ ಮತ್ತು ತಲಾ 1.15 ಲಕ್ಷ ರೂ. ದಂಡ ವಿಧಿಸಲಾಗಿದೆ. ಶಿವಮೊಗ್ಗದ ಮನೋಜ್, ಪ್ರಜ್ವಲ್, ವಿನಯ್ ಮತ್ತು ಸಂದೀಪ್ ಅವರಿಗೆ ಶಿಕ್ಷೆ ವಿಧಿಸಲಾಗಿದೆ. ಲೈಂಗಿಕ ದೌರ್ಜನ್ಯಕ್ಕೆ 20 ವರ್ಷ, ಅಪಹರಣಕ್ಕೆ ಮೂರು ವರ್ಷ ಮತ್ತು ಹೆದರಿಸಿದ್ದಕ್ಕೆ ಎರಡು ವರ್ಷ ಸೇರಿ ಒಟ್ಟು 25 ವರ್ಷಗಳ ಕಾಲ ಶಿಕ್ಷೆ ವಿಧಿಸಲಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ಶಿವಮೊಗ್ಗ ಬಂದ್ ಇತ್ತು. ಆ ವೇಳೆ ಸಂತ್ರಸ್ತೆಯ ತಾಯಿಯು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಹಣ್ಣು ಮತ್ತು ಆಹಾರ ಹುಡುಕಿಕೊಂಡು ಆಸ್ಪತ್ರೆಯ ಹೊರಗಡೆ ಬಂದಿದ್ದು, ಆ ವೇಳೆ ಊಟ ಕೊಡಿಸುವುದಾಗಿ ಓಮ್ನಿಯಲ್ಲಿ ಕರೆದೊಯ್ಯಲಾಗಿತ್ತು. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಒಟ್ಟು 4.60 ಲಕ್ಷ ರೂ. ದಂಡದ ಹಣದಲ್ಲಿ ನೊಂದ ಬಾಲಕಿಗೆ ಮೂರು ಲಕ್ಷ ಪರಿಹಾರ ಕೊಡಬೇಕು. ಸರ್ಕಾರಕ್ಕೆ 1.60 ಲಕ್ಷ ರೂ. ಸಲ್ಲಿಸಬೇಕು. ಜೊತೆಗೆ, ಸರ್ಕಾರದಿಂದ ಬಾಲಕಿಗೆ 4 ಲಕ್ಷ ರೂ. ಪರಿಹಾರ ಕೊಡಬೇಕೆಂದು ನ್ಯಾಯಾಲಯ ಆದೇಶಿಸಿದೆ. ಸರ್ಕಾರಿ ಅಭಿಯೋಜಕ ಎಸ್.ಹರಿಪ್ರಸಾದ್ ವಾದ ಮಂಡಿಸಿದ್ದರು.