ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದಲ್ಲಿ 4 ಸಾವಿರ ಆಟೋಗಳಿವೆ. ಆದರೆ, ನೋಂದಣಿಯಾದರೂ ಪರ್ಮಿಟ್ ಇಲ್ಲದೇ 1200 ಆಟೋಗಳು ಸಂಚರಿಸುತ್ತಿವೆ. ಅವೆಲ್ಲವುಗಳಿಗೂ ಪರ್ಮಿಟ್ ನೀಡುವ ವ್ಯವಸ್ಥೆ ಆಗಬೇಕೆಂದು ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷ ಡಾ.ಆರ್.ಸೆಲ್ವಮಣಿ (Dr.R.Selvamani) ಸೂಚಿಸಿದರು.
ಗುರುವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಆಟೋರಿಕ್ಷಾ ಪರವಾನಗಿ ನೀಡುವ ಕುರಿತು ಏರ್ಪಡಿಸಲಾಗಿದ್ದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಮಾತನಾಡಿ, ನಗರದಲ್ಲಿ ಕೇವಲ 304 ಅಲ್ಲ, ಸುಮಾರು 1200 ನೋಂದಾಯಿತ ಆಟೋಗಳಿದ್ದು ಅವುಗಳಿಗೆಲ್ಲ ಪರವಾನಗಿ ನೀಡಬೇಕು. ಶೋ ರೂಮಿನವರು ಆಟೋ ಖರೀದಿ ವೇಳೆ ಪರವಾನಗಿ ಕೊಡಿಸುತ್ತೇವೆಂದು 30 ರಿಂದ 40 ಸಾವಿರದವರೆಗೆ ಹಣ ವಸೂಲಿ ಮಾಡುತ್ತಿವೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಹಾಗೂ ಆಟೋ ಚಾಲನೆ ವ್ಯಾಪ್ತಿಯನ್ನು 20 ಕಿ.ಮೀ ವರೆಗೆ ವಿಸ್ತರಿಸಬೇಕೆಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ, “ಹೊಸದಾಗಿ ಖರೀದಿಸಿ ನೋಂದಣಿಯಾದ ಆಟೋರಿಕ್ಷಾಗಳಿಗೆ ಪರವಾನಿಗೆಯನ್ನು ನೀಡಬೇಕು” ಎಂದು ಸೂಚನೆ ನೀಡಿದರು.
ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಬಿ.ಶಂಕರಪ್ಪ ಮಾತನಾಡಿ, ನಗರದಲ್ಲಿ ಸುಮಾರು 4 ಸಾವಿರ ಆಟೋಗಳು ಚಾಲನೆಯಲ್ಲಿವೆ. ಸುಮಾರು 2 ಸಾವಿರ ಆಟೋಗಳ ನವೀಕರಣ ಬಾಕಿ ಇದೆ ಎಂದರು.
ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, “ಆನ್ಲೈನ್ನಲ್ಲಿ ಪರವಾನಗಿ ಬಾಕಿ ಕಡಿಮೆ ತೋರಿಸುತ್ತಿದ್ದು, ಈ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ಪರವಾನಗಿ ನೀಡಲಾಗುವುದು. ಪರವಾನಗಿ ಪಡೆಯದ ಆಟೋಗಳ ನೋಂದಣಿ ನಿಲ್ಲಿಸಬೇಕು” ಎಂದು ತಿಳಿಸಿದರು.
ಶಿವಮೊಗ್ಗ ನಗರದಲ್ಲಿ ಹೊಸದಾಗಿ ಆಟೋ ರಿಕ್ಷಾಗಳನ್ನು ಖರೀದಿಸಿ ನೋಂದಣಿ ಮಾಡಿಸಿಕೊಂಡವರಿಗೆ ಪರವಾನಿಗಿ ನೀಡಬೇಕು. ಹಾಗೂ ನವೀಕರಣಕ್ಕೆ ಅರ್ಹರಾದವರಿಗೆ ನವೀಕರಣ ಮಾಡಬೇಕು. ಆಟೋಗಳನ್ನು ಖರೀದಿಸಲೇ ಬೇಡಿ ಎಂದರೆ ತಪ್ಪಾಗುತ್ತದೆ. ಅದರ ಬದಲು ಪರ್ಯಾಯ ಮಾರ್ಗೋಪಾಯ ಕಂಡುಕೊಳ್ಳಬೇಕು.
