ಸುದ್ದಿ ಕಣಜ.ಕಾಂ ಶಿವಮೊಗ್ಗ
00: ಮಲೆನಾಡಿಗರ ಬಹುವರ್ಷಗಳ ಕನಸು ನನಸಾಗುವ ಗಳಿಗೆ ಸನ್ನಿಹಿಸಿದೆ. ಶಿವಮೊಗ್ಗದಿಂದ ವಿಮಾನ ಸಂಚಾರ ಆರಂಭವಾಗಲಿದ್ದು, ಈ ಭಾಗದ ಪ್ರಗತಿಗೆ ಇನ್ನೊಂದು ಹೆಜ್ಜೆ ಇಡಲು ಮಲೆನಾಡು ಸಜ್ಜಾಗಿದೆ.
ಸಂಸದ ಬಿ.ವೈ.ರಾಘವೇಂದ್ರ ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಆಗಸ್ಟ್ 11ರಿಂದ ಹೊಸ ನಾಲ್ಕು ಮಾರ್ಗಗಳಲ್ಲಿ ವಿಮಾನ ಸಂಚರಿಸಲಿದೆ ಎಂದು ಮಾಹಿತಿ ನೀಡಿದರು.
ಯಾವ್ಯಾವ ಮಾರ್ಗಗಳಲ್ಲಿ ಸಂಚಾರ?
- ಹೈದರಾಬಾದ್- ಶಿವಮೊಗ್ಗ- ನ್ಯೂ ಗೋವಾ- ಶಿವಮೊಗ್ಗ-ತಿರುಪತಿ- ಶಿವಮೊಗ್ಗ- ಹೈದರಾಬಾದ್
- ಹೈದರಾಬಾದ್- ಶಿವಮೊಗ್ಗ- ನ್ಯೂ ದೆಹಲಿ- ಶಿವಮೊಗ್ಗ- ಚೆನ್ನೈ- ಶಿವಮೊಗ್ಗ- ಬೆಂಗಳೂರು- ಶಿವಮೊಗ್ಗ- ಹೈದರಾಬಾದ್
- ಹೈದರಾಬಾದ್- ಶಿವಮೊಗ್ಗ- ಹೈದರಾಬಾದ್
- ಬೆಂಗಳೂರು- ಸೇಲಂ- ಕೊಚ್ಚಿನ್- ಸೇಲಂ- ಬೆಂಗಳೂರು-ಶಿವಮೊಗ್ಗ- ಬೆಂಗಳೂರು
ಶಿವಮೊಗ್ಗದಿಂದ 11 ರೂಟ್’ಗಳಲ್ಲಿ ವಿಮಾನ ಸಂಚಾರ ಆರಂಭಿಸಬೇಕೆಂದು ವಿಮಾನಯಾನ ಸಚಿವಾಲಯಕ್ಕೆ ಮನವಿ ಮಾಡಲಾಗಿತ್ತು. ಅದಕ್ಕೆ ಸ್ಪಂದಿಸಿದ್ದು, ನಾಲ್ಕು ರೂಟ್ ಗಳಿಗೆ ಅನುಮತಿ ನೀಡಲಾಗಿದೆ.
READ | ಇಂದಿನಿಂದಲೇ ಕೆಲವು ರೈಲುಗಳ ಸಂಚಾರ ಸಮಯದಲ್ಲಿ ಬದಲಾವಣೆ, ಒಟ್ಟು 15 ರೈಲುಗಳ ಸಮಯ ಬದಲು, ಯಾವ್ಯಾವ ರೈಲಿಗೆ ಅನ್ವಯ?
ಉಡಾನ್ ಅಡಿ ವಿಮಾನ ಸಂಚಾರ
ಶಿವಮೊಗ್ಗ ವಿಮಾನ ನಿಲ್ದಾಣವು ಉಡಾನ್ 5.0 ಯೋಜನೆ ಅಡಿ ಒಳಪಡಲಿದ್ದು, ಇದರನ್ವಯವೇ ನಾಲ್ಕು ಮಾರ್ಗಗಳಿಗೆ ಅನುಮತಿ ನೀಡಲಾಗಿದೆ. ಪ್ರಸ್ತುತ ಫಿಕ್ಸ್ಡ್ ವಿಂಗ್ಸ್ ವಿಮಾನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
ನಾಲ್ಕು ಮಾರ್ಗಗಳಿಗೆ ವಿಮಾನ ಸಂಚಾರ ಆರಂಭಿಸುವಂತೆ ಬಿಡ್ ಕರೆಯಲಾಗಿದೆ. ಆಗಸ್ಟ್ ಅಂತ್ಯಕ್ಕೆ ಬಿಡ್ ನಲ್ಲಿ ಪಾಲ್ಗೊಳ್ಳುವ ಸಂಸ್ಥೆಗಳಿಗೆ ಅವಕಾಶ ಸಿಗಲಿದೆ. ಜತೆಗೆ, ಶಿವಮೊಗ್ಗದಲ್ಲಿ ವಿಮಾನಯಾನದ ಅವಶ್ಯಕತೆ, ಪ್ರವಾಸೋದ್ಯಮ ಇತ್ಯಾದಿ ವಿಚಾರಗಳ ಕುರಿತು ಗಮನ ಸೆಳೆಯುವುದಕ್ಕಾಗಿ ಶಿವಮೊಗ್ಗದಲ್ಲಿ ರೋಡ್ ಶೋ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದು ರಾಘವೇಂದ್ರ ತಿಳಿಸಿದರು.