ಸುದ್ದಿ ಕಣಜ.ಕಾಂ ಬೆಂಗಳೂರು
BENGALURU: ಶಿವಮೊಗ್ಗ ವಿಮಾನ ನಿಲ್ದಾಣ ( shimoga airport operation) ಆಗಸ್ಟ್ 11ರಿಂದ ಕಾರ್ಯಾಚರಣೆಗೊಳ್ಳುವ ಸಾಧ್ಯತೆ ಇದ್ದು, ಇದಕ್ಕೆ ಮುಂಚಿತವಾಗಿ ಜುಲೈ 20ರೊಳಗೆ ಬೇಕಿರುವ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಬೃಹತ್ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ (MB Patil) ಹೇಳಿದರು.
READ | ತುಂಗಾ ಎಡದಂಡೆ, ಬಲದಂಡೆ ನಾಲೆಗಳಿಗೆ ನೀರು ಹರಿಸಲು ದಿನಾಂಕ ನಿಗದಿ
ರಾಜ್ಯದ ಹೊಸ ವಿಮಾನ ನಿಲ್ದಾಣಗಳ ಕಾಮಗಾರಿ ಪ್ರಗತಿ ಮತ್ತಿತರ ವಿಷಯಗಳ ಬಗ್ಗೆ ಸಭೆ ನಡೆಸಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ ಸಂದರ್ಭದಲ್ಲಿ ಅವರು, ರಾಜ್ಯ ಸರ್ಕಾರದಿಂದ ಕಾರ್ಯಾಚರಣೆ ಮತ್ತು ನಿರ್ವಹಣೆಗೊಳ್ಳಲಿರುವ ಮೊದಲ ಏರ್ ಪೋರ್ಟ್ ಶಿವಮೊಗ್ಗದ್ದಾಗಿದೆ ಎಂದರು.
ಜು.20ರೊಳಗೆ ನೇಮಕಾತಿ
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಂಬುಲೆನ್ಸ್ ಮತ್ತು ಇತರೆ ಅಗತ್ಯ ವಾಹನಗಳನ್ನು ನಿಯೋಜಿಸುವ ಕೆಲಸ ಆಗಬೇಕಾಗಿದೆ. ಕಾಫಿ ಕೆಫೆ ಆರಂಭಿಸುವ ಸಂಬಂಧದ ಕೆಲಸವೂ ಆಗಬೇಕಿದೆ. ಜೊತೆಗೆ, ಕೆಲವು ತಾಂತ್ರಿಕ ಮತ್ತು ತಾಂತ್ರಿಕೇತರ ಸಿಬ್ಬಂದಿ ನೇಮಕ ನಡೆಯಬೇಕಿದೆ. ಇವೆಲ್ಲವನ್ನೂ ಜುಲೈ 20ರ ಹೊತ್ತಿಗೆ ಪೂರೈಸಿ ವಿಮಾನ ನಿಲ್ದಾಣವನ್ನು ಕಾರ್ಯಾಚರಣೆಗೆ ಸಜ್ಜುಗೊಳಿಸಲಾಗುವುದು ಎಂದು ವಿವರಿಸಿದರು.
ರಾಜ್ಯ ಸರ್ಕಾರ ನಿರ್ವಹಣೆಯ ಮೊದಲ ವಿಮಾನ ನಿಲ್ದಾಣ
ಕೇಂದ್ರ ನಾಗರಿಕ ವಿಮಾನ ನಿರ್ದೇಶನಾಲಯವು ಇಲ್ಲಿನ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಎಸ್ಐಐಡಿಸಿ) ವಹಿಸಿದೆ. ಇದರೊಂದಿಗೆ ಶಿವಮೊಗ್ಗ ನಿಲ್ದಾಣವು ರಾಜ್ಯ ಸರ್ಕಾರದ ಸಂಸ್ಥೆಯ ವತಿಯಿಂದ ನಡೆಯಲಿರುವ ಕರ್ನಾಟಕದ ಮೊದಲನೇ ವಿಮಾನ ನಿಲ್ದಾಣವಾಗಲಿದೆ ಎಂದು ಪಾಟೀಲ ಹೇಳಿದರು.
ಆ.11ರಂದು ನಿಲ್ದಾಣ ಕಾರ್ಯಾರಂಭಗೊಳಲಿದ್ದು, ಅಂದು ಮೊದಲ ವಿಮಾನ ಹಾರಾಟ ನಡೆಸಲಿದೆ. ಈ ಐತಿಹಾಸಿಕ ಸನ್ನಿವೇಶಕ್ಕೆ ಸಾಕ್ಷಿಯಾಗಲು ಜಿಲ್ಲೆಯ ರಾಜಕೀಯ ಮುಖಂಡರು ಮತ್ತು ಜನಪ್ರತಿನಿಧಿಗಳೂ ಪಾಲ್ಗೊಳ್ಳಲಿದ್ದಾರೆ. ಎಲ್ಲಾ ಯೋಜನೆಯಂತೆ ನಡೆದರೆ ಆ.11ರಂದು ಬೆಂಗಳೂರಿನಿಂದ ಹೊರಡುವ ವಿಮಾನವು ಶಿವಮೊಗ್ಗ ನಿಲ್ದಾಣದಲ್ಲಿ ಇಳಿಯಲಿದೆ ಎಂದರು.
ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಗೌರವ ಗುಪ್ತ, ಕೆಎಸ್ಐಐಡಿಸಿ ವ್ಮವಸ್ಥಾಪಕ ನಿರ್ದೇಶಕ ಎಂ.ಆರ್.ರವಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ್ ಈ ಸಂದರ್ಭದಲ್ಲಿ ಇದ್ದರು.