– ಎಸ್.ಎನ್.ಚನ್ನಬಸಪ್ಪ, ಶಾಸಕ
ರೆಟ್ರೋ ಸ್ಟಿಕರ್’ಗೆ ₹2 ಸಾವಿರ
ಆಟೋ ಚಾಲಕರು ಮಾತನಾಡಿ ಆಟೋಗಳಿಗೆ ರೆಟ್ರೊ ಎಲೆಕ್ಟ್ರಿಕ್ ಸ್ಟಿಕ್ಕರ್ ಅಳವಡಿಕೆ ಮಾಡಬೇಕೆಂಬ ನಿಯಮವನ್ನು ತರಲಾಗಿದೆ. ಇದರಿಂದ ಚಾಲಕರಿಗೆ ₹2000 ವರೆಗೆ ಖರ್ಚು ಬರುತ್ತದೆ. ಹಾಗೂ ಎಫ್ಸಿ ವೇಳೆ ಇದರ ಬಿಲ್ಲನ್ನು ಕೇಳಲಾಗುವುದರಿಂದ ತೊಂದರೆ ಆಗುತ್ತಿದ್ದು, ಸ್ಟಿಕ್ಕರ್ ನಿಂದ ವಿನಾಯಿತಿ ಕೋರಿದರು.
ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ಸ್ಟಿಕ್ಕರ್ ಹಾಕಿಸುವುದು ಒಳ್ಳೆಯದು. ಸ್ಟಿಕ್ಕರ್ ಅಳವಡಿಕೆ ಕುರಿತಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆದೇಶದಲ್ಲಿನ ಗೊಂದಲದ ಬಗ್ಗೆ ಸಂಬಂಧಿಸಿದ ಆಯುಕ್ತರಿಗೆ ಪತ್ರ ಬರೆದು ಸ್ಪಷ್ಪನೆ ಪಡೆಯಲಾಗುವುದು. ಹಳೇ ಸ್ಟಿಕ್ಕರ್ ಇರುವವರು ಹೊಸದಾಗಿ ಹಾಕಿಸುವ ಅವಶ್ಯಕತೆ ಇಲ್ಲವೆಂದರು.
ಕೆಲವು ಆಟೋ ಚಾಲಕರು ಓಪನ್ ಪರ್ಮಿಟ್ ನೀಡಿ ವ್ಯಾಪ್ತಿಯನ್ನು 20 ಕಿ.ಮೀ ವರೆಗೆ ವಿಸ್ತರಿಸಬೇಕೆಂದರು. ಮತ್ತು ಹಲವರು ಈಗಾಗಲೇ ನಗರದಲ್ಲಿ ಆಟೋಗಳ ಸಂಖ್ಯೆ ಹೆಚ್ಚಿದ್ದು ಹೊಸ ಪರವಾನಗಿಯನ್ನು ನೀಡಬಾರದೆಂದು ಒತ್ತಾಯಿಸಿದರು.
ಜೋರಾಗಿ ಹಾರ್ನ್ ನಿಂದ ಶಬ್ದ ಮಾಲಿನ್ಯ
ನಾಗರೀಕ ಡಾ.ಶ್ರೀನಿವಾಸನ್ರವರು ಮಾತನಾಡಿ, ರೈಲ್ವೇ ನಿಲ್ದಾಣದಲ್ಲಿ ಆಟೋ ಪಾಥ್ ಇದ್ದರೂ ಅಲ್ಲಿ ನಿಲುಗಡೆ ಮಾಡುತ್ತಿಲ್ಲ. ಬದಲಾಗಿ ಒಂದೆಡೆ ಆಟೋಗಳನ್ನು ಗುಡ್ಡೆ ಹಾಕಿಕೊಳ್ಳುತ್ತಿರುವುದರಿಂದ ಸಾರ್ವಜನಿಕರ ಓಡಾಟಕ್ಕೆ ಕಷ್ಟವಾಗಿದೆ. ಹಾಗೂ ಬಸ್ಸು, ಲಾರಿ ಇತರೆ ವಾಹನಗಳು ಜೋರಾಗಿ ಹಾರ್ನ್ ಮಾಡುತ್ತಿರುವುದರಿಂದ ಕೆಲವು ರಸ್ತೆಗಳಲ್ಲಿ ಅತ್ಯಂತ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂದು ದೂರಿದರು.
