ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಬಿಜೆಪಿಯ ಶಕ್ತಿ ಕೇಂದ್ರ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಕಾಂಗ್ರೆಸ್ ಐದನೇ ಗ್ಯಾರಂಟಿ ಯೋಜನೆಗೆ ಶುಕ್ರವಾರ ಚಾಲನೆ ನೀಡಲಾಯಿತು.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಇಲ್ಲಿನ ಫ್ರೀಡಂ ಪಾರ್ಕ್ ಆವರಣದಲ್ಲಿ ಆಯೋಜಿಸಿದ್ದ ಯುವನಿಧಿ ಯೋಜನೆಗೆ ಭತ್ತ ತುಂಬಿದ ಕೊಳಗದಲ್ಲಿ ಹೊಂಬಾಳೆ ಅನಾವರಣ ಮಾಡುವ ಮೂಲಕ ಚಾಲನೆ ನೀಡಿದ ಅವರು ರಾಷ್ಟ್ರೀಯ ಯುವದಿನದ ಅಂಗವಾಗಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಗೌರವ ಸಲ್ಲಿಸಿ ಮಾತನಾಡಿದರು.
ಹಸಿದವರಿಗೆ ಅನ್ನ ನೀಡದ ಸಮಾಜ ಮೇಲಿಲ್ಲ ನಂಬಿಕೆ
ಯಾವ ಸಮಾಜ ಹಸಿದವರಿಗೆ ಅನ್ನ ನೀಡುವದಿಲ್ಲವೋ ಅಂತಹ ಧರ್ಮದ ಮೇಲೆ ನಂಬಿಕೆ ಇಲ್ಲ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಅವರ ಜನ್ಮದಿನವಾದ ಇಂದು ಯುವಕ ಯುವತಿಯರು ಸಾಮಾಜಿಕ, ಆರ್ಥಿಕವಾಗಿ ಭ್ರಮನಿರಸವಾಗಬಾರದೆಂಬ ಮಹತ್ವಾಕಾಂಕ್ಷೆಯೊಂದಿಗೆ ಯುವನಿಧಿ ಕಾರ್ಯಕ್ರಮ ಮೂಲಕ ಶಕ್ತಿ ತುಂಬುವ ಕಾರ್ಯ ಪ್ರಾರಂಭಿಸಲಾಗಿದೆ. ಸಂವಿಧಾನದ ಆಶಯ, ಧ್ಯೇಯೋದ್ದೇಶಗಳನ್ನು ಸಾಕಾರಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
READ | ಶಿವಮೊಗ್ಗದಲ್ಲಿ ಮೂರು ಪ್ರಮುಖ ಪ್ರಶಸ್ತಿಗಳ ಘೋಷಣೆ, ಯಾರೆಲ್ಲ ಆಯ್ಕೆ?
1.50 ಕೋಟಿ ಕುಟುಂಬಗಳಿಗೆ ಧನಸಹಾಯ
ರಾಜ್ಯದಲ್ಲಿ ಸುಮಾರು 1.5 ಕೋಟಿ ಕುಟುಂಬಗಳು ಸರ್ಕಾರದಿಂದ ಪ್ರತಿ ತಿಂಗಳು ಸರಾಸರಿ 5 ರಿಂದ 6 ಸಾವಿರ ರೂ.ಧನ ಸಹಾಯ ಪಡೆಯುತ್ತಿವೆ. ಇದನ್ನು ಜಾಗತಿಕ ಮೂಲ ಆದಾಯ ಎಂದು ವಿದೇಶಗಳಲ್ಲಿ ಕರೆಯಲಾಗುತ್ತದೆ. ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ದೇಶದ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ. ಈ ವಿಚಾರಗಳಲ್ಲಿ ನಂಬಿಕೆಯಿಟ್ಟುಕೊಂಡು ಅಸಮಾನತೆ ನಿವಾರಿಸುವ ನಿಟ್ಟಿನಲ್ಲಿ ನಾವು ಪ್ರಯತ್ನಕ್ಕೆ ಕೈ ಹಾಕಿದ್ದೇವೆ. ಇಲ್ಲವಾದರೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದಂತೆ ಅಸಮಾನತೆಯಿಂದ ನರಳುವ ಜನ ಪ್ರಭುತ್ವದ ವಿರುದ್ಧ ದಂಗೆ ಏಳುತ್ತಾರೆ ಎಂದು ಎಚ್ಚರಿಸಿದ್ದರು. ನಮ್ಮ ಸರ್ಕಾರ ಎಚ್ಚರಿಕೆಯಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದೆ. ಸಂವಿಧಾನದ ಆಶಯ, ಧ್ಯೇಯೋದ್ದೇಶಗಳನ್ನು ಈಡೇರಿಸುವ ಕಾರ್ಯಕ್ಕೆ ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು.
