ಸುದ್ದಿ ಕಣಜ.ಕಾಂ ಭದ್ರಾವತಿ
BHADRAVATHI: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಅವರು ಭದ್ರಾವತಿಗೆ ಭೇಟಿ ನೀಡಿ ವಿಐಎಸ್ಎಲ್ (VISL) ಕಾರ್ಮಿಕರಿಗೆ ಭೇಟಿ ಮಾಡಿದರು. ಪ್ರಜಾಧ್ವನಿ ಸಮಾವೇಶಕ್ಕೂ ಮುನ್ನ ವಿಐಎಸ್ಎಲ್ ಕಾರ್ಮಿಕರ ಜತೆ ಚರ್ಚೆ ಮಾಡಿ ಅವರ ಅಳಲು ಆಲಿಸಿದರು.
ಈ ವೇಳೆ ಮಾತನಾಡಿದ ಅವರು, ‘ಬಿಜೆಪಿ ನಾಯಕರು ಕೊಟ್ಟ ಮಾತಿನಂತೆ ಕೇಂದ್ರ ಸರ್ಕಾರದಿಂದ ವಿಐಎಸ್ಎಲ್ ಕಾರ್ಖಾನೆಗೆ ಬಂಡವಾಳ ತಂದು ಪುನರಾರಂಭ ಮಾಡಲು ವಿಫಲರಾಗಿದ್ದಾರೆ. ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿದರೆ ಕೇವಲ ಅರ್ಧ ಗಂಟೆಯಲ್ಲಿ ತೀರ್ಮಾನ ಮಾಡಬಹುದು. ಆದರೆ, ಈ ಬಗ್ಗೆ ಡಬಲ್ ಇಂಜಿನ್ ಸರ್ಕಾರ ವಿಫಲವಾಗಿದೆ. ಹೀಗಾಗಿ ಬಿಜೆಪಿಯವರು ಈ ಜನರ ಮುಂದೆ ಬಂದು ಮತ ಕೇಳುವ ನೈತಿಕತೆ ಕಳೆದುಕೊಂಡಿದೆ’ ಎಂದು ಹರಿಹಾಯ್ದಿದ್ದಾರೆ.
ಈ ವಿಚಾರವಾಗಿ ದಿನನಿತ್ಯ ನನಗೆ ನೊಟೀಸ್ ನೀಡುತ್ತಿದ್ದಾರೆ. ನಿನ್ನೆ ನನ್ನ ಮಗಳ ಕಾಲೇಜಿಗೆ ಹೋಗಿ ನೋಟೀಸ್ ನೀಡಿದ್ದು, ವಿದ್ಯಾರ್ಥಿಗಳು ಕಟ್ಟಿರುವ ಶುಲ್ಕದ ವಿವರ ಕೇಳಿದ್ದಾರೆ. ಈ ಬಗ್ಗೆ ನಾನೇನು ಹೇಳಲಿ? ಈ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ ಅಂದರೆ ಅವರು ನನಗೆ ಹೇಗೆಲ್ಲಾ ಕಿರುಕುಳ ನೀಡುತ್ತಿದ್ದಾರೆ ನೀವೇ ಆಲೋಚಿಸಿ. ಇ.ಡಿ ಅಧಿಕಾರಿಗಳ ಮುಂದೆ ಎಲ್ಲ ಉತ್ತರ ನೀಡಿದ್ದೇನೆ. ನ್ಯಾಷನಲ್ ಹೆರಾಲ್ಡ್ ವಿಚಾರವಾಗಿ ಉತ್ತರ ನೀಡಿದ್ದೇನೆ. ಆದರೂ 22 ರಂದು ಇಡಿ ವಿಚಾರಣೆಗೆ ಹಾಜರಾಗಬೇಕು ಎಂದು ಹೇಳಿದ್ದಾರೆ. ನಾನು ಪ್ರಜಾಧ್ವನಿ ಯಾತ್ರೆ ಮಾಡಲೋ ವಿಚಾರಣೆಗೆ ಹಾಜರಾಗಲೋ? ಆಡಳಿತ ಪಕ್ಷದವರು ಎಷ್ಟು ಸಾವಿರ ಕೋಟಿ ಲೂಟಿ ಹೊಡೆದರೂ ಕೇಳುವುದಿಲ್ಲ. ಈ ವಿಚಾರಣೆ ಏನಿದ್ದರೂ ವಿರೋಧ ಪಕ್ಷಗಳ ನಾಯಕರಿಗೆ ಮಾತ್ರ ಸೀಮಿತ.