ಮತೋರ್ವರು ಬೆಳಗ್ಗಿನ ಜಾವ 5 ರ ನಂತರ ಸಹ ಆಟೋದವರು ಒಂದೂವರೆ ಪಟ್ಟು ಚಾರ್ಜ್ ಮಾಡುತ್ತಿದ್ದಾರೆ. ಮೀಟರ್ ಹಾಕುವುದಿಲ್ಲವೆಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ, ಹೀಗೆ ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ಆಟೋ ನಿಲ್ಲಿಸಿದ ಚಾಲಕರಿಗೆ ಸರ್ಕಲ್ ಇನ್ಸ್ಪೆಕ್ಟರ್ ದಂಡ ವಿಧಿಸಬೇಕು. ಜೋರಾಗಿ ಹಾರ್ನ್ ಕಂಡುಬಂದಲ್ಲಿ ಪೊಲೀಸ್ ಠಾಣೆಯ ಸಂಖ್ಯೆಗೆ ಒಂದು ದೂರು ಸಲ್ಲಿಸಿದಲ್ಲಿ ಕ್ರಮ ವಹಿಸಲಾಗುವುದು. ಆಟೋಗಳಲ್ಲಿ ಮೀಟರ್ ಹಾಕಬೇಕು. ಹಾಗೂ ರಾತ್ರಿ 10 ರಿಂದ ಬೆಳಗ್ಗೆ 5 ರವರೆಗೆ ಮಾತ್ರ ಒಂದೂವರೆ ಚಾರ್ಜ್ ತೆಗೆದುಕೊಳ್ಳಬೇಕು. ನಂತರ ತೆಗೆದುಕೊಳ್ಳುವ ಹಾಗಿಲ್ಲ. ಈ ಸಮಯ ಮತ್ತು ದರದ ಕುರಿತು ರೈಲ್ವೆ ನಿಲ್ದಾಣದ ಬಳಿ ಸಾರ್ವಜನಿಕರ ಅನುಕೂಲಕ್ಕಾಗಿ ಒಂದು ಬೋರ್ಡ್ ಬರೆಸಿ ಹಾಕಿಸುವಂತೆ ತಿಳಿಸಿದರು.
ಸಭೆಯಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರಡ್ಡಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಬಿ.ಶಂಕ್ರಪ್ಪ, ಕೆಎಸ್ಆರ್.ಟಿಸಿ ಡಿಸಿ ವಿಜಯಕುಮಾರ್, ಸರ್ಕಲ್ ಇನ್ಸ್ ಪೆಕ್ಟರ್ ಸಂತೋಷ್ ಸೇರಿದಂತೆ ಅಧಿಕಾರಿಗಳು, ನಾಗರಿಕ ಹಿತರಕ್ಷಣಾ ವೇದಿಕೆಯ ವಸಂತಕುಮಾರ್, ಇತರೆ ಪದಾಧಿಕಾರಿಗಳು, ಆಟೋ ಚಾಲಕರ ಸಂಘದ ಪದಾಧಿಕಾರಿಗಳು, ಖಾಸಗಿ ಬಸ್ ಮಾಲೀಕರ ಸಂಘದವರು, ಇತರರು ಹಾಜರಿದ್ದರು.
Auto Rickshaw | ಶಿವಮೊಗ್ಗದಲ್ಲಿ ಆಟೋ ಚಾಲಕರಿಗೆ ಟಫ್ ರೂಲ್ಸ್, 7 ಪ್ರಮುಖ ಸೂಚನೆಗಳು ಇಲ್ಲಿವೆ