ಪದವೀಧರರಿಗೆ 3000, ಡಿಪ್ಲೋಮಾ 1500
ಯುವನಿಧಿ ಕಾರ್ಯಕ್ರಮದ ಮೂಲಕ 2023 ರಲ್ಲಿ ಪದವಿ ಉತ್ತೀರ್ಣರಾದ ಅರ್ಹರಿಗೆ 3000, ಡಿಪ್ಲೋಮಾ ಉತ್ತೀರ್ಣರಾದವರಿಗೆ 1500 ರೂ. ಮಾಸಿಕ ನಿರುದ್ಯೋಗ ಭತ್ಯೆಯನ್ನು ನೀಡಲಾಗುವುದು ಎಂದರು.
ಇಂದು ಯುವನಿಧಿ ಮೂಲಕ ಭತ್ಯೆ ಜೊತೆಗೆ ಕೌಶಲ್ಯಾಭಿವೃದ್ಧಿ ತರಬೇತಿ ಹಾಗೂ ಉದ್ಯೋಗ ಮೇಳದ ಮೂಲಕ ಕೆಲಸ ಕೊಡಿಸುವ ಕಾರ್ಯವನ್ನೂ ಮಾಡುತ್ತೇವೆ. ನಿರುದ್ಯೋಗ ಸಮಸ್ಯೆ ನಿವಾರಿಸುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ. 2022-23 ರಲ್ಲಿ 3.96 ಲಕ್ಷ ವಿದ್ಯಾರ್ಥಿಗಳು ಪದವಿ ಹಾಗೂ 18 ಲಕ್ಷ ವಿದ್ಯಾರ್ಥಿಗಳು ಡಿಪ್ಲೋಮಾ ಉತ್ತೀರ್ಣರಾದ ವಿದ್ಯಾರ್ಥಿಗಳಿದ್ದಾರೆ. ಅವರೆಲ್ಲ ಈ ಯೋಜನೆಯಡಿ ನೋಂದಾಯಿಸಿಕೊಂಡು ಯುವನಿಧಿ ಸೌಲಭ್ಯ ಪಡೆಯಬೇಕು ಎಂದರು.
ಯಾವ ಗ್ಯಾರಂಟಿಯಿಂದ ಯಾರಿಗೆ ಪ್ರಯೋಜನ?
ಅಧಿಕಾರಕ್ಕೆ ಬಂದ ಕೂಡಲೇ ಜಾರಿಗೊಳಿಸಿದ ಶಕ್ತಿ ಯೋಜನೆಯಿಂದ ಕಳೆದ ಜೂನ್ 11 ರಿಂದ ಇಲ್ಲಿಯವರೆಗೆ 130.28 ಕೋಟಿ ರೂ.ವೆಚ್ಚದಲ್ಲಿ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡಿದ್ದಾರೆ. ಇದೊಂದು ಚಾರಿತ್ರಿಕ ಮಹತ್ವದ ಬೆಳವಣಿಗೆಯಾಗಿದೆ. ಗೃಹಜ್ಯೋತಿ ಯೋಜನೆ ಮೂಲಕ 1.65 ಕೋಟಿ ಕುಟುಂಬಗಳು ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿವೆ. ಗೃಹಲಕ್ಷ್ಮಿ ಕಾರ್ಯಕ್ರಮದಡಿ 1.18 ಕೋಟಿ ಕುಟುಂಬದ ಯಜಮಾನತಿಯರಿಗೆ ಪ್ರತಿ ತಿಂಗಳು ತಲಾ 2 ಸಾವಿರ ರೂ.ದೊರೆಯುತ್ತಿದೆ ಎಂದು ತಿಳಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಎಂ.ಸಿ.ಸುಧಾಕರ್, ಕೆ.ಜೆ.ಜಾರ್ಜ್, ಬಿ.ನಾಗೇಂದ್ರ, ಮಂಕಾಳ ಎಸ್.ವೈದ್ಯ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಬಿ.ಕೆ.ಸಂಗಮೇಶ, ಡಿ.ಜಿ.ಶಾಂತನಗೌಡ, ಶಾರದಾ ಪೂರ್ಯಾನಾಯಕ್, ಡಿ.ಎಸ್.ಅರುಣ್, ಟಿ.ಡಿ.ರಾಜೇಗೌಡ, ಜಿ.ಎಚ್.ಶ್ರೀನಿವಾಸ್, ಎಚ್.ಡಿ.ತಮ್ಮಯ್ಯ, ಭೀಮಣ್ಣನಾಯ್ಕ, ಸಂಸದ ಬಿ.ವೈ.ರಾಘವೇಂದ್ರ ಮತ್ತಿತರ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ, ಜಿಲ್ಲಾ ವರಿಷಾಧಿಕಾರಿಗಳು ವೇದಿಕೆಯಲ್ಲಿದ್ದರು.