ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಗೋಪಾಳ ಬಡಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪ ಅವರ ಹೆಸರಿನಲ್ಲಿ ನಿರ್ಮಿಸಲಾಗಿದ್ದ ಬಸ್ ತಂಗುತಾಣದ ಹೆಸರನ್ನು ತೆರವುಗೊಳಿಸಿ ಸ್ಮಾರ್ಟ್ ಸಿಟಿ (Shimoga Smart City) ಎಂದು ನಾಮಪಲಕ ಅಳವಡಿಸಿ ರಾಜ್ಯದ ಹಿರಿಯ ನಾಯಕರಿಗೆ ಅಗೌರವ ತೋರಿಸಿದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್ಸಾಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸ್ಮಾರ್ಟ್ ಸಿಟಿ ಯೋಜನೆ, ಮೆಗ್ಗಾನ್ ಆಸ್ಪತ್ರೆ, ಪ್ರವಾಸೋದ್ಯಮ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ವಿದ್ಯುತ್ ಹಾಗೂ ಗ್ರಾಮೀಣ ಕುಡಿವ ನೀರು ಸರಬರಾಜು ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂಬಂಧ ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡಗೆ ಸೂಚಿಸಿದರು.
ಕಾಮಗಾರಿ ಪರಿಶೀಲನೆಗೆ ಸೂಚನೆ
ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಳ್ಳಲಾಗಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ತರಹದ ಆಕ್ಷೇಪಣೆ ಇದ್ದು ಸದರಿ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಿ, ಗುಣಮಟ್ಟ ಸರಿಯಾಗಿದ್ದಲ್ಲಿ ಮಾತ್ರ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
READ | | ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿಯ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿವೆ ತಿಳಿಯಲೇಬೇಕಾದ 8 ಅಂಶಗಳು
ಮಹಾನಗರ ಪಾಲಿಕೆ ಆವರಣದಲ್ಲಿ ಅನುಮತಿ ಇಲ್ಲದೆ ಕೈಕೊಳ್ಳಲಾಗಿರುವ ಕಾಮಗಾರಿ ಹಾಗೂ ನಗರದ ವಿವಿಧ ಬಡಾವಣೆಗಳಲ್ಲಿ ಅವೈಜ್ಞಾನಿಕವಾಗಿ ಬ್ಲಾಕ್ಗಳನ್ನು ಅಳವಡಿಸಿರುವ ಕಾಮಗಾರಿಗಳು, ಇನ್ನೂ ಕೆಲವು ಸ್ಥಳಗಳಲ್ಲಿ ಅವಶ್ಯಕತೆಗಿಂತ ಹೆಚ್ಚಿನ ಹಣ ವಿನಿಯೋಗ ಮಾಡಿರುವುದು ಕಂಡು ಬಂದಿದೆ. ಅವೈಜ್ಞಾನಿಕವಾಗಿ ಮಾಡಲಾಗಿರುವ ಪುಟ್ಬಾತ್ ಕಾಮಗಾರಿಯಿಂದಾಗಿ ಮಳೆನೀರು ನಿಂತು ಜನಸಾಮಾನ್ಯರಿಗೆ, ಪಾದಚಾರಿಗಳಿಗೆ, ವಾಹನ ಚಾಲಕರಿಗೆ ತೀವ್ರ ತರಹದ ಅಡಚಣೆ ಉಂಟಾಗುತ್ತಿದೆ. ಸ್ಟೇಡಿಯಂ ಸುತ್ತಲೂ ನಿರ್ಮಾಣಗೊಂಡಿರುವ ವಾಕಿಂಗ್ ಪಾಥ್ ಕಾಮಗಾರಿ ಅವೈಜ್ಞಾನಿಕವಾಗಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ದೂರುಗಳಿವೆ ಎಂದರು.
ಇಂತಹ ಅನೇಕ ಯೋಜನೆಗಳ ಅನುಷ್ಠಾನದಿಂದಾಗಿ ಯೋಜನೆಯ ಆರಂಭದಿಂದ ಮುಕ್ತಾಯ ಹಂತದವರೆಗೂ ಜನ ಕಿರಿಕಿರಿ ಅನುಭವಿಸುತ್ತಿರುವುದು ಬೇಸರದ ಸಂಗತಿಯಾಗಿದೆ. ಸದರಿ ವಿಷಯವನ್ನು ತಾವು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಯ ನಂತರ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದಲ್ಲಿ ಕೈಗೊಂಡ ಎಲ್ಲ ಕಾಮಗಾರಿಗಳ ಕುರಿತು ವಿವರವಾದ ಮಾಹಿತಿಯನ್ನು ಕೂಡಲೇ ಸಲ್ಲಿಸಿ.
– ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ
ಮುದ್ದಣ್ಣನಕೆರೆ ಮಣ್ಣು ಅಕ್ರಮ ಸಾಗಣೆ: ವಿವರಣೆ ಕೊಡಿ
ಜಿಲ್ಲಾಧಿಕಾರಿ ಡಾ.ಆರ್.ಸಲ್ವಮಣಿ ಮಾತನಾಡಿ, ಕೆಲವು ಕಾಮಗಾರಿಗಳ ಅನುಷ್ಠಾನದಲ್ಲಿ ಅಧಿಕಾರಿಗಳ ನಡುವೆ ಪರಸ್ಪರ ಸಮನ್ವಯತೆ ಇಲ್ಲದೆ ನ್ಯೂನ್ಯತೆಗಳಾಗಿವೆ. ನಗರದ ಹೊರವಲಯದಲ್ಲಿರುವ ಮುದ್ದಣ್ಣನಕೆರೆಯ ಮಣ್ಣನ್ನು ಅಕ್ರಮವಾಗಿ ಸಾಗಾಣಿಕೆ ಮಾಡಿದ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿದ ಅವರು ಆಡಳಿತ ವ್ಯವಸ್ಥೆಯಲ್ಲಿ ತಲೆತೂರಿಸುವ ವ್ಯಕ್ತಿಗಳು ಹಾಗೂ ಅದರಲ್ಲಿ ಶಾಮಿಲಾಗಿರುವ ವ್ಯಕ್ತಿಗಳ ವರ್ತನೆಯನ್ನು ಸಹಿಸಿಕೊಳ್ಳಲಾಗುವುದಿಲ್ಲ ಎಂದು ಹೇಳಿದರು..
ರಾಜ್ಯದಲ್ಲಿ ಬರ ಘೋಷಣೆಯಾಗಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗಸೂಚಿ ಅನ್ವಯ ಸಮೀಕ್ಷೆ ನಡೆಸಿ ಪರಿಹಾರ ಕಾರ್ಯ ಕೈಗೊಳ್ಳಲಾಗುವುದು. ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳದಂತೆ ಸಕಾಲಿಕ ಹಾಗೂ ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಗ್ರಾಮೀಣ ಕುಡಿಯುವ ನೀರು ಮತ್ತು ರೈತರಿಗೆ ಅನುಕೂಲವಾಗುವಂತೆ ವಿದ್ಯುತ್ ಇಲಾಖೆಯ ಅಭಿಯಂತರರು ನಿರಂತರವಾಗಿ ವಿದ್ಯುತ್ ಸರಬರಾಜು ಮಾಡಲು ಕ್ರಮ ಕೈಗೊಳ್ಳುವಂತೆ ಸಚಿವರು ಮೆಸ್ಕಾಂ ಅಧೀಕ್ಷಕರಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಕೋಟಿಪುರ, ಗುಡವಿ, ಬಳ್ಳಿಗಾವಿ ಸೇರಿದಂತೆ ಅನೇಕ ಪ್ರವಾಸಿ ತಾಣಗಳ ಅಭಿವೃದ್ಧಿಗೆ ವಿಪುಲ ಅವಕಾಶಗಳಿದ್ದು, ಈ ಸಂಬಂಧ ವಿಸ್ತೃತ ವರದಿಯನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಧರ್ಮಪ್ಪ ಅವರಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಸೋಲಾರ್ ಪಾರ್ಕ್
ಜಿಲ್ಲೆಯಲ್ಲಿ ಸೋಲಾರ್ ಪಾರ್ಕ್ ಸ್ಥಾಪಿಸಲು ಅಗತ್ಯವಾಗಿರುವ ಭೂಮಿಯನ್ನು ಸೂಕ್ತ ಸ್ಥಳದಲ್ಲಿ ಒದಗಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Hindu Mahasabha | ಹಿಂದೂ ಮಹಾಸಭಾ ಗಣೇಶನ ಈ ಸಲದ ಥೀಮ್ ಏನು? ವೈರಲ್ ಆಯ್ತು ವಿಡಿಯೋ