– ಡಿ.ಕೆ.ಶಿವಕುಮಾರ್, ಅಧ್ಯಕ್ಷ, ಕೆಪಿಸಿಸಿ
ಮಾಧ್ಯಮಗಳ ಜತೆ ಮಾತನಾಡಿ, ‘ನಾವು ಮಲೆನಾಡು ಭಾಗಕ್ಕೆ ಬಂದಿದ್ದು, ಶಿವಮೊಗ್ಗ, ಭದ್ರಾವತಿಯಲ್ಲಿ ಮಾತ್ರ ನಮ್ಮ ಪಕ್ಷದ ಶಾಸಕರಾಗಿದ್ದಾರೆ. ಕಳೆದ ಚುನಾವಣೆ ನಂತರ ತೀರ್ಥಹಳ್ಳಿಯ ಮಂಜುನಾಥ್ ಗೌಡ, ಸೊರಬದ ಮಧು ಬಂಗಾರಪ್ಪ ಅವರು ಕಾಂಗ್ರೆಸ್ ಸೇರಿದ್ದಾರೆ. ರಾಜ್ಯದಲ್ಲಿ ಬಿಜೆಪಿಯ ಡಬಲ್ ಇಂಜಿನ ಸರ್ಕಾರವಿದೆ. ಈ ಜಿಲ್ಲೆ ಬಹಳ ನಾಯಕರನ್ನು ನೀಡಿದೆ. ರಾಜ್ಯದ ಗೃಹ ಸಚಿವರು ಈ ಜಿಲ್ಲೆಯವರು ಎಂದರು.
READ | ಶಿವಮೊಗ್ಗಕ್ಕೆ ಬರಲಿದ್ದಾರೆ ಡಿಕೆ ಶಿವಕುಮಾರ್, ಯಾವ್ಯಾವ ಕಾರ್ಯಕ್ರಮಗಳಲ್ಲಿ ಭಾಗಿ?
ಕೇಂದ್ರ ಸರ್ಕಾರ ಬಂಡವಾಳ ಹೂಡಿಕೆಗೆ ಆದ್ಯತೆ ನೀಡಿಲ್ಲ
ಶಿವಮೊಗ್ಗ ಜಿಲ್ಲೆಯಲ್ಲಿ ರೈತರು, ಕಾರ್ಮಿಕರು, ವ್ಯಾಪಾರ ವರ್ಗದವರನ್ನು ನೆಮ್ಮದಿಯಾಗಿ ಬದುಕಲು ಬಿಡುತ್ತಿಲ್ಲ. ನಾನು ಈ ಹಿಂದೆ ಶಿವಮೊಗ್ಗಕ್ಕೆ ಬಂದಾಗ ಜಾಗತಿಕ ಬಂಡವಾಳ ಹೂಡಿಕೆಯಲ್ಲಿ ಶಿವಮೊಗ್ಗಕ್ಕೆ ಎಷ್ಟು ಕೋಟಿ ಬಂಡವಾಳ ಹೂಡಿಕೆಯಾಗಿದೆ ಎಂದು ಕೇಳಿದ್ದೆ. ಮೈಸೂರು ಮಹಾರಾಜರು ಕೊಟ್ಟ ವಿಐಎಸ್ಎಲ್ ಕಾರ್ಖಾನೆಯನ್ನು ಕೇಂದ್ರ ಸರ್ಕಾರ ಮುಚ್ಚಲು ಹೋದಾಗ, ಸಿದ್ದರಾಮಯ್ಯ ಅವರ ಸರ್ಕಾರವಿತ್ತು. ಆಗ ಸಂಗಮೇಶ್ ಅವರು ಮಾಜಿ ಶಾಸಕರಾಗಿದ್ದರೂ ಈ ಕಾರ್ಖಾನೆಗೆ ಗಣಿ ಜಾಗ ಮಂಜೂರು ಮಾಡಿಸಿದ್ದರು. ಕೇಂದ್ರ ಸರ್ಕಾರ ಈ ಕಾರ್ಖಾನೆಗೆ ಬಂಡವಾಳ ಹೂಡಿಕೆ ಮಾಡಿ ಮತ್ತೆ ಆರಂಭಕ್ಕೆ ಆದ್ಯತೆ ನೀಡಲಿಲ್ಲ. ಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪ ಅವರು 1 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡುವ ಭರವಸೆ ನೀಡಿದ್ದರು. ನಂತರ ಕೇಂದ್ರ ಸಚಿವರು ಬಂದು 6 ಸಾವಿರ ಕೋಟಿ ಬಂಡವಾಳ ಹೂಡಿಕೆ ನೀಡುವುದಾಗಿ ಹೇಳಿದ್ದರು. ಇದ್ಯಾವುದನ್ನು ಮಾಡಲಿಲ್ಲ. ಶಿವಮೊಗ್ಗ ಸಂಸದರೂ ಸೇರಿ ರಾಜ್ಯದಿಂದ 25 ಬಿಜೆಪಿ ಸಂಸದರಿದ್ದಾರೆ. ಆದರೂ ವಿಶ್ವೇಶ್ವರಯ್ಯ ಅವರ ಹೆಸರಿನಲ್ಲಿರುವ ಈ ಕಾರ್ಖಾನೆ ಉಳಿಸಲು ಪ್ರಯತ್ನಿಸುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಸ್ಥಾಪಿಸಿದ ಸಾರ್ವಜನಿಕ ಉದ್ದಿಮೆಗಳನ್ನು ಬಿಜೆಪಿ ಸರ್ಕಾರ ಖಾಸಗಿಯವರಿಗೆ ಮಾರುತ್ತಿದೆ. ಈಗ ಈ ಕಾರ್ಖಾನೆ ಮಾರಾಟ ಮಾಡಲು ಮುಂದಾಗಿದ್ದು, ಖರೀದಿ ಮಾಡಲು ಯಾರೂ ಬಂದಿಲ್ಲ ಎಂದು ಈಗ ಮುಚ್ಚಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಉಕ್ಕಿನ ಕಾರ್ಖಾನೆ ಹಾಗೂ ಕಾಗದ ಕಾರ್ಖಾನೆ ಎರಡು ಸರ್ಕಾರದ ಸ್ವಾಮ್ಯದಲ್ಲೇ ಮುಂದುವರಿಯಬೇಕು. ಅವುಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ಖಾಸಗಿಯವರಿಂದ ನಡೆಸಲಾಗುವ ಕಾರ್ಖಾನೆಯನ್ನು ಸರ್ಕಾರ ಯಾಕೆ ನಡೆಸಲು ಸಾಧ್ಯವಾಗುತ್ತಿಲ್ಲ? ಅಂದರೆ ನಿಮಗೆ ಆಡಳಿತ ನಡೆಸಲು ಆಗುತ್ತಿಲ್ಲ ಎಂಬುದು ಸಾಬೀತಾಗುತ್ತಿದೆ ಎಂದು ಟೀಕಿಸಿದರು.
ಕೋಮುಗಲಭೆಯಿಂದಾಗಿ ಬಂಡವಾಳ ಹೂಡಿಕೆದಾರರು ಮುಂದೆಬರುತ್ತಿಲ್ಲ
ಈ ಜಿಲ್ಲೆಯಲ್ಲಿ ಕೋಮುಗಲಭೆ ಮಾಡಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಬಿಜೆಪಿ ಸರ್ಕಾರ ಅಶಾಂತಿ ಮೂಡಿಸಿ, ಸಂಜೆ ಆರು ಗಂಟೆಗೆ ಎಲ್ಲ ಅಂಗಡಿ ಮುಂಗಟ್ಟು ಮುಚ್ಚಿಸುತ್ತಿದ್ದಾರೆ. ಹೀಗಾಗಿ ಇಲ್ಲಿ ಬಂಡವಾಳ ಹೂಡಿಕೆ ಮಾಡಲು ಯಾರು ಮುಂದೆ ಬರುತ್ತಿಲ್ಲ. ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಎಷ್ಟು ಬಂಡವಾಳ ಹೂಡಿಕೆಯಾಗಿದೆ, ಎಷ್ಟು ಯೋಜನೆ ಜಾರಿಯಾಗಿವೆ ಎಂದು ಯಡಿಯೂರಪ್ಪ, ಸಂಸದ ರಾಘವೇಂದ್ರ ಹಾಗೂ ಈಶ್ವರಪ್ಪ ಅವರು ಉತ್ತರಿಸಬೇಕು. ಇಲ್ಲಿನ ಗೃಹ ಸಚಿವರ ಹೇಳಿಕೆಗಳು, ಅವರ ಹಗರಣಗಳನ್ನು ಹೇಳುತ್ತಿದ್ದರೆ ಅದರ ಬಗ್ಗೆಯೇ ದೊಡ್ಡ ಚರ್ಚೆ ಮಾಡಬಹುದು ಎಂದರು.
ಮಲೆನಾಡಿನ ಪ್ರಮುಖ ಬೆಳೆಯಾದ ಅಡಿಕೆಗೆ ಭವಿಷ್ಯವಿಲ್ಲ, ಅದನ್ನು ಬೆಳೆಯುವುದು ಬಿಡಿ ಎನ್ನುತ್ತಿದ್ದಾರೆ. ಅವರು ರಾಜಕಾರಣ ಮಾಡುವುದನ್ನು ಬಿಡಲಿ, ಅಧಿಕಾರ ಯಾಕೆ ಬೇಕು? ಕೇಂದ್ರ ಸರ್ಕಾರ ವಿದೇಶಗಳಿಂದ ಅಡಿಕೆ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದರೆ ಸಾಕು. ಮಲೆನಾಡು ಮಾತ್ರವಲ್ಲ ರಾಜ್ಯದ ಬೇರೆ ಕಡೆಗಳಲ್ಲೂ ಬೆಳೆಯುತ್ತಿದ್ದಾರೆ. ಈ ಸರ್ಕಾರ ರೈತರಿಗೆ ಬೆಂಬಲ ಬೆಲೆ ನೀಡಲಿಲ್ಲ, ಕೊಟ್ಟ ಮಾತನ್ನೂ ಉಳಿಸಿಕೊಳ್ಳಲಿಲ್ಲ ಎಂದು ಆರೋಪಿಸಿದರು.
READ | ಶಿವಮೊಗ್ಗ ಜಿಲ್ಲೆಯ ನಾಲ್ಕು ಪಂಚಾಯಿತಿಗಳಲ್ಲಿ ಬೈಎಲೆಕ್ಷನ್, ಇಲ್ಲಿದೆ ವೇಳಾಪಟ್ಟಿ
ಪಕ್ಷದ ಟಿಕೆಟ್ ವಿಚಾರವಾಗಿ ಈಗಾಗಲೇ ಎರಡು ಸಭೆ ಮಾಡಿದ್ದೇವೆ. ಇನ್ನು ಸ್ಕ್ರೀನಿಂಗ್ ಕಮಿಟಿ ಸಭೆ ನಡೆಯಬೇಕು. ನಮ್ಮ ಪಕ್ಷದ ಪ್ರಕ್ರಿಯೆ ಮೂಲಕ ಟಿಕೆಟ್ ತೀರ್ಮಾನ ಮಾಡಲಾಗುವುದು. ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆ ಘೋಷಣೆ ಮಾಡಿದ್ದೇವೆ. ಆ ಮೂಲಕ ವರ್ಷಕ್ಕೆ 42 ಸಾವಿರದಂತೆ ಐದು ವರ್ಷಕ್ಕೆ 2 ಲಕ್ಷ ರೂಪಾಯಿಯಷ್ಟು ಪ್ರತಿ ಕುಟುಂಬದ ವೆಚ್ಚವನ್ನು ಉಳಿತಾಯವಾಗುವಂತೆ ಮಾಡುತ್ತಿದ್ದೇವೆ.
ಪ್ರಜಾಧ್ವನಿ ಸಮಾವೇಶದಲ್ಲಿ ಕೇಂದ್ರದ ಮಾಜಿ ಸಚಿವ ಕೆ ಎಚ್ ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ಶಾಸಕರಾದ ಸಂಗಮೇಶ್, ಮಾಜಿ ಸಚಿವರಾದ ಮೋಟಮ್ಮ, ಎಚ್ ಎಂ ರೇವಣ್ಣ, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್, ಡಿಸಿಸಿ ಅಧ್ಯಕ್ಷ ಸುಂದರೇಶ್ ಮತ್ತಿತರರು ಭಾಗವಹಿಸಿದ್ದರು.